Headlines

ಕಂಪನಿ ಎಂಡಿ ಮತ್ತು ನಿರ್ದೇಶಕರಾಗಲು 21 ಅಲ್ಲ, 18 ವರ್ಷ ವಯಸ್ಸಾಗಿದ್ದರೂ ಸಾಕು; ಸರ್ಕಾರದ ಮುಂದಿದೆ ಪ್ರಸ್ತಾಪ – Kannada News | Parliamentary committee recommends lowering minimum age to 18 years for MD and whole time directors

ಕಾರ್ಪೊರೇಟ್ ಸಭೆಯಲ್ಲಿ ಜನರ ಕರತಾಡನದ ಸಾಂದರ್ಭಿಕ ಚಿತ್ರImage Credit source: Getty Images

ನವದೆಹಲಿ, ಆಗಸ್ಟ್ 4: ಕಾರ್ಪೊರೇಟ್ ವಲಯದಲ್ಲಿ ಯುವ ಉದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡುವ ಪ್ರಯತ್ನವಾಗುತ್ತಿದೆ. ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು (Managing Directors – MD) ಮತ್ತು ಪೂರ್ಣಾವಧಿ ನಿರ್ದೇಶಕರ (Whole-Time Directors) ನೇಮಕಾತಿಗೆ ಇರುವ ಕನಿಷ್ಠ ವಯೋಮಿತಿಯನ್ನು ಪ್ರಸ್ತುತ ಇರುವ 21 ವರ್ಷಗಳಿಂದ 18 ವರ್ಷಕ್ಕೆ ಇಳಿಸುವ ಪ್ರಸ್ತಾಪ ಇದೆ. ಕಂಪನಿಗಳ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಹಣಕಾಸು ವಿಷಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ (Parliamentary Standing Committee on Finance) ಇಂಥದ್ದೊಂದು ಶಿಫಾರಸು ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ.

ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ, ಸಿಂಗಾಪುರ್ ಇತ್ಯಾದಿ ಮುಂದುವರಿದ ದೇಶಗಳಲ್ಲಿರುವ ರೀತಿಯ ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಭಾರತದಲ್ಲೂ ತರುವ ಉದ್ದೇಶದಿಂದ ಸ್ಥಾಯಿ ಸಮಿತಿ ಈ ಸಲಹೆ ನೀಡಿದೆ. ಭಾರತದಲ್ಲಿ ಸ್ಟಾರ್ಟಪ್​ಗಳು ಬಹಳ ಹೆಚ್ಚುತ್ತಿದ್ದು, ಈ ಬಹಳಷ್ಟು ನವೋದ್ಯಮಗಳನ್ನು ಹದಿಹರೆಯದವರು ಸ್ಥಾಪಿಸುತ್ತಿದ್ದಾರೆ. ಇದಕ್ಕೆ ಅನುಗುಣವಾಗಿ ಕಾರ್ಪೊರೇಟ್ ಆಡಳಿತ ನಿಯಮಗಳನ್ನು ಅಳವಡಿಸುವುದು ಅಗತ್ಯ ಎಂಬುದನ್ನು ಸಮಿತಿ ಗಮನಿಸಿದೆ.

ಇದನ್ನೂ ಓದಿ: ಆರ್​ಬಿಐ ಹೊಸ ಮಾರ್ಗಸೂಚಿ; ಅ. 1ರಿಂದ ಬದಲಾಗಲಿವೆ ಬ್ಯಾಂಕ್ ಡೆಪಾಸಿಟ್ ನಿಯಮಗಳು

ಸ್ಥಾಯಿ ಸಮಿತಿ ಶಿಫಾರಸಿನ ಪ್ರಮುಖ ಅಂಶಗಳು

ಭಾರತೀಯ ಕಾನೂನಿನ ಪ್ರಕಾರ 18 ವರ್ಷ ತುಂಬಿದ ವ್ಯಕ್ತಿಯನ್ನು ವಯಸ್ಕ (Adult) ಎಂದು ಪರಿಗಣಿಸಲಾಗುತ್ತದೆ, ಆತನಿಗೆ ಮತದಾನದ ಹಕ್ಕು ಮತ್ತು ಕಾನೂನಾತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳುವ ಹಕ್ಕಿರುತ್ತದೆ. ಆದ್ದರಿಂದ ಕಂಪನಿಯ ವ್ಯಾವಸ್ಥಾಪಕ ನಿರ್ದೇಶಕ ಹಾಗೂ ಪೂರ್ಣಾವಧಿ ನಿರ್ದೇಶಕರ ಹುದ್ದೆಗೂ ಇದೇ ವಯೋಮಿತಿ ಅನ್ವಯಿಸಬೇಕು ಎಂಬುದು ಸಮಿತಿಯ ಅಭಿಪ್ರಾಯ. ಹೀಗಾಗಿ, ಪ್ರಸಕ್ತ ಇರುವ 21 ವರ್ಷದ ವಯೋಮಿತಿಯನ್ನು 18ಕ್ಕೆ ಇಳಿಸಬೇಕೆನ್ನುವುದು ಸಮಿತಿಯ ಅನಿಸಿಕೆ.

ಸ್ಟಾರ್ಟ್‌ಅಪ್‌ಗಳಿಗೆ ಶಕ್ತಿ: ಪ್ರಸ್ತುತ ದೇಶದಲ್ಲಿ ಸಾವಿರಾರು ಯುವ ಉದ್ಯಮಿಗಳು ಕಾಲೇಜು ಹಂತದಲ್ಲೇ ತಂತ್ರಜ್ಞಾನ ಮತ್ತು ನವೋದ್ಯಮಗಳನ್ನು ಪ್ರಾರಂಭಿಸುತ್ತಿದ್ದಾರೆ. ಹೊಸ ನಿಯಮದಿಂದಾಗಿ ಇಂತಹ ಯುವ ಸಂಸ್ಥಾಪಕರು ತಮ್ಮದೇ ಕಂಪನಿಗಳಲ್ಲಿ ಪೂರ್ಣಪ್ರಮಾಣದ ಕಾನೂನಾತ್ಮಕ ನಿರ್ದೇಶಕ ಹುದ್ದೆಗಳನ್ನು ನಿರ್ವಹಿಸಲು ಹಾದಿ ಸುಗಮವಾಗಲಿದೆ.

ಹಿರಿಯರಿಗೂ ವಯೋಮಿತಿ ಹೆಚ್ಚಳ: ಎಂಡಿ ಮತ್ತು ಡೈರೆಕ್ಟರ್ ಆಗಲು ಕನಿಷ್ಠ ವಯಸ್ಸನ್ನಷ್ಟೇ ಇಳಿಸಿಲ್ಲ, ಗರಿಷ್ಠ ವಯಸ್ಸಲ್ಲೂ ಬದಲಾವಣೆ ಮಾಡಲು ಸಲಹೆ ನೀಡಲಾಗಿದೆ. ಆ ಸ್ಥಾನಗಳಿಗೆ ಗರಿಷ್ಠ ವಯೋಮಿತಿಯನ್ನು 70 ವರ್ಷದಿಂದ 75 ವರ್ಷಕ್ಕೆ ಏರಿಸಲು ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಇದನ್ನೂ ಓದಿ: ಬಾಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗಲ್ಲವಾ? ಲ್ಯಾಡರಿಂಗ್ ತಂತ್ರ ಬಳಸಿ ಅಧಿಕ ಆದಾಯ ಪಡೆಯಿರಿ

ಹಾಲಿ ಇರುವ ನಿಯಮವೇನು?

ಪ್ರಸ್ತುತ ಇರುವ ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 196 ರ ಪ್ರಕಾರ ಯಾವುದೇ ಕಂಪನಿಯು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಯನ್ನು ವ್ಯವಸ್ಥಾಪಕ ನಿರ್ದೇಶಕ (MD), ಪೂರ್ಣಾವಧಿ ನಿರ್ದೇಶಕ ಅಥವಾ ಮ್ಯಾನೇಜರ್ ಆಗಿ ನೇಮಕ ಮಾಡಿಕೊಳ್ಳುವಂತಿಲ್ಲ.

ಸಂಸದೀಯ ಸಮಿತಿಯ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮತ್ತು ಸಂಸತ್ತು ಅಂಗೀಕರಿಸಿದರೆ, 18 ವರ್ಷ ತುಂಬಿದ ಭಾರತೀಯ ಯುವಕರು ಅಧಿಕೃತವಾಗಿ ಕಂಪನಿಗಳ ಉನ್ನತ ನಿರ್ದೇಶಕ ಮಂಡಳಿಯನ್ನು ಮುನ್ನಡೆಸಲು ಅರ್ಹತೆ ಪಡೆಯಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *