ಭಾರಿ ಮಳೆ ಹಾಗೂ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಕುಡಚಿ ಸೇತುವೆ ಜಲಾವೃತಗೊಂಡಿರುವುದುImage Credit source: tv9
ಬೆಂಗಳೂರು, ಜುಲೈ 10: ಕರ್ನಾಟಕದ ಪಶ್ಚಿಮ ಘಟ್ಟದ ಸಾಲುಗಳು ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಮುಂಗಾರು ಮಳೆ ತೀವ್ರಗೊಳ್ಳುತ್ತಿದೆ. ಜುಲೈ 10 ರಂದು ರಾಜ್ಯದ 8 ಜಿಲ್ಲೆಗಳ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ 64.5 ಮಿ.ಮೀ ನಿಂದ 115.4 ಮಿ.ಮೀ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೂಡ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಿದೆ. ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸಲು ಕೋರಲಾಗಿದೆ.
ಎಲ್ಲೆಲ್ಲಿ ಮಳೆಯಾಗಲಿದೆ?
ಐಎಂಡಿ ದತ್ತಾಂಶಗಳ ಪ್ರಕಾರ, ಬೆಳಗಾವಿ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಿರಲಿದೆ. ಈ ಭಾಗದ ನದಿ ತೀರದ ನಿವಾಸಿಗಳು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ನೈಸರ್ಗಿಕ ವಿಕೋಪ ಕೇಂದ್ರವು ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಿದೆ.
ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಕ್ಸ್ ಸಂದೇಶ
#ಮಳೆ #ಮುನ್ನೆಚ್ಚರಿಕೆ : #Heavy #Rainfall (64.5mm to 115.4mm) #warning for #Karnataka #Yellow #Alert@KarnatakaVarthe#KSNDMC #KarnatakaRains #Monsoon2026@DCDKOfficial @dcudupi @dcuttarakannada @KodaguDC @DeputyCommissi8 @deobelagavi @DcDeoHassan @DEO_CHIKMAGALUR pic.twitter.com/ghBTMQmFVq
— Karnataka State Natural Disaster Monitoring Centre (@KarnatakaSNDMC) July 9, 2026
ಐಎಂಡಿ ಸಲಹೆ ಸೂಚನೆಗಳೇನು?
ಮಳೆಯ ತೀವ್ರತೆಯ ಜೊತೆಗೆ ಕರಾವಳಿ ತೀರ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಜುಲೈ 10 ರಂದು ಸಮುದ್ರಕ್ಕೆ ಇಳಿಯದಂತೆ ಐಎಂಡಿ ಸೂಚನೆ ನೀಡಿದೆ.
ಇದನ್ನೂ ಓದಿ: ಭಾರೀ ಮಳೆ: 85.66 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ
ಅಲ್ಲದೆ, ಘಾಟ್ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಕೂಡ ಮಂಜು ಮುಸುಕಿದ ವಾತಾವರಣ ಮತ್ತು ಮಳೆಯಿಂದಾಗಿ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ