ಕಾನೂನು ಸಚಿವ ಹೆಚ್.ಕೆ.ಪಾಟೀಲ್Image Credit source: tv9 kannada
ಬೆಂಗಳೂರು, ಏಪ್ರಿಲ್ 30: ಇತ್ತೀಚೆಗೆ ರಾಜ್ಯ ಸರ್ಕಾರ ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಆದೇಶ ಹೊಡಿಸಿತ್ತು. ಆದರೆ ಏಪ್ರಿಲ್ 27ರಂದು ಮಾಡಲಾಗಿದ್ದ ಆದೇಶವನ್ನು ಹಿಂಪಡೆಯಲು ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪರಿಷ್ಕೃತ ಮಾದರಿಯಲ್ಲಿ ರೋಸ್ಟರ್ ಜಾರಿ ಮಾಡಲು ನಿರ್ಧರಿಸಲಾಗಿದ್ದು, ಸಮಾಜಕಲ್ಯಾಣ ಇಲಾಖೆ ಪರಿಷ್ಕೃತ ಆದೇಶವನ್ನು ಹೊರಡಿಸಲಿದೆ.
ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಯೋಜನೆ ಬಗ್ಗೆ ಚರ್ಚೆ
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಆರೋಗ್ಯ ವಲಯದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ರಾಷ್ಟ್ರೀಯ ಉಚಿತ ರೋಗ ಪತ್ತೆ’ ಯೋಜನೆಯಡಿ 6 ಎಂಆರ್ಐ (MRI) ಯಂತ್ರಗಳನ್ನು ಖರೀದಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಾರಿಗೆ ಸಂಪರ್ಕವನ್ನು ಬಲಪಡಿಸುವ ದೃಷ್ಟಿಯಿಂದ ಹೈದರಾಬಾದ್-ಬೆಂಗಳೂರು ಹೈಸ್ಪೀಡ್ ರೈಲು ಯೋಜನೆಯ ಕುರಿತು ಚರ್ಚೆ ನಡೆಸಲಾಗಿದ್ದು, ಈ ಯೋಜನೆಯಡಿ ಕರ್ನಾಟಕದಲ್ಲಿ ಒಟ್ಟು 15 ರೈಲು ನಿಲ್ದಾಣಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ, ಬೀದರ್-ಬೆಂಗಳೂರು ಹಾಗೂ ಕಲಬುರಗಿ-ಬೆಂಗಳೂರು ನಡುವಿನ ವಿಮಾನಯಾನ ಸೇವೆಗಳ ನಿರ್ವಹಣೆಗೆ ಉತ್ತೇಜನ ನೀಡುವ ಸಲುವಾಗಿ, ವಾರ್ಷಿಕ 28.7 ಕೋಟಿ ರೂ. ಪ್ರೋತ್ಸಾಹಧನ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.
ಇದನ್ನೂ ಓದಿ: ಬೆಂಗಳೂರು ಮಳೆ ಅಬ್ಬರ: ಅವಾಂತರಗಳ ಬೆನ್ನಲ್ಲೇ ಅಗತ್ಯ ಕ್ರಮಕ್ಕೆ ಮುಂದಾದ ಜಿಬಿಎ
ಅಲ್ಲದೆ, ಸಾಮಾಜಿಕ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಕಾಮಗಾರಿಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಿನ ಎರಡು ವರ್ಷಗಳಿಗೆ 600 ಕೋಟಿ ರೂ ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಜತೆಗೆ, ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 20 ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಬಿಡದಿ ಟೌನ್ಶಿಪ್ ಯೋಜನೆಗೆ ಹಸಿರು ನಿಶಾನೆ
ರಾಜ್ಯದಲ್ಲಿ ಜಿಬಿಎ ಬಿಡದಿ ಟೌನ್ಶಿಪ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಈ ಬೃಹತ್ ಯೋಜನೆಗಾಗಿ 18,133 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ 9 ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 7,481 ಎಕರೆ 21.08 ಗುಂಟೆ ಪ್ರದೇಶವನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ಜಮೀನು ಕಳೆದುಕೊಳ್ಳುವ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ಅನುಕೂಲ ಕಲ್ಪಿಸಲು ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಲು ನಿರ್ಧರಿಸಲಾಗಿದ್ದು, ಪ್ರತಿ ಎಕರೆಗೆ 9,600 ಚದರ ಅಡಿ ಭೂಮಿಯನ್ನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಅಲ್ಲದೆ, ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ವಿವಿಧ ಲೇಖನ ಸಾಮಗ್ರಿ ಹಾಗೂ ಶಾಲಾ ಪುಸ್ತಕಗಳನ್ನು ಒಳಗೊಂಡಿರುವ ಸುಮಾರು 8,600 ರೂ. ಮೌಲ್ಯದ ಕಿಟ್‌ಗಳನ್ನು ವಿತರಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಉದ್ದೇಶಿತ ಯೋಜನೆಗಾಗಿ 115.84 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕಿಟ್‌ಗಳನ್ನು ವಿತರಿಸಲು ಸರ್ಕಾರ ಅನುಮೋದನೆ ನೀಡಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಬಿಳಿಜೋಳವನ್ನು ಖರೀದಿಸಲು ಸರ್ಕಾರ ನಿರ್ಧರಿಸಿದ್ದು, ಈ ಖರೀದಿ ಪ್ರಕ್ರಿಯೆಗೆ ಅತ್ಯಗತ್ಯವಾಗಿರುವ ಗೋಣಿ ಚೀಲಗಳನ್ನು ಖರೀದಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಉದ್ದೇಶಕ್ಕಾಗಿ 21.35 ಕೋಟಿ ರೂ.ಗಳ ಮೊತ್ತವನ್ನು ವ್ಯಯಿಸಿ ಗೋಣಿ ಚೀಲಗಳನ್ನು ಖರೀದಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.
ಸೌಜನ್ಯ ಪ್ರಕರಣ: ಸುಪ್ರೀಂಕೋರ್ಟ್ ಮಾಹಿತಿ ಕೇಳಿದರೆ ನೀಡಲು ಸಿದ್ಧ
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿವರಣೆ ಸುಪ್ರೀಂಕೋರ್ಟ್ ಕೇಳಿದರೆ ಕೊಡುತ್ತೇವೆ. ಮರುತನಿಖೆ ವಿಚಾರವಾಗಿ ಸುಪ್ರೀಂಕೋರ್ಟ್ಗೆ ಸೌಜನ್ಯ ಅವರ ತಾಯಿ ಕುಸುಮಾವತಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಪ್ರಕರಣದ ಕುರಿತಾದ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸಿಬಿಐ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಬೆನ್ನಲ್ಲೇ ಸರ್ಕಾರ ಅಲರ್ಟ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
ಆಂಧ್ರಪ್ರದೇಶದ ತಿರುಮಲದಲ್ಲಿರುವ ರಾಜ್ಯ ಸರ್ಕಾರಿ ಛತ್ರದ ನಿರ್ವಹಣೆಯ ಕುರಿತು ಮಹತ್ವದ ಬದಲಾವಣೆ ತರಲಾಗಿದ್ದು, ಇದುವರೆಗೂ ಕಂದಾಯ ಇಲಾಖೆಯ ಸುಪರ್ದಿಯಲ್ಲಿದ್ದ ಛತ್ರದ ನಿರ್ವಹಣೆಯನ್ನು ಇನ್ನು ಮುಂದೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ವಹಿಸಲು ನಿರ್ಧರಿಸಲಾಗಿದೆ.
80 ಹೊಸ ನಗರ ಸಾರಿಗೆ ಬಸ್ ಖರೀದಿಗೆ ಅನುಮೋದನೆ
ಸಾರಿಗೆ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 80 ಹೊಸ ನಗರ ಸಾರಿಗೆ ಬಸ್ಗಳನ್ನು ಖರೀದಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಬಸ್ಗಳನ್ನು ಖರೀದಿಸಲು ಸುಮಾರು 32 ಕೋಟಿ ರೂ ಅಂದಾಜು ವೆಚ್ಚವನ್ನು ನಿಗದಿಪಡಿಸಲಾಗಿದೆ. ಇನ್ನು, ರಾಜ್ಯ ಶಿಕ್ಷಣ ನೀತಿ ಆಯೋಗ ಸಲ್ಲಿಸಿರುವ ಅಂತಿಮ ವರದಿಯ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆಯಾದರೂ, ಈ ಬಗ್ಗೆ ಯಾವುದೇ ಅಂತಿಮ ನಿರ್ಣಯವನ್ನು ಕೈಗೊಂಡಿಲ್ಲ. ಹೆಚ್ಚಿನ ಮಾಹಿತಿಗಳೊಂದಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.