‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

‘ಕಾಕ್‌ಟೇಲ್ 2’ ಚಿತ್ರದಲ್ಲಿ ಸಲಿಂಗಿಗಳ ಪಾತ್ರ ಮಾಡಿದ್ದಾರಾ ರಶ್ಮಿಕಾ ಮಂದಣ್ಣ, ಕೃತಿ ಸನನ್?

ಶಾಹಿದ್ ಕಪೂರ್, ಕೃತಿ ಸನನ್ (Kriti Sanon) ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕಾಕ್‌ಟೇಲ್ 2’ (Cocktail 2) ಸಿನಿಮಾ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಈ ಮೂವರು ಈ ಕಾಲದ ತ್ರಿಕೋನ ಪ್ರೇಮಕಥೆಯನ್ನು ಹೇಳಲಿದ್ದಾರೆ. ಆದರೆ, ಈ ಚಿತ್ರದ ಕಥೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಗಾಸಿಪ್ ಹರಿದಾಡುತ್ತಿತ್ತು. ಚಿತ್ರದಲ್ಲಿ ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಸಲಿಂಗಪ್ರೇಮಿ ಜೋಡಿಯಾಗಿ ನಟಿಸುತ್ತಿದ್ದಾರೆ ಹಾಗೂ ಅವರ ಸಂಬಂಧದ ಮಧ್ಯೆ ಶಾಹಿದ್ ಕಪೂರ್ ಎಂಟ್ರಿ ಕೊಡುತ್ತಾರೆ ಎನ್ನುವುದೇ ಆ ಗಾಸಿಪ್.

ಆದರೆ ಈ ಗಾಸಿಪ್ ನಿಜವೇ ಎಂಬುದು ಪ್ರಶ್ನೆ. ಮಂಗಳವಾರ (ಜೂನ್ 2) ನಡೆದ ‘ಕಾಕ್‌ಟೇಲ್ 2’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ-ನಾಯಕಿಯರು, ನಿರ್ದೇಶಕ ಹೋಮಿ ಅದಾಜಾನಿಯಾ ಹಾಗೂ ನಿರ್ಮಾಪಕರಾದ ದಿನೇಶ್ ವಿಜನ್ ಮತ್ತು ಲವ್ ರಂಜನ್ ಅವರು ಈ ವದಂತಿಗಳಿಗೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಶ್ಮಿಕಾ ಮತ್ತು ಕೃತಿ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆ ಎದುರಾದಾಗ, ಕೃತಿ ತಮಾಷೆಯಾಗಿ ಶಾಹಿದ್ ಕಪೂರ್ ಕಡೆಗೆ ನೋಡಿ, ‘ಈ ಎಲ್ಲಾ ವದಂತಿಗಳು ಒಂದೇ ಜಾಗದಿಂದ ಹುಟ್ಟಿಕೊಳ್ಳುತ್ತಿವೆ ಅನಿಸುತ್ತೆ’ ಎಂದರು. ಇದಕ್ಕೆ ಆಶ್ಚರ್ಯಗೊಂಡಂತೆ ನಟಿಸಿದ ಶಾಹಿದ್, ‘ನಾನೇನೂ ಹೇಳಿಲ್ಲಪ್ಪಾ, ಕಥೆ ಹಾಗಿದ್ದರೆ ನನಗೇನು ಲಾಭ? ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ನಕ್ಕರು.

ಕೊನೆಗೆ ನಿರ್ದೇಶಕ ಹೋಮಿ ಅದಾಜಾನಿಯಾ ಈ ಗಾಸಿಪ್‌ನ ಅಸಲಿ ಕಥೆಯನ್ನು ಬಿಚ್ಚಿಟ್ಟರು. ‘ಚಿತ್ರೀಕರಣದ ಸೆಟ್‌ನಲ್ಲಿ ನಾವೆಲ್ಲಾ ಒಟ್ಟಿಗೆ ಕುಳಿತಿದ್ದೆವು. ಕೃತಿ ಮತ್ತು ರಶ್ಮಿಕಾ ಇಬ್ಬರೂ ಆಪ್ತ ಗೆಳತಿಯರಾದ್ದರಿಂದ ಸೆಟ್‌ನಲ್ಲಿ ತುಂಬಾ ಆತ್ಮೀಯವಾಗಿ ಇರುತ್ತಿದ್ದರು. ಆಗ ನಾವು ಸುಮ್ಮನೆ ತಮಾಷೆಗೆ, ಒಂದು ವೇಳೆ ಇವರಿಬ್ಬರದ್ದೇ ಲವ್ ಸ್ಟೋರಿ ಆಗಿದ್ದು, ಶಾಹಿದ್ ಮೂರನೇ ವ್ಯಕ್ತಿಯಾಗಿ ಬಂದರೆ ಹೇಗೆ ಎಂದು ಯೋಚಿಸಿದೆವು. ಅಂತಹ ಸಿನಿಮಾ ಮಾಡಲು ನನಗೇನೂ ಅಭ್ಯಂತರವಿಲ್ಲ ಎಂದಿದ್ದೆ. ಅಲ್ಲಿಂದ ಈ ವದಂತಿ ಹಬ್ಬಿದೆ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮದುವೆಗೆ ಮಂಗಳಸೂತ್ರವನ್ನು ತಾವೇ ವಿನ್ಯಾಸಗೊಳಿಸಿದ್ದ ನಟಿ ರಶ್ಮಿಕಾ ಮಂದಣ್ಣ

ವೇದಿಕೆಯ ಮೇಲೆ ಕೃತಿ ಮತ್ತು ರಶ್ಮಿಕಾ ಅವರು ತಮ್ಮ ಗೆಳತನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡುವಾಗ ಶುರುವಾದ ಸ್ನೇಹ, ಶೂಟಿಂಗ್ ವೇಳೆ ತುಂಬಾ ಸುಲಭ ಮತ್ತು ಆರಾಮದಾಯಕವಾಗಿತ್ತು ಎಂದರು. ಆಗ ಶಾಹಿದ್ ಕಪೂರ್ ತಮಾಷೆ ಮಾಡುತ್ತಾ, ‘ನಿಮ್ಮಿಬ್ಬರ ನಡುವಿನ ಈ ನ್ಯಾಚುರಲ್ ಕೆಮಿಸ್ಟ್ರಿಯೇ ಜನ ನಿಮ್ಮನ್ನು ಲೆಸ್ಬಿಯನ್ ಜೋಡಿ ಅಂದುಕೊಳ್ಳಲು ಕಾರಣವಿರಬಹುದು’ ಎಂದರು.

ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಕೃತಿ ಸನನ್, ‘ಇದು ನಮ್ಮ ಸಮಾಜದ ಬೇಸರ ತರಿಸುವ ಯೋಚನೆ. ಇಬ್ಬರು ಹುಡುಗರು ಒಟ್ಟಿಗಿದ್ದರೆ ಅದನ್ನು ಬ್ರೋಮ್ಯಾನ್ಸ್ ಎನ್ನುತ್ತಾರೆ. ಅದೇ ಇಬ್ಬರು ಹುಡುಗಿಯರು ಆತ್ಮೀಯವಾಗಿದ್ದರೆ ಅವರು ಕೇವಲ ಸ್ನೇಹಿತರಾಗಿರಲು ಸಾಧ್ಯವೇ ಇಲ್ಲ ಎಂದು ಜನ ಅಂದುಕೊಳ್ಳುತ್ತಾರೆ. ಅವರ ಮಧ್ಯೆ ಬೇರೇನೋ ಇರಬೇಕು ಅಂತ ಯೋಚಿಸುತ್ತಾರೆ’ ಎಂದು ಸಮಾಜದ ಮನಸ್ಥಿತಿಯನ್ನು ಟೀಕಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *