
ಹಿಂದಿನ ಕಾಲದಿಂದಲೂ ಸೋಪ್ ಬದಲು ಸ್ನಾನಕ್ಕೆ, ತ್ವಚೆಯ ಆರೈಕೆಗಾಗಿ ಕಡ್ಲೆ ಹಿಟ್ಟನ್ನೇ (besan flour) ಬಳಸಲಾಗುತ್ತಿತ್ತು. ಇಂದಿನ ಈ ಮಾಡರ್ನ್ ಜಗತ್ತಿನಲ್ಲಿಯೂ ಸಹ ಅನೇಕರು ತ್ವಚೆಯ ಆರೈಕೆಗಾಗಿ ದುಬಾರಿ ಫೇಸ್ ಪ್ಯಾಕ್, ಕ್ರೀಮ್ಗಳ ಬದಲಿಗೆ ಕಡ್ಲೆ ಹಿಟ್ಟನ್ನೇ ಉಪಯೋಗಿಸುತ್ತಿದ್ದಾರೆ. ಹೌದು ಚರ್ಮವನ್ನು ಸ್ವಚ್ಛವಾಗಿ, ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಅನೇಕ ಜನರು ಇದನ್ನು ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಆದ್ರೆ ಇದು ನಿಜಕ್ಕೂ ಪರಿಣಾಮಕಾರಿಯೇ, ಕಡ್ಲೆ ಹಿಟ್ಟನ್ನು ಅತಿಯಾಗಿ ಮುಖಕ್ಕೆ ಹಚ್ಚುವುದರಿಂದ ಅಡ್ಡಪರಿಣಾಮಗಳನ್ನು ಬೀರಬಹುದೇ? ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ ವಿಧಾನ ಯಾವುದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟು ಪ್ರಯೋಜನಕಾರಿಯೇ?
ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರಿಂದ ಅದು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ, ಮುಖದ ರಂಧ್ರಗಳನ್ನು ತೆರೆದು ತ್ವಚೆಯಲ್ಲಿ ಅಂಟಿಕೊಂಡಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಕಡಲೆ ಹಿಟ್ಟು ಸೌಮ್ಯವಾದ ಎಫ್ಫೋಲಿಯೇಟಿಂಗ್ ಗುಣಗಳನ್ನು ಹೊಂದಿದ್ದು, ಇದು ಇದು ಸತ್ತ ಚರ್ಮವನ್ನು ತೆಗೆದುಹಾಕುತ್ತದೆ ಮತ್ತು ಮುಖವನ್ನು ರಿಫ್ರೆಶ್ ಮಾಡುತ್ತದೆ.
ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರ ದೊಡ್ಡ ಪ್ರಯೋಜನವೆಂದರೆ ಅದು ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನಿಯಮಿತವಾಗಿ ಕಡ್ಲೆ ಹಿಟ್ಟನ್ನು ಹಚ್ಚುವ ಮೂಲಕ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದಲ್ಲದೆ, ಇದು ಚರ್ಮವನ್ನು ಸ್ವಚ್ಛವಾಗಿಡುವ ಮೂಲಕ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಲೆ ಹಿಟ್ಟನ್ನು ಹಚ್ಚುವುದರಿಂದ ಚರ್ಮಕ್ಕೆ ಸ್ವಲ್ಪ ಹೊಳಪು ಸಿಗುತ್ತದೆ ಮತ್ತು ಮೈಬಣ್ಣ ಸುಧಾರಿಸುತ್ತದೆ.
ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟನ್ನು ಬಳಸುವುದರಿಂದಾಗುವ ಅನಾನುಕೂಲಗಳೇನು?
ಕಡಲೆ ಹಿಟ್ಟು ಪ್ರಯೋಜನಗಳನ್ನು ಹೊಂದಿದ್ದರೂ, ಅದರ ತಪ್ಪಾದ ಬಳಕೆಯಿಂದ ತ್ವಚೆಗೆ ಅನಾನುಕೂಲಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಹೌದು ನಿಮ್ಮ ಚರ್ಮವು ತುಂಬಾ ಡ್ರೈ ಆಗಿದ್ದು, ನೀವೇನಾದರೂ ಮುಖಕ್ಕೆ ಕಡ್ಲೆ ಹಿಟ್ಟು ಹಚ್ಚಿದರೆ ಅದರಿಂದ ತ್ವಚೆ ಇನ್ನಷ್ಟು ಡ್ರೈ ಆಗಬಹುದು. ಅಲ್ಲದೆ ಇದನ್ನು ಹಚ್ಚುವುದರಿಂದ ಕೆಲವು ಜನರು ಅಲರ್ಜಿಯ ಪ್ರತಿಕ್ರಿಯೆಗಳು ಅಥವಾ ಕಿರಿಕಿರಿಯನ್ನು ಅನುಭವಿಸಬಹುದು. ಇದನ್ನು ನಿಯಮಿತವಾಗಿ ಬಳಸುವುದರಿಂದ, ಅದು ಚರ್ಮದಿಂದ ಅದರ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕಬಹುದು, ಮತ್ತು ಚರ್ಮವನ್ನು ಮಂದವಾಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ: ದಾಳಿಂಬೆ ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯಲ್ಲೂ ಇವೆ ಸಾಕಷ್ಟು ಪ್ರಯೋಜನ
ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ ವಿಧಾನ ಯಾವುದು?
ಬರೀ ಕಡ್ಲೆ ಹಿಟ್ಟನ್ನು ನೇರವಾಗಿ ಮುಖಕ್ಕೆ ಹಚ್ಚುವ ಬದಲು, ಅದನ್ನು ಬೇರೆ ಯಾವುದಾದರೂ ವಸ್ತುವಿನೊಂದಿಗೆ ಬೆರೆಸಿ ಮುಖಕ್ಕೆ ಅಪ್ಲೈ ಮಾಡುವುದು ಉತ್ತಮ. ಉದಾಹರಣೆಗೆ, ನೀವು ಮೊಸರು, ಹಾಲು ಅಥವಾ ರೋಸ್ ವಾಟರ್ ಅನ್ನು ಸೇರಿಸಬಹುದು. ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ, ರೋಸ್ ವಾಟರ್ ಉತ್ತಮ. ತ್ವಚೆ ಡ್ರೈ ಆಗಿದ್ದರೆ ಮೊಸರು ಅಥವಾ ಹಾಲನ್ನು ಕಡ್ಲೆ ಹಿಟ್ಟಿಗೆ ಬೆರೆಸಿ ಹಚ್ಚುವುದು ಉತ್ತಮ. ಕಡ್ಲೆ ಹಿಟ್ಟಿನ ಪ್ಯಾಕನ್ನು ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ, ನಂತರ ನಿಧಾನವಾಗಿ ತೊಳೆಯಿರಿ. ಇದನ್ನು ವಾರಕ್ಕೆ 2 ರಿಂದ 3 ಬಾರಿ ಬಳಸುವುದು ಸೂಕ್ತ.
ಕಡ್ಲೆ ಹಿಟ್ಟನ್ನು ಯಾರು ಬಳಸಬೇಕು ಮತ್ತು ಯಾರು ಬಳಸಬಾರದು?
ನಿಮ್ಮ ಚರ್ಮವು ಎಣ್ಣೆಯುಕ್ತ ಅಥವಾ ಸಾಮಾನ್ಯವಾಗಿದ್ದರೆ, ನೀವು ತ್ವಚೆಯ ಆರೈಕೆಗೆ ಕಡ್ಲೆ ಹಿಟ್ಟು ಬಳಸಬಹುದು. ಆದರೆ ನಿಮ್ಮ ಚರ್ಮವು ತುಂಬಾ ಸೂಕ್ಷ್ಮ ಅಥವಾ ಒಣಗಿದ್ದರೆ, ಮೊದಲು ಪ್ಯಾಚ್ ಪ್ಯಾಚ್ ಟೆಸ್ಟ್ ಮಾಡಿ, ಚರ್ಮದ ಕಿರಿಕಿರಿ ಅಥವಾ ತುರಿಕೆ ಅನುಭವಿಸಿದರೆ ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚಲು ಹೋಗಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ