ನವದೆಹಲಿ, ಜೂನ್ 25: ವಿಶ್ವದಾದ್ಯಂತ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ವ್ಯಾಪಾರ ಬಿಕ್ಕಟ್ಟು ಮತ್ತು ಪಶ್ಚಿಮ ಏಷ್ಯಾದ ಆರ್ಥಿಕ ಸವಾಲುಗಳು ಮುಂದುವರಿದಿದ್ದರೂ, ಜಾಗತಿಕ ಕಾರ್ಪೊರೇಟ್ ವಲಯಕ್ಕೆ ಭಾರತದ ಮೇಲಿರುವ ಭರವಸೆ ಕುಗ್ಗಿಲ್ಲ. ವಿಶ್ವದ ಪ್ರಮುಖ ಉದ್ಯಮ ಸಂಸ್ಥೆಗಳು ಭಾರತವನ್ನು ಮುಂದಿನ ದೂಡ್ಡ ಆರ್ಥಿಕ ಬೆಳವಣಿಗೆಯ ಇಂಜಿನ್ ಎಂದು ಗುರುತಿಸಿದ್ದು, ದೇಶದಲ್ಲಿ ಭಾರಿ ಪ್ರಮಾಣದ ಮಲ್ಟಿ-ಬಿಲಿಯನ್ ಡಾಲರ್ ಹೂಡಿಕೆಗಳನ್ನು (Investments) ಮಾಡಲು ಮುಂದಾಗಿವೆ.
ಇತ್ತೀಚಿನ ತಿಂಗಳುಗಳಲ್ಲಿ ಗೂಗಲ್, ಅಮೆಜಾನ್ ಮತ್ತು ಏರ್ಟ್ರಂಕ್ನಂತಹ ಜಾಗತಿಕ ದೈತ್ಯರು ಭಾರತದ ಡಿಜಿಟಲ್ ಹಾಗೂ ಕೈಗಾರಿಕಾ ಮೂಲಸೌಕರ್ಯವನ್ನು ವಿಸ್ತರಿಸಲು ಬೃಹತ್ ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ
ಗೂಗಲ್ — 15 ಬಿಲಿಯನ್ ಡಾಲರ್ (ಫೆಬ್ರವರಿ 18, 2026):
ಗೂಗಲ್ ಸಂಸ್ಥೆಯು ಭಾರತದಲ್ಲಿ 5 ವರ್ಷಗಳ ಅವಧಿಯ ಸುಮಾರು 15 ಶತಕೋಟಿ ಡಾಲರ್ ಎಐ (AI) ಮೂಲಸೌಕರ್ಯ ಯೋಜನೆಯನ್ನು ಘೋಷಿಸಿದೆ. ಇದು ಸಬ್ಸೀ ಕನೆಕ್ಟಿವಿಟಿ (ಸಮುದ್ರಾಂತರ ಸಂಪರ್ಕ), ಡೇಟಾ ಸೆಂಟರ್ಗಳು, ಕ್ಲೌಡ್ ಸಾಮರ್ಥ್ಯ ಮತ್ತು ಭಾರತದಲ್ಲಿ ಎಐ ಕೌಶಲ್ಯ ಅಭಿವೃದ್ಧಿಯನ್ನು ಒಳಗೊಂಡಿದೆ.
ಎಬಿಬಿ — 75 ಮಿಲಿಯನ್ ಡಾಲರ್ (ಮಾರ್ಚ್ 9, 2026):
ಎಬಿಬಿ ಕಂಪನಿಯು ಪ್ರಮುಖ ಕೈಗಾರಿಕಾ ವಲಯಗಳಲ್ಲಿ ಉತ್ಪಾದನೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸಾಮರ್ಥ್ಯಗಳನ್ನು ವಿಸ್ತರಿಸಲು ಭಾರತದಲ್ಲಿ 75 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.
ಏರ್ಟ್ರಂಕ್ — 30 ಬಿಲಿಯನ್ ಡಾಲರ್ (ಜೂನ್ 5, 2026):
ಆಸ್ಟ್ರೇಲಿಯಾದ ಏರ್ಟ್ರಂಕ್ ಸಂಸ್ಥೆಯು 2030ರ ವೇಳೆಗೆ 5 ಗಿಗಾವ್ಯಾಟ್ (GW) ಸಾಮರ್ಥ್ಯದ ಡೇಟಾ ಸೆಂಟರ್ ಅನ್ನು ನಿರ್ಮಿಸಲು ಭಾರತದಲ್ಲಿ 30 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ.
ಸಿಪಿಪಿ ಇನ್ವೆಸ್ಟ್ಮೆಂಟ್ಸ್ — 7,000 ಕೋಟಿ ರೂ. (ಜೂನ್ 17, 2026):
ಕೆನಡಾ ಪೆನ್ಷನ್ ಪ್ಲಾನ್ ಇನ್ವೆಸ್ಟ್ಮೆಂಟ್ ಬೋರ್ಡ್, ಭಾರತದ ಡಿಜಿಟಲ್ ಮೂಲಸೌಕರ್ಯ ಮತ್ತು ಹೈಪರ್ಸ್ಕೇಲ್ ಡೇಟಾ ಸೆಂಟರ್ ಸಾಮರ್ಥ್ಯವನ್ನು ವಿಸ್ತರಿಸಲು ‘CtrlS ಡೇಟಾಸೆಂಟರ್ಸ್’ ಜೊತೆಗೆ 7,000 ಕೋಟಿ ರೂ.ವರೆಗೆ ಹೂಡಿಕೆ ಮಾಡಲು ಬದ್ಧವಾಗಿದೆ.
ಸೈಂಟ್-ಗೋಬೈನ್— 1 ಬಿಲಿಯನ್ ಯುರೋ (ಜೂನ್ 18, 2026):
ಭಾರತವನ್ನು ತನ್ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದೆಂದು ಕರೆದಿರುವ ಸೈಂಟ್-ಗೋಬೈನ್ ಸಂಸ್ಥೆಯು, ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 1 ಬಿಲಿಯನ್ ಯುರೋ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಅಮೆಜಾನ್ — 48 ಬಿಲಿಯನ್ ಡಾಲರ್ (ಜೂನ್ 25, 2026):
ಅಮೆಜಾನ್ ಸಿಇಒ ಆ್ಯಂಡಿ ಜಸ್ಸಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಹೊಸ ಎಐ ಮತ್ತು ಕ್ಲೌಡ್ ಮೂಲಸೌಕರ್ಯ ವಿಸ್ತರಣೆ ಸೇರಿದಂತೆ 2030ರ ವೇಳೆಗೆ ಭಾರತದಲ್ಲಿ ಅಮೆಜಾನ್ನ ಒಟ್ಟು ಹೂಡಿಕೆಯನ್ನು 48 ಬಿಲಿಯನ್ ಡಾಲರ್ಗೆ (ಸುಮಾರು 4 ಲಕ್ಷ ಕೋಟಿ ರೂ.) ಏರಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಒರಾಕಲ್ನಲ್ಲಿ ಒಂದು ವರ್ಷದಲ್ಲಿ ಕೆಲಸ ಕಳೆದುಕೊಂಡ 21,000 ಉದ್ಯೋಗಿಗಳು; ಎಐನಲ್ಲಿ ಹೂಡಿಕೆ ಮಾಡಲಿರುವ ಐಟಿ ದಿಗ್ಗಜ
ಅಮೆಜಾನ್ನ 48 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಮುಕ್ತಾಯಗೊಂಡ ಈ ಬೃಹತ್ ಒಪ್ಪಂದಗಳ ಸರಣಿಯು ಜಾಗತಿಕ ಮಟ್ಟದಲ್ಲಿ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಜಾಗತಿಕ ಸಿಇಒಗಳು ಭಾರತವನ್ನು ಮುಂದಿನ ದೊಡ್ಡ ಆರ್ಥಿಕ ಬೆಳವಣಿಗೆಯ ಇಂಜಿನ್ ಆಗಿ ನೋಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಮುಂಚಿತವಾಗಿಯೇ ಭಾರತದ ಮಾರುಕಟ್ಟೆ ಪ್ರವೇಶಿಸಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಜಾಗತಿಕ ಹೂಡಿಕೆಗೆ ಭಾರತವೇ ಮೊದಲ ಆದ್ಯತೆ ಏಕೆ?:
– ಜಾಗತಿಕ ಮಾರುಕಟ್ಟೆಗಳು ಏರಿಳಿತ ಕಾಣುತ್ತಿದ್ದರೂ, ಭಾರತದ ಆರ್ಥಿಕ ಬೆಳವಣಿಗೆಯ ದರ (GDP Growth) ಸ್ಥಿರವಾಗಿದೆ.
– ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಮತ್ತು ತಂತ್ರಜ್ಞಾನದ ಅಳವಡಿಕೆ ವೇಗವಾಗಿ ಹೆಚ್ಚುತ್ತಿರುವುದರಿಂದ, ಜಾಗತಿಕ ಟೆಕ್ ಕಂಪನಿಗಳಿಗೆ ಭಾರತ ಅತ್ಯಂತ ಆಕರ್ಷಕ ಮಾರುಕಟ್ಟೆಯಾಗಿದೆ.
– ಸರ್ಕಾರದ ಪ್ರೋತ್ಸಾಹಕ ಯೋಜನೆಗಳು (PLI Schemes) ಮತ್ತು ಮೂಲಸೌಕರ್ಯ ಅಭಿವೃದ್ಧಿಯು ಜಾಗತಿಕ ಉತ್ಪಾದನಾ ಕಂಪನಿಗಳಿಗೆ ಪೂರಕ ವಾತಾವರಣ ನಿರ್ಮಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ