ಬೆಂಗಳೂರು, ಆಗಸ್ಟ್ 02: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುವಂತೆ CWMA ನೀಡಿರುವ ಆದೇಶಕ್ಕೆ ಸದ್ಯ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಿವೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ತಮಿಳುನಾಡು ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ‘ತಮಿಳುನಾಡು ಮತ್ತು ಕರ್ನಾಟಕ ಭಾರತ-ಪಾಕಿಸ್ತಾನವಲ್ಲ, ಕರ್ನಾಟಕ ಸಿಎಂ ಜತೆ ತಮಿಳುನಾಡು ಸಿಎಂ ಚರ್ಚಿಸುವುದೇ ಪರಿಹಾರ’ ಎಂದು ಹೇಳಿದ್ದಾರೆ.
ತಮಿಳುನಾಡಿನ ಹಿತಾಸಕ್ತಿಯೇ ಮುಖ್ಯ: ಮಾಣಿಕಂ ಟ್ಯಾಗೋರ್
ಕಾವೇರಿ ನೀರು ಹಂಚಿಕೆ ವಿಚಾರ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಜಟಾಪಟಿ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಮುಖ್ಯಮಂತ್ರಿಗೆ ತಮ್ಮ ರಾಜ್ಯದ ಹಿತಾಸಕ್ತಿ ಹೇಗೆ ಮುಖ್ಯವೋ, ಅದೇ ರೀತಿ ನಮಗೆ ತಮಿಳುನಾಡಿನ ಹಿತಾಸಕ್ತಿಯೇ ಅತ್ಯಂತ ಮುಖ್ಯ’ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಒಗ್ಗಟ್ಟು, ತಮಿಳುನಾಡಿನಲ್ಲಿ ಭಿನ್ನಮತ
‘ಕಾವೇರಿ ವಿಷಯಕ್ಕೆ ಬಂದರೆ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ನಾಯಕರು ಒಂದಾಗಿ ನಿಲ್ಲುತ್ತಾರೆ. ಆದರೆ ತಮಿಳುನಾಡಿನಲ್ಲಿ ರಾಜಕೀಯ ಪಕ್ಷಗಳು ಪ್ರತ್ಯೇಕವಾಗಿ ನ್ಯಾಯಾಲಯದ ಮೊರೆ ಹೋಗುತ್ತಿವೆ. ಈಗಾಗಲೇ ತಮಿಳುನಾಡು ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಒಮ್ಮತದಿಂದ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ವಿರೋಧಿಸಿವೆ. ಹೀಗಿರುವಾಗ ಈಗ ಮತ್ತೆ ಸರ್ವಪಕ್ಷ ಸಭೆ ಕರೆಯಬೇಕೆಂದು ಕೇಳುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.
ತಮಿಳುನಾಡಿನ ರಾಜಕೀಯ ಪಕ್ಷಗಳ ಕಚ್ಚಾಟ
‘ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ನೀರು ತರುವುದಕ್ಕಿಂತ ಹೆಚ್ಚಾಗಿ ರಾಜ್ಯದ ಒಳಗಿನ ಆಂತರಿಕ ರಾಜಕೀಯವೇ ಜಾಸ್ತಿಯಾಗಿದೆ. ತಮಿಳುನಾಡಿನ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟ ಹೆಚ್ಚುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Cauvery Water Dispute: ‘ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ, ಆದರೆ ಡ್ಯಾಂ ತುಂಬುವ ಹಂತದಲ್ಲಿದೆ’ ಎಂದ ಡಿ.ಕೆ ಶಿವಕುಮಾರ್
ಇನ್ನು ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್. ಅವರ ಹಾದಿಯಲ್ಲೇ ಪ್ರಸ್ತುತ ತಮಿಳುನಾಡು ಸಿಎಂ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಮತ್ತು ತಮಿಳುನಾಡು ಸಿಎಂ ವಿಜಯ್ ಮಾತುಕತೆಗೆ ತಮಿಳುನಾಡು ಕಾಂಗ್ರೆಸ್ನ ಸಂಪೂರ್ಣ ಬೆಂಬಲವಿದೆ’ ಎಂದಿದ್ದಾರೆ.
ರಾಹುಲ್ ಗಾಂಧಿ ತಮಿಳುನಾಡಿಗೆ ಬಂದ ತಕ್ಷಣ ನೀರು ಬಂದಿದೆ: ಮಾಣಿಕಂ ಟ್ಯಾಗೋರ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಅವರು ತಮಿಳುನಾಡಿಗೆ ಭೇಟಿ ನೀಡಿದ ತಕ್ಷಣವೇ ನೀರು ಬಂದಿದೆ. ಅವರು ಮತ್ತೆ ರಾಜ್ಯಕ್ಕೆ ಬಂದಾಗ ಇನ್ನೂ ಹೆಚ್ಚಿನ ಮಳೆಯಾಗಲಿದೆ’ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.