ಬೆಂಗಳೂರು, (ಆಗಸ್ಟ್ 11): ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕಂಠೀರವ ಸ್ಟೂಡಿಯೋ(kanteerava studio Underpass) ಬಳಿ ನಡೆದಿದೆ. ಅಂಡರ್ಪಾಸ್ ಕಾಮಗಾರಿಗಾಗಿ ರಸ್ತೆಯಲ್ಲಿ ಸುಮಾರು 20 ಅಡಿ ಆಳದವರೆಗೆ ಮಣ್ಣನ್ನು ಅಗೆಯಲಾಗಿತ್ತು. ಇಂದು (ಆಗಸ್ಟ್ 11) ಎಂದಿನಂತೆ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದಾಗ ಮೇಲಿಂದ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದುಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿ ಉಸಿರಾಡಲಾಗದೆ ನರಳಾಡಿದ್ದಾರೆ. ಸಿಬ್ಬಂದಿ ಹಾಗೂ ಸಾರ್ವಜನಿಕರ ಸಮಯಪ್ರಜ್ಞೆಯಿಂದ ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ದುರದೃಷ್ಟವಶಾತ್ ಇನ್ನಿಬ್ಬರು ಕಾರ್ಮಿಕ ಮಣ್ಣಿನ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.
ರಸ್ತೆಯಲ್ಲಿ ಅಂಡರ್ ಪಾಸ್ ಕಾಮಗಾರಿಗಾಗಿ 20 ಅಡಿಯಷ್ಟು ಮಣ್ಣು ತೋಡಲಾಗಿತ್ತು. ಆದ್ರೆ, ಕೆಲಸ ಮಾಡುವಾಗ ಏಕಾಏಕಿ ಮಣ್ಣು ಕುಸಿದಿದೆ. ಈ ವೇಳೆ ಅವರನ್ನು ರಕ್ಷಿಸಲು ಕಾರ್ಯಾಚರಣೆ ಮಾಡುವ ಸಂದರ್ಭದಲ್ಲೇ ಒಬ್ಬ ಕಾರ್ಮಿಕ ಅಸುನೀಗಿದ್ದ, ಇನ್ನೊಬ್ಬ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳೀಯರ ನೆರವಿನಿಂದ ಕಾರ್ಮಿಕನ ರಕ್ಷಣೆ ಕಾರ್ಯಾಚರಣೆ ನಡೆಸಲಾಗಿತ್ತು. ಕೆಲವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಹೆಚ್ಚುವರಿ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಮಣ್ಣಿನಡಿಯಲ್ಲಿ ಇನ್ನು ಯಾರಾದರೂ ಸಿಲುಕಿದ್ದಾರೆಯೇ ಎಂಬ ಶಂಕೆಯ ಮೇಲೆ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ: CAG ವರದಿಯಲ್ಲಿ ಮಹತ್ವದ ಅಂಶಗಳು ಬಯಲು
ಎಫ್ಟಿಐ ಸರ್ಕಲ್ ಬಳಿ ಬಿಡಿಎ ವತಿಯಿಂದ ಕಾಮಗಾರಿ ನಡೆಯುತ್ತಿತ್ತು. ಆರ್ಸಿಸಿ ಹಾಕಲು ಗುಂಡಿಯಲ್ಲಿ ತುಂಬಿದ್ದ ನೀರು ಖಾಲಿ ಮಾಡುತ್ತಿದ್ದಾಗ ಈ ಮಣ್ಣು ಕುಸಿದಿದೆ. ಈ ವೇಳೆ ಸ್ಥಳದಲ್ಲಿ ಐವರು ಕಾರ್ಮಿಕರು ಇದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಮಣ್ಣು ಕುಸಿಯುತ್ತಿದ್ದಂತೆ ಮೂವರು ಓಡಿ ಹೋಗಿದ್ದರು. ಮಣ್ಣಿನಲ್ಲಿ ಸಿಲುಕಿಕೊಂಡಿದ್ದ ಪರಿಮಳ್ (31) ಸ್ಥಳದಲ್ಲೇ ಮೃತಪಟ್ಟರೆ, ಸೋನಾರಾಮ್ (26) ಎಂಬಾತನನ್ನ ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿತ್ತು. ಕಣ್ವ ಆಸ್ಪತ್ರೆಯಲ್ಲಿ ಸೋನಾರಾಮ್ ಅಸುನೀಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಸದಾನಂದ್, ಸುನೀಲ್, ಇಮ್ತಿಯಾಯಾಜ್ ಗಾಯಗೊಂಡಿದ್ದಾರೆ.
ಉತ್ತರ ವಿಭಾಗ ಡಿಸಿಪಿ ನೇಮಗೌಡ ಹೇಳಿದ್ದಿಷ್ಟು
ಇನ್ನು ಘಟನೆ ಬಗ್ಗೆ ಉತ್ತರ ವಿಭಾಗ ಡಿಸಿಪಿ ನೇಮಗೌಡ ಪ್ರತಿಕ್ರಿಯಿಸಿದ್ದು, ಇಂದು ಹನ್ನೊಂದು ಗಂಟೆಗೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘ ಘಟನೆ ನಡೆದಿದೆ.ಐದು ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಣ್ಣು ಕುಸಿದು ಅವಘಡ ನಡೆದಿದೆ. ಮಣ್ಣು ಕುಸಿದು ಇಬ್ಬರು ಮಣ್ಣಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಒಬ್ಬನನ್ನು ಮೇಲೆ ಎತ್ತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನೊಬ್ಬ ಕಾರ್ಮಿಕ ಮಣ್ಣಿನಡಿ ಸಿಲುಕಿದ್ದಾನೆ. ಆತನ ಮೃತ ದೇಹ ಹೊರತೆಗೆಯಲು ಕಾರ್ಯಚರಣೆ ನಡೀತಿದೆ. ಕಾಮಗಾರಿ ಬಿಡಿಎಯಿಂದ ನಡೆಯುತಿದ್ದ ಮಾಹಿತಿ ಇದೆ. ಇದರ ಬಗ್ಗೆ ಪರಿಶೀಲನೆ ನಡೆಸುತಿದ್ದೇವೆ. ಕಾರ್ಮಿಕರು ಒರಿಸ್ಸಾ, ಜಾರ್ಖಂಡ್,ಪಶ್ಚಿಮ ಬಂಗಾಲದವರು ಎಂದು ತಿಳಿದುಬಂದಿದೆ ಮಾಹಿತಿ ನೀಡಿದರು.