Headlines

ಕುರಿಗಾಹಿಗಳ ಮೇಲೆ ಜಮೀನು ಮಾಲೀಕರ ಅಟ್ಟಹಾಸ: ಕುರಿಗಳು ತೋಟಕ್ಕೆ ನುಗ್ಗಿದ್ದಕ್ಕೆ ಮನಸೋ ಇಚ್ಛೆ ಥಳಿತ – Kannada News | Shepherds Attacked by Landowners After sheep Entering Arecanut Farm

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿಗಾಹಿImage Credit source: tv9 kannada

ದಾವಣಗೆರೆ, ಏಪ್ರಿಲ್​ 25: ಕುರಿಗಳು ತೋಟಕ್ಕೆ ನುಗ್ಗಿದವು ಎಂಬ ಕ್ಷುಲ್ಲಕ ಕಾರಣಕ್ಕಾಗಿ ಜಮೀನು ಮಾಲೀಕರು ಕುರಿಗಾಹಿ ತಂದೆ-ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ (Assault) ಮಾಡಿದ ಘಟನೆ ದಾವಣಗೆರೆ (davanagere) ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹಲ್ಲೆಯ ತೀವ್ರತೆಗೆ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಹಲ್ಲೆ ಮಾಡಿದ್ದಲ್ಲದೆ ಜೆಸಿಬಿಯಿಂದ ಗುಂಡಿ ತೆಗೆದು ಹೂತು ಹಾಕುವುದಾಗಿ ಬೆದರಿಕೆ ಕೂಡ ಹಾಕಲಾಗಿದೆ. ನಾಗರಾಜ್(18) ಮತ್ತು ಬಾಳಪ್ಪ(40) ಹಲ್ಲೆಗೊಳಗಾದ ಕುರಿಗಾಹಿಗಳು. ಹದಡಿ ಪೊಲೀಸ್ ಠಾಣೆಗೆ ಗಾಯಾಳು ಬಾಳಪ್ಪರಿಂದ ದೂರು ನೀಡಲಾಗಿದೆ.

ದಾವಣಗೆರೆ ತಾಲೂಕಿನ ನಾಗರಸನಹಳ್ಳಿಯ ಅಡಕೆ ತೋಟದಲ್ಲಿ ಈ ಕೃತ್ಯ ನಡೆದಿದೆ. ಪಕ್ಕದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಕೇವಲ 4 ಕುರಿಗಳು ಅಕ್ಕಪಕ್ಕದ ಅಡಕೆ ತೋಟಕ್ಕೆ ನುಗ್ಗಿದ್ದವು. ಇದರಿಂದ ಕೆರಳಿದ ತೋಟದ ಮಾಲೀಕರು ಅಮಾನವೀಯವಾಗಿ ವರ್ತಿಸಿದ್ದಾರೆ.

ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಜಿಗುಪ್ಸೆ: ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಕುರಿಗಾಹಿ ಯುವಕ ಆತ್ಮಹತ್ಯೆ!

ಕಾರಿಗನೂರು ಗ್ರಾಮದ ನಿವಾಸಿಗಳಾದ ಪ್ರಕಾಶ್ ಮತ್ತು ವೀರೇಶ್ ಎಂಬುವವರು ಮೊದಲು ನಾಗರಾಜ್ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದಾರೆ. ಜಮೀನು ಮಾಲೀಕರು ಮನಸೋಇಚ್ಛೆ ಥಳಿಸಿದಕ್ಕೆ ನಾಗರಾಜ್ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮಗನ ಸ್ಥಿತಿ ಕಂಡು ಗಾಬರಿಯಾಗಿ ಪ್ರಶ್ನಿಸಲು ಹೋದ ತಂದೆ ಬಾಳಪ್ಪ ಅವರ ಮೇಲೂ ಜಮೀನು ಮಾಲೀಕರು ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾರೆ.

ಜೆಸಿಬಿಯಿಂದ ಹೂತು ಹಾಕುವ ಬೆದರಿಕೆ

ಇನ್ನೊಮ್ಮೆ ಕುರಿಗಳು ಅಡಕೆ ತೋಟಕ್ಕೆ ನುಗ್ಗಿದರೆ ನಿಮ್ಮನ್ನು ಬಿಡುವುದಿಲ್ಲ. ಜೆಸಿಬಿಯಿಂದ ಗುಂಡಿ ತೆಗೆದು ಇಲ್ಲೇ ಹೂತು ಹಾಕಿಬಿಡುತ್ತೇವೆ ಎಂದು ಜಮೀನು ಮಾಲೀಕರು ಕುರಿಗಾಹಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ನಾಗರಾಜ್ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಕುರಿ ಮೈತೊಳೆಯಲು ಕೆರೆಗೆ ಹೋಗಿದ್ದ ಸಹೋದರರು ನೀರುಪಾಲು: ಬದುಕು ದುರಂತ ಅಂತ್ಯ

ಇನ್ನು ತಮ್ಮ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿರುವ ಪ್ರಕಾಶ್ ಮತ್ತು ವೀರೇಶ್ ವಿರುದ್ಧ ಗಾಯಾಳು ಬಾಳಪ್ಪ ಅವರು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *