ಜನರು ಚಿತ್ರಮಂದಿರಗಳಿಗೆ (Theater) ಬರುತ್ತಿಲ್ಲ ಎಂಬ ದೂರು ಹಲವು ವರ್ಷಗಳದ್ದು. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಚಿತ್ರತಂಡಗಳು ನಾನಾ ಕಸರತ್ತು ಮಾಡುತ್ತಿವೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಭೇಟಿ ಕಡಿಮೆ ಆಗಲು ಮುಖ್ಯವಾಗಿ ದುಬಾರಿ ಬೆಲೆಯೇ ಕಾರಣ ಎನ್ನಲಾಗುತ್ತಿದೆ. ಈಗಿನ ದುಬಾರಿ ಜಮಾನಾನಲ್ಲಿ ಕುಟುಂಬವೊಂದು ಸಿನಿಮಾ ನೋಡಬೇಕೆಂದರೆ ಕನಿಷ್ಟ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳು ಖರ್ಚಾಗಿಬಿಡುತ್ತದೆ. ಟಿಕೆಟ್ ಬೆಲೆಯಷ್ಟೆ ಅಲ್ಲ ಪಾಪ್‌ಕಾರ್ನ್ ದರ, ಪಾರ್ಕಿಂಗ್ ದರ ಎಲ್ಲವೂ ದುಬಾರಿ ಆಗಿಬಿಟ್ಟಿವೆ. ಆದರೆ ಇದೀಗ ತೆಲುಗಿನಲ್ಲಿ ನಿರ್ಮಾಣ ಸಂಸ್ಥೆಯೊಂದು ಕುಟುಂಬ ಪ್ರೇಕ್ಷಕರನ್ನು ಸೆಳೆಯಲು ಒಳ್ಳೆಯ ಆಫರ್ ನೀಡಿದ್ದು, ಇತರೆ ನಿರ್ಮಾಣ ಸಂಸ್ಥೆಗಳೂ ಸಹ ಇದನ್ನು ಫಾಲೋ ಮಾಡಬಹುದಾಗಿದೆ.
ಇಟಿವಿ ವಿನ್ ಸಂಸ್ಥೆಯು ಟಿಕೆಟ್ ಮತ್ತು ತಿಂಡಿ-ತಿನಿಸುಗಳ ಬೆಲೆಗೆ ಸಂಬಂಧಿಸಿದಂತೆ ಪ್ರೇಕ್ಷಕ ಸ್ನೇಹಿ ಮತ್ತು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ. ಈ ಹಿಂದೆ ಅವರು ತಮ್ಮ ಸಿನಿಮಾದ ಬಿಡುಗಡೆ ವೇಳೆ ಕೇವಲ 99 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಿದ್ದರು. ಈಗ, ಮಾರ್ಚ್ 6 ರಂದು ಬಿಡುಗಡೆಯಾಗಲಿರುವ ಅವರದ್ದೇ ನಿರ್ಮಾಣದ ಶಿವಾಜಿ ನಟನೆಯ ‘ಸಂಪ್ರದಾಯಿನಿ ಸುಪ್ಪಿಣಿ ಶುದ್ಧಪೂಸನಿ’ ಚಿತ್ರಕ್ಕಾಗಿ ಅವರು ಕುಟುಂಬ ಪ್ರೇಕ್ಷಕರನ್ನು ಸೆಳೆಯಲು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಕುಟುಂಬ ಪ್ರೇಕ್ಷಕರನ್ನು ಸೆಳೆಯಲೆಂದು ಅವರು ಕಾಂಬೊ ಟಿಕೆಟ್ ಆಫರ್ ಬಿಡುಗಡೆ ಮಾಡಿದ್ದಾರೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಕೇವಲ 499 ರೂಪಾಯಿಗಳಿಗೆ ನಾಲ್ಕು ಟಿಕೆಟ್‌ಗಳು ಮತ್ತು ಒಂದು ದೊಡ್ಡ ಪಾಪ್‌ಕಾರ್ನ್ ಬಕೆಟ್ ಒಳಗೊಂಡ ಕಾಂಬೋ ಆಫರ್ ಅನ್ನು ಹೊರತಂದಿದ್ದಾರೆ. ಮಲ್ಟಿಪ್ಲೆಕ್ಸ್ನಲ್ಲೂ ಸಹ ಈ ಆಫರ್ ಚಾಲ್ತಿಯಲ್ಲಿದ್ದು 799 ರೂಪಾಯಿಗೆ ಮಲ್ಟಿಪ್ಲೆಕ್ಸ್ನಲ್ಲಿ ನಾಲ್ಕು ಜನ ಸಿನಿಮಾ ನೋಡಬಹುದು ಅದೂ ಒಂದು ದೊಡ್ಡ ಪಾಪ್‌ಕಾರ್ನ್ ಬಕೆಟ್ ಉಚಿತವಾಗಿ ಸವಿಯಬಹುದಾಗಿದೆ. ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರಲು ಇದೊಂದು ಒಳ್ಳೆಯ ಪ್ರಯತ್ನ ಆಗಿದೆ.
ಇದನ್ನೂ ಓದಿ:ಕೆವಿಎನ್ಗೆ ಕೈಕೊಟ್ಟ ಅದೃಷ್ಟ, ಎರಡು ದೊಡ್ಡ ಸಿನಿಮಾ ಬಿಡುಗಡೆ ಮುಂದೂಡಿಕೆ
ಕನ್ನಡದಲ್ಲಿ ಈ ಹಿಂದೆ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಉಚಿತ ಎಂಬ ಆಫರ್ ಹರಿದಾಡಿತ್ತು. ಕೆಲವು ಸಿನಿಮಾಗಳಿಗೆ ಇದರಿಂದ ಉಪಯೋಗ ಆಗಿತ್ತಾದರೂ ಈ ಆಫರ್ಗಳು ಸಿನಿಮಾ ಬಿಡುಗಡೆ ಆದ ಬಳಿಕ ಹೊರತಂದ ಆಫರ್ಗಳಾಗಿದ್ದವು. ಆದರೆ ಸಿನಿಮಾ ಬಿಡುಗಡೆಗೆ ಮುಂಚೆಯೇ ಇಂಥಹದ್ದೊಂದು ಆಫರ್ ನೀಡಿ, ಜೊತೆಗೆ ಪಾಪ್‌ಕಾರ್ನ್ ಅನ್ನೂ ಸಹ ಅದಕ್ಕೆ ಸೇರಿಸಿರುವುದು ಅಷ್ಟಾಗಿಯೂ ಟಿಕೆಟ್ ಬೆಲೆಯನ್ನು ಕಡಿಮೆಯೇ ಇರಿಸಿರುವುದು ಜಾಣ ಆಫರ್ ಎನಿಸಿಕೊಂಡಿದೆ.
ಈ ಹಿಂದೆ ಇಟಿವಿ ವಿನ್ ಸಂಸ್ಥೆಯು ತಮ್ಮ ‘ರಾಜು ವೆಡ್ಸ್ ರಾಂಭಾಯ್’ ಸಿನಿಮಾಕ್ಕೆ 99 ರೂಪಾಯಿ ಟಿಕೆಟ್ ನೀಡಿತ್ತು. ಅದೇ ದಿನ ಬಿಡುಗಡೆಯಾದ ಪ್ರಿಯದರ್ಶಿ ನಟನೆಯ ‘ಪ್ರೇಮಂತೆ’ ಚಿತ್ರವು ಸಾಮಾನ್ಯ ದರದಲ್ಲಿ ಬಿಡುಗಡೆಯಾಗಿತ್ತು. ಆಗ ಟಿಕೆಟ್ ದರದ ಬಗ್ಗೆ ತುಸು ವಿವಾದ, ಚರ್ಚೆಗಳು ಸಹ ಚಿತ್ರರಂಗದಲ್ಲಿ ಆಗಿದ್ದವು. ಆದರೆ ಇಟಿವಿ ವಿನ್ಗೆ ಟಿಕೆಟ್ ಬೆಲೆ ಕಡಿಮೆ ಇರಿಸಿದ್ದರಿಂದ ಲಾಭವೇ ಆಗಿತ್ತು ಎನ್ನಲಾಗಿದೆ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ಬೆಲೆ ಹೆಚ್ಚಿದೆ. ಕರ್ನಾಟಕದಲ್ಲಿ ಕುಟುಂಬವೊಂದು ಸಿನಿಮಾಕ್ಕೆ ಹೋದಾಗ ಆಗುವ ಖರ್ಚು ಬಲು ದುಬಾರಿ ಆಗಿದೆ. ಹಾಗಾಗಿ ಕರ್ನಾಟಕದಲ್ಲಿ ಈ ರೀತಿಯ ಕಾಂಬೊ ಟಿಕೆಟ್ ಆಫರ್ಗಳು ಹೆಚ್ಚು ಪರಿಣಾಮಕಾರಿ ಎನಿಸುತ್ತದೆ.