‘ಡ್ರಾಮಾ ಜೂನಿಯರ್ಸ್’ ಖ್ಯಾತಿಯ ಮಹಾಲಕ್ಷ್ಮಿ ನಟಿಸಿದ ‘ಕಿಲಾಡಿ ಮೇಘ’ (Kiladi Megha) ಸಿನಿಮಾದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಮೇಘ ಎಂಬ ಪಾತ್ರದಲ್ಲಿ ಮಹಾಲಕ್ಷ್ಮಿ ಅವರು ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಹಿರಿಯ ನಟ ಶಂಕರ್ ಅಶ್ವಥ್ (Shankar Ashwath) ಅವರು ದೈವಾರಾಧಕನ ಪಾತ್ರ ನಿರ್ವಹಿಸಿದ್ದಾರೆ ಎಂಬುದು ವಿಶೇಷ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಚಿತ್ರತಂಡದವರು ಮಾತನಾಡಿದ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.
‘ಸುಲೋಚನಾ ಪ್ರೊಡಕ್ಷನ್ಸ್’ ಮೂಲಕ ಸುಲೋಚನಾ ಸುಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಡಬ್ಬಿಂಗ್ ಕಲಾವಿದನಾಗಿ ಕೆಲಸ ಮಾಡಿರುವ ಬಿ.ಟಿ. ಮಂಜುನಾಥ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಣದ ಹಿಂದೆ ಹೋದಾಗ ಏನೇನೆಲ್ಲ ಆಗುತ್ತದೆ ಎಂಬುದನ್ನು ಹಾರರ್ ಕಥೆಯ ಮೂಲಕ ಈ ಸಿನಿಮಾದಲ್ಲಿ ಹೇಳಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನೃತ್ಯಕಲಾವಿದನಾಗಿ ಹಾಗೂ ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸಿರುವ ಸುಕುಮಾರ್ ಅವರು ಮೊದಲ ಬಾರಿಗೆ ‘ಕಿಲಾಡಿ ಮೇಘ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 13 ವರ್ಷದ ಹುಡುಗಿಯ ಸುತ್ತ ನಡೆಯುವ ಕಥೆಯಿದು ಎಂದು ನಿರ್ದೇಶಕ ಬಿ.ಟಿ. ಮಂಜುನಾಥ್ ಅರಗ ಅವರು ಹೇಳಿದರು.
‘ಮೊದಲು ಈ ಸಿನಿಮಾವನ್ನು ರಾಜೇಶ್ ರಾಜ ಅವರು ಆರಂಭಿಸಿದ್ದರು. ಕಾರಣಾಂತರಗಳಿಂದ ಅವರಿಗೆ ಚಿತ್ರವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಂತರ ನಾನು ಚಿತ್ರವನ್ನು ಕೈಗೆತ್ತಿಕೊಂಡು ಸಾಂಗ್, ಫೈಟ್ ಸೇರಿದಂತೆ ಉಳಿದ ಭಾಗ ಮುಗಿಸಿ ರಿಲೀಸ್ ಹಂತಕ್ಕೆ ತಂದಿದ್ದೇನೆ’ ಎಂದು ನಿರ್ದೇಶಕರು ಹೇಳಿದರು.
ಚಿತ್ರದ ನಿರ್ಮಾಪಕ ಸುಕುಮಾರ್ ಮಾತನಾಡಿ, ‘ಈ ಸಿನಿಮಾದಲ್ಲಿ ನಾನು ಕಲಾವಿದನಾಗಿ ನಟಿಸಲು ಹೋದವನು. ವಿಧಿ ಇಲ್ಲದೇ ನಾನೇ ನಿರ್ಮಾಪಕ ಆಗಬೇಕಾಯಿತು. ನಾನು ಮತ್ತು ಮಂಜುನಾಥ್ ಇಬ್ಬರೂ ಡಾನ್ಸರ್ ಆಗಿ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇವೆ. ಹಣದ ಹಿಂದೆ ಹೋಗಬಾರದು ಎನ್ನುವುದೇ ಕಿಲಾಡಿ ಮೇಘ ಸಿನಿಮಾದ ಕಥೆ’ ಎಂದರು.
ಇದನ್ನೂ ಓದಿ: ನಿನ್ನೆ-ಮೊನ್ನೆ ಬಂದ ಬಚ್ಚಾ ಎಂದಿದ್ದ ಶಂಕರ್ ಅಶ್ವತ್ಥ್ ವಿರುದ್ಧ ಮನೆ ಮಂದಿಯೆಲ್ಲಾ ಒಟ್ಟಾಗಿ ತಿರುಗಿ ಬಿದ್ರು!
ಶಂಕರ್ ಅಶ್ವಥ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ನಾನು ನಿಜವಾಗಿಯೂ ಅನುಭವಿಸಿ ಮಾಡಿದಂಥ ಪಾತ್ರ ಇದು. ಯಾವುದೋ ಒಂದು ಜೀವ ತುಡಿತಕ್ಕೆ ಒಳಗಾಗಿರುತ್ತದೆ. ಅದನ್ನು ರಕ್ಷಣೆ ಮಾಡಲು ನಾನು ಬರುತ್ತೇನೆ’ ಎಂದು ಅವರು ಹೇಳಿದರು. ಕೆ.ಎಂ. ಇಂದ್ರ ಅವರ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.