IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ವೈಭವ್ ಸೂರ್ಯವಂಶಿ (Vaibhav Sooryavanshi) ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದು ಕೂಡ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಎಂಬುದು ವಿಶೇಷ. ಹೀಗೆ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ವೈಭವ್ ಬರೆದ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…
ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ 15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಸಿಎಸ್ಕೆ ವಿರುದ್ಧ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ವೈಭವ್ ಇದೀಗ ಆರ್ಸಿಬಿ ವಿರುದ್ಧ ಕೂಡ 15 ಎಸೆತಗಳಲ್ಲೇ ಅರ್ಧಶತಕ ಪೂರೈಸಿ ಈ ದಾಖಲೆ ನಿರ್ಮಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಪವರ್ಪ್ಲೇನಲ್ಲಿ ಅತ್ಯಧಿಕ ಬಾರಿ ಅರ್ಧಶತಕ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ವೈಭವ್ ಈವರೆಗೆ 3 ಬಾರಿ ಪವರ್ಪ್ಲೇನಲ್ಲೇ ಹಾಫ್ ಸೆಂಚುರಿ ಸಿಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಕೂಡ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ವೈಭವ್ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸೀಸನ್ನಲ್ಲಿ ಸಿಎಸ್ಕೆ ವಿರುದ್ಧ 15 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದ ವೈಭವ್, ಈಗ ಆರ್ಸಿಬಿ ವಿರುದ್ಧ ಅದನ್ನು ಪುನರಾವರ್ತಿಸಿದ್ದಾರೆ. ಈ ಮೂಲಕ ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಎರಡು ಬಾರಿ 15 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.




