ಬೆಂಗಳೂರು, (ಜೂನ್ 11): ಒಂದು ಸರ್ಕಾರ ಅಧಿಕಾರದಿಂದ ನಿರ್ಗಮಿಸುವ ಅಥವಾ ನಾಯಕತ್ವ ಬದಲಾವಣೆಯಾಗುವ ಸಂಕ್ರಮಣ ಕಾಲದಲ್ಲಿ ಅತ್ಯಂತ ತರಾತುರಿಯಲ್ಲಿ ಕೈಗೊಳ್ಳುವ ನಿರ್ಧಾರಗಳು ಯಾವಾಗಲೂ ಅನುಮಾನದ ಕಣ್ಣೋಟಕ್ಕೆ ಗುರಿಯಾಗುತ್ತವೆ. ಹೌದು..ಹಿಂದುಳಿದ ವರ್ಗಗಳ ಅನುದಾನ (Karnataka Backward Classes fund) ಹಂಚಿಕೆಯಲ್ಲೂ ಬೇಧ ಭಾವ ತಾರತಮ್ಯ ಎಸಗಿದ ಮತ್ತೊಂದು ಮುಖ ಹೊರ ಬಿದ್ದಿದೆ. ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಪ್ರಮಾಣವಚನಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ಆರ್ಥಿಕ ಇಲಾಖೆಯ ಮೂಲಕ 155 ವಿವಿಧ ಸಂಸ್ಥೆಗಳಿಗೆ 71.85 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿರುವುದು ಚರ್ಚೆ ಹುಟ್ಟುಹಾಕಿದೆ. ಅಹಿಂದ ವರ್ಗದ ಅಗ್ರಗಣ್ಯ ನಾಯಕ ಎಂದೇ ಕರೆಯಿಸಿಕೊಳ್ಳುವ ಸಿದ್ದರಾಮಯ್ಯ ಸಮಸಮಾಜದ ಮಾತುಗಳನ್ನಾಡುತ್ತಾರೆ. ಹೋದಲ್ಲಿ ಬಂದಲ್ಲಿ ಎಲ್ಲ ವೇದಿಕೆಯಲ್ಲಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಕನಸು ಬಿತ್ತುತ್ತಾರೆ. ಆದರೆ ಅವರು ಬಿತ್ತುತ್ತಿರುವ ಕನಸನ್ನು ಅವರೇ ಸಾಕಾರಗೊಳಿಸುವಲ್ಲಿ ಎಡವಿದರೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ಅನುದಾನ ಹಂಚಿಕೆಯಲ್ಲೂ ಬೇಧ ಭಾವ
2026-27ನೇ ಸಾಲಿನ ಬಜೆಟ್ನಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನಗಳ ನಿರ್ಮಾಣಕ್ಕಾಗಿ 136 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಇದು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಾವಿರಕ್ಕೂ ಹೆಚ್ಚು ಜಾತಿಗಳಿಗೆ ತಲುಪಬೇಕಾದ ಹಕ್ಕು. ಆದರೆ ವಾಸ್ತವದಲ್ಲಿ ನಡೆದಿರುವುದು ಬೇರೆಯೇ. ಬಜೆಟ್ನಲ್ಲಿ ಮೀಸಲಿಟ್ಟ ಹಣದ ಬರೋಬ್ಬರಿ ಶೇ57ರಷ್ಟು ಪಾಲನ್ನು ಕೇವಲ 3-4 ಸಮುದಾಯಗಳಿಗೆ ಸೀಮಿತಗೊಳಿಸಿರುವುದು ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆದಿರುವ ದೊಡ್ಡ ಎಡವಟ್ಟು.
ಇದನ್ನೂ ನೋಡಿ: ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್, ಸರ್ಕಾರಕ್ಕೆ ಎಷ್ಟು ಉಳಿತಾಯ ಗೊತ್ತಾ?
ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ಗೆ 50 ಲಕ್ಷ ರೂಪಾಯಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆದೇಶದಲ್ಲಿ ಮಂಜೂರಾದ 155 ಸಂಸ್ಥೆಗಳ ಪೈಕಿ 89 ಸಂಸ್ಥೆಗಳು ಕುರುಬ ಸಮುದಾಯಕ್ಕೆ ಸೇರಿರುವುದು ಇಲಾಖೆಯ ತಾರತಮ್ಯ ನೀತಿಗೆ ಹಿಡಿದ ಕನ್ನಡಿಯಾಗಿದೆ. ಇನ್ನು ಟಿ. ನರಸೀಪುರದಂತಹ ಒಂದೇ ತಾಲೂಕಿಗೆ 13 ಸಮುದಾಯ ಭವನಗಳನ್ನು ಮಂಜೂರು ಮಾಡಲಾಗಿದೆ. ಗದಗದಲ್ಲಿರುವ ನಿರ್ದಿಷ್ಟ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ಗೆ 50 ಲಕ್ಷ ರೂಪಾಯಿಗಳ ಅನುದಾನ ನೀಡಿರುವುದು ಈ ಹಂಚಿಕೆಯ ಹಿಂದೆ ಕಲ್ಯಾಣದ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ‘ರಾಜಕೀಯ ಪ್ರೇರಿತ ಕೃಪೆ’ಯಿದೆಯೋ ಎಂಬ ಸಂಶಯವನ್ನು ಬಲಪಡಿಸುತ್ತದೆ.
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸಾವಿರಕ್ಕೂ ಹೆಚ್ಚು ಜಾತಿಗಳಿವೆ. ಕೇವಲ ಪ್ರವರ್ಗ-1ರ ಅಡಿಯಲ್ಲೇ 147 ಜಾತಿಗಳಿರುವಾಗ, ಉಳಿದ ಸಮುದಾಯಗಳ ಪಾಡೇನು? ಮಡಿವಾಳ, ಸವಿತಾ ಸಮಾಜ, ಹೆಳವ ಸೇರಿದಂತೆ ಅನೇಕ ಸಮುದಾಯಗಳು ತಮ್ಮ ಅಸ್ತಿತ್ವ ಮತ್ತು ಅಭಿವೃದ್ಧಿಗಾಗಿ ಹೋರಾಡುತ್ತಿವೆ. ಇವುಗಳಿಗೆ ಸಿಗಬೇಕಾದ ಹಕ್ಕುಗಳು ನಿರ್ದಿಷ್ಟ ಸಮುದಾಯಗಳ ಪಾಲಾಗುತ್ತಿದ್ದರೆ, ಈಡಿಗ, ಕುಂಬಾರ ಸೇರಿದಂತೆ ಅನೇಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ಅಭಿವೃದ್ದಿಗೆ ಗಮನ ನೀಡಬೇಕಿದೆ. ಹಿಂದುಳಿದ ವರ್ಗಗಳ ಇಲಾಖೆ ತಾನೇ ರಚಿಸಿಕೊಂಡ ‘ಸಾಮಾಜಿಕ ನ್ಯಾಯದ ತತ್ವ’ಕ್ಕೆ ತಾನೇ ಅಪಚಾರವೆಸಗಿದಂತಲ್ಲವೇ? ಹೀಗಾಗಿ ಎಲ್ಲಾ ಸಮುದಾಯಗಳನ್ನ ಸಮಾನವಾಗಿ ಕಾಣಬೇಕು. ಆದೇಶವನ್ನ ಮರು ಪರಿಶೀಲನೆ ಮಾಡಬೇಕು ಎಂದು ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠದ ಪ್ರಣವಾನಂದಸ್ವಾಮೀಜಿ ಒತ್ತಾಯಿಸಿದ್ದಾರೆ.
ಸರಕಾರದ ಅನುದಾನ ಹಂಚಿಕೆಯು ಅರ್ಹತೆ ಮತ್ತು ಅಗತ್ಯತೆಯನ್ನು ಆಧರಿಸಿರಬೇಕೇ ಹೊರತು, ಪ್ರಭಾವ ಮತ್ತು ಜಾತಿಯ ಬಲವನ್ನು ಆಧರಿಸಿರಬಾರದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಇನ್ನು ಮುಂದೆ ಕೇವಲ ಒಂದು ಸಮುದಾಯದ “ಖಜಾನೆ”ಯಾಗದೆ, ಹೆಸರಿನಲ್ಲಿರುವಂತೆ ನಿಜಕ್ಕೂ ಹಿಂದುಳಿದ ಸಮುದಾಯಗಳ ಏಳಿಗೆಗೆ ಕೆಲಸ ಮಾಡಲಿದೆಯೇ? ಅಥವಾ ರಾಜಕೀಯ ಅಧಿಕಾರದ ಆಟಕ್ಕೆ ಇಲಾಖೆಯ ಬಜೆಟ್ ಬಳಕೆ ಆಗುತ್ತದೆಯೇ..? ಈ ತರಾತುರಿಯ ಆದೇಶಗಳ ಹಿಂದಿರುವ ಅಂತರಂಗವನ್ನ ಸರ್ಕಾರವೇ ಬಹಿರಂಗಪಡಿಸಬೇಕಿದೆ.