ಇಂಗ್ಲೆಂಡ್ನ ಅತ್ಯಂತ ಜನಪ್ರಿಯ ಕ್ರಿಕೆಟ್ ಟೂರ್ನಮೆಂಟ್ ‘ದಿ ಹಂಡ್ರೆಡ್‘ ಇಂದಿನಿಂದ (ಜುಲೈ 21) ಶುರುವಾಗಲಿದೆ. 8 ತಂಡಗಳ ನಡುವಣ ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಐಪಿಎಲ್ (IPL) ಫ್ರಾಂಚೈಸಿಗಳು ಹೂಡಿಕೆ ಮಾಡಿದ್ದು, ಇದರಿಂದ ತಂಡಗಳ ಹೆಸರು ಮತ್ತು ಜೆರ್ಸಿಗಳು ಸಂಪೂರ್ಣ ಬದಲಾಗಿವೆ.
ಇನ್ನು ‘ದಿ ಹಂಡ್ರೆಡ್’ ಕ್ರಿಕೆಟ್ ಲೀಗ್ ಸಾಂಪ್ರದಾಯಿಕ ಟಿ20 ಕ್ರಿಕೆಟ್ಗಿಂತ ಸಂಪೂರ್ಣ ಭಿನ್ನವಾಗಿದ್ದು, ಪಂದ್ಯವನ್ನು ಕೇವಲ 2.5 ಗಂಟೆಗಳಲ್ಲಿ ಮುಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಲೀಗ್ನ ಪ್ರಮುಖ ನಿಯಮಗಳು ಇಲ್ಲಿವೆ.
ಓವರ್ಗಳ ಬದಲು ಎಸೆತಗಳ ಲೆಕ್ಕಾಚಾರ:
- ಇಡೀ ಪಂದ್ಯದಲ್ಲಿ ಒಂದು ಇನ್ನಿಂಗ್ಸ್ಗೆ ಕೇವಲ 100 ಎಸೆತಗಳು ಮಾತ್ರ ಇರುತ್ತವೆ.
- ಕ್ರಿಕೆಟ್ನ ಸಾಂಪ್ರದಾಯಿಕ ‘ಓವರ್’ (6 ಎಸೆತಗಳು) ನಿಯಮ ಇಲ್ಲಿಲ್ಲ. ಅದರ ಬದಲಿಗೆ ‘ಫೈವ್ಸ್’ ಇರುತ್ತದೆ. ಅಂದರೆ ಓವರ್ಗೆ 5 ಎಸೆತಗಳು ಮಾತ್ರ.
- ಅಂಪೈರ್ ಪ್ರತಿ 5 ಎಸೆತಗಳಿಗೊಮ್ಮೆ ಬಿಳಿ ಬಣ್ಣದ ಕಾರ್ಡ್ ತೋರಿಸಿ ಸಿಗ್ನಲ್ ನೀಡುತ್ತಾರೆ.
ಬೌಲಿಂಗ್ ನಿಯಮಗಳು:
- ಒಬ್ಬ ಬೌಲರ್ ಸತತವಾಗಿ 5 ಅಥವಾ 10 ಎಸೆತಗಳನ್ನು ಒಟ್ಟಿಗೆ ಬೌಲ್ ಮಾಡಬಹುದು. ಇದನ್ನು ನಾಯಕ ಪರಿಸ್ಥಿತಿಗೆ ತಕ್ಕಂತೆ ನಿರ್ಧರಿಸುತ್ತಾನೆ.
- ಒಬ್ಬ ಬೌಲರ್ ಇಡೀ ಪಂದ್ಯದಲ್ಲಿ ಗರಿಷ್ಠ 20 ಎಸೆತಗಳನ್ನು ಮಾತ್ರ ಎಸೆಯಬಹುದು.
- ಪ್ರತಿ 10 ಎಸೆತಗಳ ನಂತರ ಬೌಲಿಂಗ್ ಮಾಡುವ ದಿಕ್ಕನ್ನು ಬದಲಾಯಿಸಲಾಗುತ್ತದೆ. ಅಂದರೆ ಕ್ರೀಸ್ನ ಇನ್ನೊಂದು ತುದಿಯಿಂದ ಬೌಲಿಂಗ್ ಆರಂಭವಾಗುತ್ತದೆ.
ಪವರ್ಪ್ಲೇ ಮತ್ತು ಫೀಲ್ಡಿಂಗ್ ನಿಯಮಗಳು:
- ಇನ್ನಿಂಗ್ಸ್ನ ಮೊದಲ 25 ಎಸೆತಗಳು ಪವರ್ಪ್ಲೇ ಆಗಿರುತ್ತವೆ.
- ಪವರ್ಪ್ಲೇ ಸಮಯದಲ್ಲಿ 30-ಯಾರ್ಡ್ ವೃತ್ತದ ಹೊರಗೆ ಕೇವಲ ಇಬ್ಬರು ಫೀಲ್ಡರ್ಗಳನ್ನು ಮಾತ್ರ ನಿಲ್ಲಿಸಬಹುದು.
- ಪವರ್ಪ್ಲೇ ಮುಗಿದ ನಂತರ ಗರಿಷ್ಠ 4 ಫೀಲ್ಡರ್ಗಳನ್ನು ವೃತ್ತದ ಹೊರಗೆ ನಿಲ್ಲಿಸಲು ಅವಕಾಶವಿರುತ್ತದೆ.
ಟೈಮ್ಔಟ್ ಮತ್ತು ಪೆನಾಲ್ಟಿ ನಿಯಮಗಳು:
- ಪ್ರತಿ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ 2 ನಿಮಿಷಗಳ ಸ್ಟ್ರಾಟಜಿಕ್ ಟೈಮ್ಔಟ್ ತೆಗೆದುಕೊಳ್ಳುವ ಹಕ್ಕಿರುತ್ತದೆ.
- ಬೌಲಿಂಗ್ ತಂಡವು ನಿಗದಿತ ಸಮಯದೊಳಗೆ 100 ಎಸೆತಗಳನ್ನು ಪೂರ್ಣಗೊಳಿಸದಿದ್ದರೆ ಪೆನಾಲ್ಟಿ ವಿಧಿಸಲಾಗುತ್ತದೆ.
- ಪಂದ್ಯದ ಕೊನೆಯಲ್ಲಿ ಸಮಯ ಮೀರಿದ ಎಸೆತಗಳಿಗೆ 30-ಯಾರ್ಡ್ ವೃತ್ತದ ಹೊರಗಿರುವ ಒಬ್ಬ ಫೀಲ್ಡರ್ನನ್ನು ಒಳಗೆ
- ತರಬೇಕಾಗುತ್ತದೆ. ಅಂದರೆ ಕೇವಲ 3 ಫೀಲ್ಡರ್ಗಳು ಹೊರಗಿರುತ್ತಾರೆ.
ಬ್ಯಾಟಿಂಗ್ ಮತ್ತು ರನ್ ನಿಯಮಗಳು:
- ಬ್ಯಾಟರ್ ಕ್ಯಾಚ್ ನೀಡಿ ಔಟ್ ಆಗುವಾಗ ಕ್ರಾಸ್ ಆಗಿದ್ದರೂ ಸಹ, ಹೊಸ ಬ್ಯಾಟರ್ ಕ್ರೀಸ್ನ ಸ್ಟ್ರೈಕಿಂಗ್ ಎಂಡ್ಗೇ ಬರಬೇಕು.
- ಪಂದ್ಯ ‘ಟೈ’ ಆದಾಗ ಲೀಗ್ ಹಂತದಲ್ಲಿ ತಲಾ 1 ಅಂಕವನ್ನು ಹಂಚಲಾಗುತ್ತದೆ. ಆದರೆ ನಾಕೌಟ್ ಪಂದ್ಯಗಳಲ್ಲಿ (ಎಲಿಮಿನೇಟರ್ ಮತ್ತು ಫೈನಲ್) ಟೈ ಆದಾಗ ವಿಜೇತರನ್ನು ನಿರ್ಧರಿಸಲು ‘ಸೂಪರ್ ಫೈವ್’ (5 ಎಸೆತಗಳ ಓವರ್) ಆಡಿಸಲಾಗುತ್ತದೆ.
ನೋ-ಬಾಲ್ ಮತ್ತು ಫ್ರೀ-ಹಿಟ್ ನಿಯಮ:
- ಬೌಲರ್ ಯಾವುದೇ ರೀತಿಯ ನೋ-ಬಾಲ್ (ಗೆರೆ ದಾಟುವುದು ಅಥವಾ ಹೈಟ್ ನೋ-ಬಾಲ್) ಎಸೆದರೆ ಬ್ಯಾಟಿಂಗ್ ತಂಡಕ್ಕೆ 2 ರನ್ ಬೋನಸ್ ಸಿಗುತ್ತದೆ.
- ನೋ-ಬಾಲ್ ಎಸೆತಗಳ ಮುಂದಿನ ಬಾಲ್ ‘ಫ್ರೀ ಹಿಟ್’ ಆಗಿರುತ್ತದೆ.
ಕೌಂಟ್ಡೌನ್ ಕ್ಲಾಕ್:
- ಮೈದಾನದಲ್ಲಿ ದೊಡ್ಡದಾದ ಕೌಂಟ್ಡೌನ್ ಗಡಿಯಾರ ಇರುತ್ತದೆ. ಬೌಲರ್ ಒಂದು ಎಸೆತ ಮುಗಿಸಿ, ಮುಂದಿನ ಎಸೆತವನ್ನು ಹಾಕಲು ನಿಗದಿತ ಸೆಕೆಂಡ್ಗಳ ಒಳಗೆ ಸಿದ್ಧರಾಗಬೇಕು.
- ಬ್ಯಾಟರ್ ಕೂಡ ತಡ ಮಾಡುವಂತಿಲ್ಲ. ಇದು ಆಟದ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ರೈನ್ ರೂಲ್ಸ್:
- ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಸಾಂಪ್ರದಾಯಿಕ ಕ್ರಿಕೆಟ್ನಂತೆ DLS ನಿಯಮದ ಆಧಾರದ ಮೇಲೆ ರನ್ ಲೆಕ್ಕ ಹಾಕಲ್ಲ. ಬದಲಿಗೆ ‘ಇಷ್ಟು ಎಸೆತಗಳಲ್ಲಿ ಇಷ್ಟು ರನ್ ಹೊಡೆಯಬೇಕು’ ಎಂಬ ಹೊಸ ಮಾದರಿಯ ನಿಯಮವನ್ನು ಬಳಸಲಾಗುತ್ತದೆ.
ಬದಲಿ ಆಟಗಾರನಿಗೆ ಅವಕಾಶ:
- ಪಂದ್ಯದ ವೇಳೆ ಯಾವುದೇ ಆಟಗಾರನಿಗೆ ತೀವ್ರ ಗಾಯವಾದರೆ, ಅವರ ಬದಲಿಗೆ ಸಂಪೂರ್ಣವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಬಲ್ಲ ಮತ್ತೊಬ್ಬ ಬದಲಿ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅವಕಾಶವಿದೆ.
- ಬದಲಿಯಾಗಿ ಬರುವ ಆಟಗಾರನು ಲೈಕ್ ಫರ್ ಲೈಕ್ ರಿಪ್ಲೇಸ್ಮೆಂಟ್ ಆಗಿರಬೇಕು. ಅಂದರೆ ಬೌಲರ್ಗೆ ಬೌಲರ್. ಬ್ಯಾಟರ್ಗೆ ಬ್ಯಾಟರ್ ಅಥವಾ ಆಲ್ರೌಂಡರ್ ಬದಲಿಗೆ ಆಲ್ರೌಂಡರ್ನನ್ನು ಕಣಕ್ಕಿಳಿಸಬಹುದು.
ಇದನ್ನೂ ಓದಿ: ಮೂವರು ಹೊಸಬರ ಎಂಟ್ರಿ: ಹೀಗಿದೆ ಟೀಮ್ ಇಂಡಿಯಾ
ಟೂರ್ನಿಯಲ್ಲಿ ಕಣಕ್ಕಿಳಿಯುವ 8 ತಂಡಗಳು:
- ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
- ಲಂಡನ್ ಸ್ಪಿರಿಟ್
- ಸನ್ರೈಸರ್ಸ್ ಲೀಡ್ಸ್ (ಸನ್ರೈಸರ್ಸ್ ಹೈದರಾಬಾದ್)
- ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್)
- ಟ್ರೆಂಟ್ ರಾಕೆಟ್ಸ್
- ಬರ್ಮಿಂಗ್ಹ್ಯಾಮ್ ಫೀನಿಕ್ಸ್
- ವೆಲ್ಷ್ ಫೈರ್
- ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್).
Published On – 8:22 am, Tue, 21 July 26