ಬೆಂಗಳೂರು, ಆಗಸ್ಟ್ 01: ಹಾಲು ನೀಡಿ ರೈತರ ಬದುಕಿಗೆ ಆಸರೆಯಾಗಿದ್ದ ಜಾನುವಾರುಗಳಿಗೆ ಕರ್ನಾಟಕ ಹಾಲು ಮಹಾಮಂಡಳ (KMF) ಕಳಪೆ ಪಶು ಆಹಾರ ನೀಡಿ ವಿಷವುಣಿಸುತ್ತಿದೆಯಾ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ. ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ಪಶು ಆಹಾರ ತಯಾರಿಸುತ್ತಿರುವುದು ಅಷ್ಟೇ ಅಲ್ಲದೆ, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಕಳಪೆ ಆಹಾರ ಸೇವಿಸಿ ಕಳೆದ ಎರಡು ತಿಂಗಳಿನಲ್ಲಿ ಬರೋಬ್ಬರಿ 1,600 ಹಸುಗಳು ಸಾವನ್ನಪ್ಪಿದ್ದು, ಸಾವಿರಾರು ಜಾನುವಾರುಗಳು ರೋಗರುಜಿನದಿಂದ ನರಳುತ್ತಿವೆ.
ರಾಜಾನುಕುಂಟೆ ಘಟಕದಲ್ಲಿ ಕೋಟ್ಯಂತರ ರೂ. ವಂಚನೆ, ಲ್ಯಾಬ್ ವರದಿ ಬಹಿರಂಗ!
ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿಯಲ್ಲಿ ಕೆಎಂಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾರಿ ಗೋಲ್ಮಾಲ್ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪಶು ಆಹಾರಕ್ಕೆ ಅಗತ್ಯವಿರುವ ಕಾಕಂಬಿ (Molasses) ಖರೀದಿ ವೇಳೆಯಲ್ಲಿ ಅತಿ ಕಡಿಮೆ ಗುಣಮಟ್ಟದ TRS (Total Reducing Sugars) ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಅದನ್ನು ಖರೀದಿಸಿದ್ದಾರೆ.
ನಿಯಮಗಳ ಪ್ರಕಾರ ಲ್ಯಾಬ್ ಪರೀಕ್ಷೆ ನಡೆಸಿ ಗುಣಮಟ್ಟ ದೃಢಪಟ್ಟ ಮೇಲಷ್ಟೇ ಪಶು ಆಹಾರ ತಯಾರಿಸಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬರೋಬ್ಬರಿ 86,000 ಮೆಟ್ರಿಕ್ ಟನ್ ಕಳಪೆ ಪಶು ಆಹಾರ ಉತ್ಪಾದನೆಯಾಗಿದೆ. ಈ ಕಳಪೆ ಕಚ್ಚಾ ವಸ್ತುಗಳ ಸತ್ಯಾಸತ್ಯತೆಯ ಲ್ಯಾಬ್ ರಿಪೋರ್ಟ್ (Lab Report) ‘ಟಿವಿ9’ ಗೆ ಲಭ್ಯವಾಗಿದೆ.
ಹಾಲಿನ ಇಳುವರಿ ಕುಸಿತ, ಗರ್ಭ ಧರಿಸದೆ ನರಳುತ್ತಿರುವ ಹಸುಗಳು!
ಕಳಪೆ ಗುಣಮಟ್ಟದ ‘ನಂದಿನಿ ಪಶು ಆಹಾರ’ ಸೇವನೆಯಿಂದ ಜಾನುವಾರುಗಳ ಆರೋಗ್ಯ ಸಂಪೂರ್ಣ ಕ್ಷೀಣಿಸಿದೆ. ಕೆಟ್ಟ ವಾಸನೆ ಹಾಗೂ ಕಳಪೆ ಮಟ್ಟದ ಕಾರಣಕ್ಕಾಗಿ ಹಸುಗಳು ಪಶು ಆಹಾರ ತಿನ್ನಲು ನಿರಾಕರಿಸುತ್ತಿವೆ. ಆಹಾರ ಸೇವಿಸದ ಕಾರಣ ಹಸುಗಳು ಗರ್ಭ ಧರಿಸದೆ, ಬಡಕಲಾಗಿ ಅನಾರೋಗ್ಯದಿಂದ ನರಳುತ್ತಿದ್ದು, 1,600 ಜಾನುವಾರುಗಳು ಅಸಹಜವಾಗಿ ಮೃತಪಟ್ಟಿವೆ. ಜಾನುವಾರುಗಳು ಕಾಯಿಲೆಗೆ ಬಿದ್ದಿರುವುದರಿಂದ ಹಾಲಿನ ಇಳುವರಿ ತೀವ್ರವಾಗಿ ಕುಸಿದಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ರೈತರ ಮೇಲೆ ನಂದಿನಿ ಪಶು ಆಹಾರ ಖರೀದಿಗೆ ಒತ್ತಡ!
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್, ನೆಲಮಂಗಲ, ರಾಮನಗರ ಮತ್ತು ಚನ್ನಪಟ್ಟಣ ಭಾಗದ ಹೈನುಗಾರರಲ್ಲಿ ತೀವ್ರ ಆತಂಕ ಆವರಿಸಿದೆ. ಪ್ರತಿಯೊಂದು ಡೈರಿ ಸೊಸೈಟಿಯಲ್ಲೂ ಸಣ್ಣ ಪ್ರಮಾಣದ ವ್ಯತ್ಯಾಸವಿದ್ದರೂ ಹಾಲನ್ನು ತಿರಸ್ಕರಿಸುವ ಅಧಿಕಾರಿಗಳು, ರೈತರಿಗೆ ಅನಿವಾರ್ಯವಾಗಿ ನಂದಿನಿ ಪಶು ಆಹಾರವನ್ನೇ ಖರೀದಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಬಮೂಲ್ (BAMUL) ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 14,500 ಮೆಟ್ರಿಕ್ ಟನ್ ಪಶು ಆಹಾರ ಮಾರಾಟವಾಗುತ್ತಿದ್ದು, ಆಹಾರ ಸೇವಿಸದೆ ಹಸುಗಳು ಸಾಯುತ್ತಿರುವುದರಿಂದ ಆಕ್ರೋಶಗೊಂಡ ರೈತರು ಟನ್‌ಗಟ್ಟಲೆ ಪಶು ಆಹಾರವನ್ನು ರಾಜಾನುಕುಂಟೆ ಘಟಕಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ರೈತ ಕುಟುಂಬಗಳು ಈಗ ಕಂಗಾಲಾಗಿದ್ದು, ಈ ಹಗರಣದ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:30 am, Sat, 1 August 26