ಒಂದೇ ಸಿನಿಮಾ ಮಾಡಿದ ನಿರ್ದೇಶಕನಿಗೆ ಚಾನ್ಸ್ ಕೊಟ್ಟ ರಜನಿಕಾಂತ್-ಕಮಲ್ – Kannada News

ಸೂಪರ್ ಸ್ಟಾರ್ ರಜನಿಕಾಂತ್ ಅವರ (Rajinikanth) ಮುಂದಿನ ಬಹುನಿರೀಕ್ಷಿತ ಚಿತ್ರ ‘ತಲೈವರ್ 173’ ನಿರ್ದೇಶಕರು ಯಾರು ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಸಿನಿರಂಗದಲ್ಲಿ ಭಾರಿ ಚರ್ಚೆ ಆಗಿತ್ತು. ಹಲವು ದೊಡ್ಡ ನಿರ್ದೇಶಕರ ಹೆಸರುಗಳು ಈ ಪ್ರಾಜೆಕ್ಟ್ ಜೊತೆ ಕೇಳಿಬರುತ್ತಿದ್ದವು. ಆದರೆ, ಈಗ ಈ ಎಲ್ಲಾ ಚರ್ಚೆ ಮತ್ತು ಸಸ್ಪೆನ್ಸ್‌ಗಳಿಗೆ ಚಿತ್ರತಂಡ ಅಧಿಕೃತವಾಗಿ ತೆರೆ ಎಳೆದಿದ್ದು, ಚಿತ್ರದ ಹೊಸ ಸಾರಥಿಯನ್ನು ಅದ್ಧೂರಿಯಾಗಿ ಪರಿಚಯಿಸಿದೆ.

ರಜನಿಕಾಂತ್ ಅವರ 173ನೇ ಸಿನಿಮಾವನ್ನು ಕಮಲ್ ಹಾಸನ್ ಅವರು ‘ರಾಜ್ ಕಮಲ್ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಯುವ ಹಾಗೂ ಪ್ರತಿಭಾವಂತ ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರು ನಿರ್ದೇಶನ ಮಾಡಲಿದ್ದಾರೆ ಎಂಬ ವಿಷಯ ಈಗ ಬಹಿರಂಗವಾಗಿದೆ. ಈ ಹಿಂದೆ ‘ಓ ಮೈ ಕಡವಲೆ’ ಹೆಸರಿನ ಹಿಟ್ ಸಿನಿಮಾ ನೀಡಿದ್ದ ಅಶ್ವಥ್ ಮಾರಿಮುತ್ತು, ಈಗ ರಜನಿಕಾಂತ್-ಕಮಲ್ ಹಾಸನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಸುವರ್ಣ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

‘ರಾಜ್ ಕಮಲ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಒಂದು ವಿಶೇಷ ವಿಡಿಯೋ ಗುಟ್ಟನ್ನು ರಟ್ಟು ಮಾಡಿದೆ. ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರ ಜನ್ಮದಿನದ ಅಂಗವಾಗಿ ಚಿತ್ರತಂಡ ವಿಶೇಷ ಬರ್ತ್‌ಡೇ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ವಿಡಿಯೋವನ್ನು ಈ ಹಿಂದೆ ಬಿಡುಗಡೆಯಾಗಿದ್ದ ‘ತಲೈವರ್ 173’ ಚಿತ್ರದ ಪ್ರಮೋ ಶೈಲಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಇದು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಚಿತ್ರದ ಚುಕ್ಕಾಣಿ ಹಿಡಿದಿರುವುದು ಅಶ್ವಥ್ ಅವರೇ ಎಂಬುದು ಅಭಿಮಾನಿಗಳಿಗೆ ಖಾತ್ರಿಯಾಗಿದೆ.

ಇದನ್ನೂ ಓದಿ: ಜೈಲರ್ 2: ರಜನಿಕಾಂತ್ ಸಿನಿಮಾದಲ್ಲಿ ಶಾರುಖ್ ಖಾನ್ ಬದಲು ಹೃತಿಕ್ ರೋಷನ್ ನಟನೆ?

ಈ ಹಿಂದೆ ಈ ಚಿತ್ರಕ್ಕೆ ಸಿ. ಸುಂದರ್ ನಿರ್ದೇಶನ ಮಾಡಬೇಕಿತ್ತು. ಅವರು ಸಿನಿಮಾದಿಂದ ಹೊರ ಹೋಗಿದ್ದಾರೆ. ಆದರೆ ಈಗ ನಡೆದಿರುವ ಈ ಬದಲಾವಣೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ತಲೈವರ್ ಹೊಸ ಅವತಾರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಈಗ ಪ್ರೇಕ್ಷಕರಲ್ಲಿ ಮನೆಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *