
ಬೆಂಗಳೂರು, ಮಾ.19: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಬಿಎಂಟಿಸಿ ಚಾಲಕರ ಅಟ್ಟಹಾಸ ಮುಂದುವರಿದಿದೆ. ನಿನ್ನೆ ರಾತ್ರಿ ಸುಮಾರು 7:30ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಳಿ ಮದ್ಯದ ಅಮಲಿನಲ್ಲಿ ಬಸ್ ಚಲಾಯಿಸುತ್ತಿದ್ದ ಚಾಲಕನೊಬ್ಬ ಮಹಿಳಾ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾನೆ. KA 57 F 3660 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್ ಚಾಲಕ ಪೂರ್ಣ ಪ್ರಮಾಣದಲ್ಲಿ ಮದ್ಯ ಸೇವಿಸಿ ಬಸ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್ ಚಲಾಯಿಸುತ್ತಿದ್ದುದನ್ನು ಕಂಡು ಪ್ರಯಾಣಿಕರು ಭೀತಿಗೊಳಗಾಗಿದ್ದರು. ಚಾಲಕನ ವರ್ತನೆಯಿಂದ ಗಾಬರಿಗೊಂಡ ಮಹಿಳೆಯೊಬ್ಬರು ಬಸ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಬಸ್ ನಿಲ್ಲಿಸದ ಚಾಲಕ, ಮಹಿಳೆಯ ಜೊತೆ ಉದ್ಧಟತನದಿಂದ ವಾಗ್ವಾದಕ್ಕಿಳಿದಿದ್ದಾನೆ. ಚಾಲಕನ ಅಸಭ್ಯ ವರ್ತನೆ ಮತ್ತು ಆತ ಮದ್ಯ ಸೇವಿಸಿರುವುದನ್ನು ಖಚಿತಪಡಿಸಿಕೊಳ್ಳಲು ಮಹಿಳೆ ತನ್ನ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ವರದಿ: ನಟರಾಜ್ ಟಿವಿ9 ಕನ್ನಡ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ