ಮಹಿಳಾ ಮೀಸಲಾತಿ ವಿಧೇಯ (ಸಂಗ್ರಹ ಚಿತ್ರ)Image Credit source: google
ಬೆಂಗಳೂರು, ಏಪ್ರಿಲ್ 17: ನಾರಿ ಶಕ್ತಿ ವಂದನಾ ಅಧಿನಿಯಮ ಅರ್ಥಾತ್ ಮಹಿಳಾ ಮೀಸಲಾತಿ (Women’s Reservation Bill) ವಿಧೇಯಕಕ್ಕೆ ಲೋಕಸಭೆಯಲ್ಲಿ ಸೋಲಾಗಿದೆ. ಆ ಮೂಲಕ ಒಂದೆಡೆ ಎನ್ಡಿಎ ಸರ್ಕಾರಕ್ಕೆ ಮುಜುಗರ ಉಂಟಾಗಿದ್ದು, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಸಂಭ್ರಮಿಸಿದ್ದಾರೆ. ವಿಪಕ್ಷಗಳ ವಿರುದ್ಧ ಗೃಹ ಸಚಿವ ಅಮಿತ್ ಶಾ ಕಿಡಿ ಕಾರಿದ್ದಾರೆ. ಇತ್ತ ಕರ್ನಾಟಕದಲ್ಲಿ (karnataka) ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕೆಸರೆರಚಾಟ ನಡೆಸಿದ್ದಾರೆ. ನಾರಿ ಶಕ್ತಿ ವಂದನಾ ವಿಧೇಯಕ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ದೇಶ ಈ ದಿನವನ್ನು ಎಂದಿಗೂ ಮರೆಯುವುದಿಲ್ಲ ಎಂದು ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಭಾರತದ ಇತಿಹಾಸಕ್ಕೆ ಇದೊಂದು ಕರಾಳ ದಿನವಾಗಿದೆ. ಐಸಿಹಾಸಿಕ ವಿಧೇಯಕವನ್ನು INDIA ಮೈತ್ರಿಕೂಟ ಸೋಲಿಸಿದೆ. ಸ್ತ್ರೀಯರ ಉನ್ನತಿಗೆ ಅಡ್ಡಗಾಲು ಹಾಕಿದ ವಿಪಕ್ಷಗಳನ್ನು ಕ್ಷಮಿಸಲ್ಲ. ರಾಜಕೀಯ ಜಿದ್ದಿಗೆ ಬಿದ್ದ ಸ್ತ್ರೀ ವಿರೋಧಿಗಳು ಬಿಲ್ ಸೋಲಿಸಿದ್ದಾರೆ. ಇದು ಮಹಿಳಾ ಮೀಸಲಾತಿ ಬಿಲ್ ಸೋಲಲ್ಲ, ದೇಶದ ಸೋಲು. ದೇಶದ ಜನತೆ ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಲಾರದು ಎಂದು ವಾಗ್ದಾಳಿ ಮಾಡಲಾಗಿದೆ.
ರಾಜ್ಯ ಬಿಜೆಪಿ ಟ್ವೀಟ್
ನಾರಿ ಶಕ್ತಿ ವಂದನಾ ಅಧಿನಿಯಮ ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್!
ದೇಶ ಈ ದಿನವನ್ನೆಂದೂ ಮರೆಯದು. ಭವ್ಯ ಭಾರತದ ಇತಿಹಾಸಕ್ಕೆ ಇದೊಂದು ಕರಾಳ ದಿನ. ಮಹಿಳೆಯರಿಗೆ 33% ಮೀಸಲಾತಿ ಒದಗಿಸುವ ಐತಿಹಾಸಿಕ ಮಸೂದೆಯನ್ನು ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಸೋಲಿಸಿದೆ. ಮಹಿಳೆಯರ ಉನ್ನತಿಗೆ ಅಡ್ಡಗಾಲು ಹಾಕಿದ ವಿಪಕ್ಷಗಳನ್ನು ದೇಶದ ನಾರಿಶಕ್ತಿ ಎಂದಿಗೂ… pic.twitter.com/CQMyUbx7eh
— BJP Karnataka (@BJP4Karnataka) April 17, 2026
ಇನ್ನು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪೋಸ್ಟ್ ಮಾಡಿದ್ದು, ವಿಧೇಯಕ ತಡೆಯಲು ಕಾಂಗ್ರೆಸ್, TMC, SP, DMK ಒಟ್ಟಾಗಿದ್ದವು. ಇದು ಕೇವಲ ಒಂದು ಮಸೂದೆಗೆ ಸಂಬಂಧಪಟ್ಟ ವಿಷಯವಲ್ಲ. ಇದು ದೇಶದ ನಾರಿ ಶಕ್ತಿಗೆ ನೀಡುವ ಗೌರವದ ಪ್ರಶ್ನೆಯಾಗಿದೆ. ಮಹಿಳೆಯರ ಧ್ವನಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಕ್ಷಣವನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಮುಂದಿನ ಪ್ರತಿ ಚುನಾವಣೆಯಲ್ಲೂ ಇದರ ಹೊಣೆಗಾರಿಕೆ ಕೇಳಲಾಗುತ್ತೆ ಎಂದಿದ್ದಾರೆ.
ಮಹಿಳಾ ಮೀಸಲಾತಿ ವಿರೋಧಿ ಕಾಂಗ್ರೆಸ್ಗೆ ಧಿಕ್ಕಾರ ಎಂದ ಜೆಡಿಎಸ್
ವಿಧಾನಸಭೆಗಳು ಹಾಗೂ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33% ಮೀಸಲಾತಿ ಕಲ್ಪಿಸುವ ನಾರಿಶಕ್ತಿ ವಂದನಾ ಮಸೂದೆಯನ್ನು ಲೋಕಸಭೆಯಲ್ಲಿ ಸೋಲಿಸಿರುವ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟಕ್ಕೆ ನಾಚಿಕೆಯಾಗಬೇಕು. ಮಹಿಳಾ ಮೀಸಲಾತಿ ವಿಧೇಯಕವನ್ನು ಬೆಂಬಲಿಸದೆ, ಕಾಂಗ್ರೆಸ್ ಪಕ್ಷ ಮಹಿಳಾ ವಿರೋಧಿ ಎಂಬುದನ್ನು, ಮಸೂದೆಗೆ ವಿರುದ್ಧ ಮತಚಲಾಯಿಸುವ ಮೂಲಕ ಸಾಬೀತು ಪಡಿಸಿದೆ.
ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಬಹುಮತ ಸಿಗದಿದ್ದಕ್ಕೆ ಸಂಸತ್ ಆವರಣದಲ್ಲಿ ಎನ್ಡಿಎ ನಾಯಕರ ಪ್ರತಿಭಟನೆ
1996ರಲ್ಲಿ ಪ್ರಧಾನಿಯಾಗಿದ್ದ ವೇಳೆ ದೇವೇಗೌಡರು ಮಹತ್ವಾಕಾಂಕ್ಷೆಯಿಂದ ಮಹಿಳೆಯರಿಗೆ ಶೇ.33% ಮೀಸಲಾತಿ ಕಲ್ಪಿಸುವ ಐತಿಹಾಸಿಕ ಮಸೂದೆಯನ್ನು ಮಂಡಿಸಿದ್ದರು. ಆಗಲೂ ಸಹ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದ ಕಾಂಗ್ರೆಸ್ ಇವತ್ತು ಸಹ ಮಸೂದೆಯ ವಿರುದ್ಧ ಮತ ಹಾಕಿ ಸೋಲಿಸಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ಇದಕ್ಕೆ ಕಾಂಗ್ರೆಸ್ ಕಾರಣ ಎಂದ ಆರ್. ಅಶೋಕ್
ಕಾಂಗ್ರೆಸ್ನವರು ಮಹಿಳಾ ವಿರೋಧಿಗಳು. ಅವರು ಮಸೂದೆಯನ್ನು ಪಾಸ್ ಮಾಡಿಸಬೇಕಾಗಿತ್ತು. ಇದರಿಂದ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಸಿಗ್ತಿತ್ತು. ಅದನ್ನು ಹಾಳು ಮಾಡಿದ್ದಾರೆ, ಇದಕ್ಕೆ ಕಾಂಗ್ರೆಸ್ ಕಾರಣ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹರಿಹಾಯ್ದಿದ್ದಾರೆ.
ಕ್ಷೇತ್ರ ಮರುವಿಂಗಡಣೆ ಸಂಚು: ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದ ಕಾಂಗ್ರೆಸ್
ಇನ್ನು ಈ ಬಗ್ಗೆ ರಾಜ್ಯ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅಮಿತ್ ಶಾ ಅವರು ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಬಳಸಿಕೊಂಡು ಕ್ಷೇತ್ರ ಮರುವಿಂಗಡಣೆ ಮಾಡಲು ಮುಂದಾಗಿದ್ದರು. ಆ ಮೂಲಕ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಹಾನಿ ಮಾಡುವ ದುರುದ್ದೇಶದ ಪ್ರಯತ್ನ ನಡೆಸಿದ್ದರು. ಆದರೆ ಇಂಡಿಯಾ ಮೈತ್ರಿಕೂಟದ ವಿರೋಧ ಪಕ್ಷಗಳು ಅವರ ಈ ಕುತಂತ್ರದ ನಡೆಯನ್ನು ತಡೆಹಿಡಿದಿವೆ ಮತ್ತು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸೋಲಿಸಿವೆ. ಈ ಹೋರಾಟದಲ್ಲಿ ಕೈಜೋಡಿಸಿದ ವಿರೋಧ ಪಕ್ಷಗಳ ಎಲ್ಲಾ ನಾಯಕರಿಗೆ ನಾವು ಹೃತ್ಪೂರ್ವಕ ಧನ್ಯವಾದ ತಿಳಿಸಲಾಗಿದೆ.
ರಾಜ್ಯ ಕಾಂಗ್ರೆಸ್ ಟ್ವೀಟ್
Modi-Shah duo tried to carry out Delimitation by using half the country’s population as a shield and made a nefarious attempt to harm this country’s Democracy, Constitution, and Federalism.
Their cunning ploy was curtailed out by a united opposition INDIA and the Constitution… https://t.co/8NKhj1bi5F
— Karnataka Congress (@INCKarnataka) April 17, 2026
ಮೋದಿ-ಶಾ ಜೋಡಿಯು ತಮ್ಮ ಸಂಕುಚಿತ ರಾಜಕೀಯ ಲಾಭಕ್ಕಾಗಿ ಭಾರತದ ಪ್ರಜಾಪ್ರಭುತ್ವವನ್ನು ನಾಶಮಾಡಲು ಹೊರಟಿದ್ದರು. ಆದರೆ ಅವರ ಈ ಸಂಚು ಈಗ ಸಂಪೂರ್ಣವಾಗಿ ನೆಲಕಚ್ಚಿದೆ. 2023 ರಲ್ಲಿ ಅಂಗೀಕರಿಸಲಾದ “ನಾರಿ ಶಕ್ತಿ ವಂದನ ಅಧಿನಿಯಮ” ಕ್ಕೆ ಅನುಗುಣವಾಗಿ, 2029ರ ಚುನಾವಣೆಯಿಂದಲೇ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿಯನ್ನು ಜಾರಿಗೆ ತರಬೇಕೆಂದು ನಾವು ಮತ್ತೊಮ್ಮೆ ಪ್ರಧಾನಿ ಮೋದಿ ಸರ್ಕಾರವನ್ನು ಒತ್ತಾಯಿಸುತ್ತೇವೆ. ಕಾಂಗ್ರೆಸ್ ಪಕ್ಷವು 2023ರ ಸೆಪ್ಟೆಂಬರ್‌ನಿಂದಲೂ ಈ ಬೇಡಿಕೆಯನ್ನು ಮಂಡಿಸುತ್ತಾ ಬಂದಿದೆ. ‘ನಾರಿ ಶಕ್ತಿ’ಯ ಬಗ್ಗೆ ಪ್ರಧಾನಿಗಿರುವ ಬದ್ಧತೆಗೆ ಇದು ನಿಜವಾದ ಪರೀಕ್ಷೆಯಾಗಲಿದೆ ಎಂದಿದೆ. ಈ ಬಗ್ಗೆ ದೆಹಲಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇದು ದಕ್ಷಿಣ ಭಾರತದ ಗೆಲುವು. ಇದು ವಿಪಕ್ಷಗಳ ಗೆಲುವು, ದೇಶದ ಮಹಿಳೆಯರ ಗೆಲುವು ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.