ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿಗೆ ಕೂದಲು ಬಿಳಿಯಾಗುವುದು (Premature Gray Hair) ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಕೇವಲ ವಯಸ್ಸಿನ ಪ್ರಭಾವ ಎಂದು ಭಾವಿಸುವುದು ಸರಿಯಲ್ಲ. ಒತ್ತಡ, ಪೌಷ್ಟಿಕಾಂಶದ ಕೊರತೆ, ಅನುವಂಶೀಯ ಕಾರಣಗಳು ಸೇರಿದಂತೆ ಹಲವು ಅಂಶಗಳು ಇದಕ್ಕೆ ಕಾರಣವಾಗಬಹುದು. ಹಾಗಾದರೆ ಮಾನಸಿಕ ಒತ್ತಡದಿಂದ (Stress) ನಿಜವಾಗಿಯೂ ಕೂದಲು ಬೇಗ ಬಿಳಿಯಾಗುತ್ತದೆಯೇ, ಇದರ ಹೊರತಾಗಿ ಕೂದಲು ಬಿಳಿಯಾಗುವುದಕ್ಕೆ ಕಾರಣಗಳೇನು ಮತ್ತು ಯಾವಾಗ ವೈದ್ಯರ ಸಲಹೆ ತೆಗೆದುಕೊಳ್ಳಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಒತ್ತಡದ ನಿಜವಾಗಿಯೂ ಕೂದಲನ್ನು ಬಿಳಿಯಾಗಿಸುತ್ತದೆಯೇ?
ಕೆಲವು ಅಧ್ಯಯನಗಳ ಪ್ರಕಾರ, ನಿರಂತರ ಮಾನಸಿಕ ಒತ್ತಡವು ಕೂದಲಿಗೆ ಬಣ್ಣ ನೀಡುವ ಮೆಲನೋಸೈಟ್ ಕೋಶಗಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆಲನಿನ್ ಉತ್ಪಾದನೆ ಕಡಿಮೆಯಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುವ ಸಾಧ್ಯತೆ ಹೆಚ್ಚಾಗಬಹುದು. ಆದರೆ ಎಲ್ಲರಲ್ಲೂ ಒತ್ತಡ ಒಂದೇ ಕಾರಣ ಎಂದು ಹೇಳಲಾಗುವುದಿಲ್ಲ.
ಕೂದಲು ಬೇಗ ಬಿಳಿಯಾಗುವುದಕ್ಕೆ ಮೊತ್ತೊಂದಿಷ್ಟು ಕಾರಣಗಳು;
- ಅನುವಂಶೀಯ (ಜೆನೆಟಿಕ್) ಕಾರಣಗಳು
- ವಿಟಮಿನ್ ಬಿ12, ಕಬ್ಬಿಣ, ಫೋಲೇಟ್ ಕೊರತೆ
- ಥೈರಾಯ್ಡ್ ಸಮಸ್ಯೆಗಳು
- ಕೆಲವು ಆಟೋಇಮ್ಯೂನ್ ಕಾಯಿಲೆಗಳು
- ಧೂಮಪಾನ ಮತ್ತು ಅನಾರೋಗ್ಯಕರ ಜೀವನಶೈಲಿ
ಇದನ್ನೂ ಓದಿ: ಪದೇ ಪದೇ ತಲೆಸುತ್ತು ಬರುತ್ತಿದೆಯೇ? ಇದು ವಿಟಮಿನ್ ಕೊರತೆಯ ಲಕ್ಷಣವಾಗಿರಬಹುದು!
ಕೂದಲ ಆರೋಗ್ಯ ಕಾಪಾಡುವುದು ಹೇಗೆ?
ಸಾಮಾನ್ಯವಾಗಿ ಕೂದಲು ಆರೋಗ್ಯವಾಗಿರಲು ಸಮತೋಲಿತ ಆಹಾರ ಸೇವಿಸಿ. ಹಸಿರು ತರಕಾರಿ, ಹಣ್ಣು, ಪ್ರೋಟೀನ್ ಹಾಗೂ ಅಗತ್ಯ ವಿಟಮಿನ್‌ಗಳಿರುವ ಆಹಾರವನ್ನು ಸೇರಿಸಿಕೊಳ್ಳಿ. ಪ್ರತಿದಿನ ಸಮರ್ಪಕ ನಿದ್ರೆ ಪಡೆಯಿರಿ. ಯೋಗ, ಧ್ಯಾನ ಹಾಗೂ ನಿಯಮಿತ ವ್ಯಾಯಾಮದ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಧೂಮಪಾನದಿಂದ ದೂರವಿರಿ ಮತ್ತು ಕೂದಲಿಗೆ ಅತಿಯಾದ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ.
ಕಡಿಮೆ ವಯಸ್ಸಿನಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಬಿಳಿಯಾಗುತ್ತಿದ್ದರೆ ಅಥವಾ ಕೂದಲು ಉದುರುವುದು, ಆಯಾಸ, ಇತರ ಆರೋಗ್ಯ ಸಮಸ್ಯೆಗಳೂ ಕಾಣಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ಗಮನಿಸಿ: ಈ ಲೇಖನವು ಸಾಮಾನ್ಯ ಆರೋಗ್ಯ ಮಾಹಿತಿಗಾಗಿ ಮಾತ್ರ. ನಿರಂತರವಾಗಿ ಕೂದಲು ಬಿಳಿಯಾಗುತ್ತಿದ್ದರೆ ಅಥವಾ ಇತರ ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯಿರಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ