ತುಮಕೂರು, ಆ.5: ಚಾಲಕನೊಬ್ಬನ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕನೊಬ್ಬನ ಪ್ರಾಣ ಉಳಿದಿರುವ ನಿದರ್ಶನವೊಂದು ತುಮಕೂರಿನಲ್ಲಿ ನಡೆದಿದೆ. ತುಮಕೂರಿನಿಂದ ಮಧುಗಿರಿಗೆ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಮಾರ್ಗಮಧ್ಯೆ ದಿಢೀರ್ ಹೃದಯಾಘಾತ (Heart Attack) ಸಂಭವಿಸಿದಾಗ, ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ನೇರವಾಗಿ ಆಸ್ಪತ್ರೆಯ ಮುಂಭಾಗಕ್ಕೇ ತಂದು ನಿಲ್ಲಿಸಿ ಜೀವ ಉಳಿಸಿದ್ದಾರೆ. ಕೆಎಸ್ಆರ್ಟಿಸಿ ಬಸ್ ತುಮಕೂರಿನಿಂದ ಮಧುಗಿರಿ ಮಾರ್ಗವಾಗಿ ಸಾಗುತ್ತಿದ್ದಾಗ, ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಪ್ರಯಾಣಿಕ ಹೃದಯಾಘಾತದಿಂದ ತೀವ್ರ ಅಸ್ವಸ್ಥರಾಗುತ್ತಿರುವುದನ್ನು ಗಮನಿಸಿದ ಚಾಲಕ ತಡಮಾಡದೆ ಸ್ಪಂದಿಸಿದ್ದಾರೆ. ತುಮಕೂರು-ಮಧುಗಿರಿ ರಸ್ತೆಯಲ್ಲಿರುವ ಸಾಚಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದಲ್ಲೇ ಕೆಎಸ್ಆರ್ಟಿಸಿ ಬಸ್ಸನ್ನು ನಿಲ್ಲಿಸಿ, ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಯ ನೆರವಿನಿಂದ ಪ್ರಯಾಣಿಕನನ್ನು ಒಳಗೆ ದಾಖಲಿಸಿದ್ದಾರೆ. ಚಾಲಕನ ಈ ಸಮಯೋಚಿತ ನಿರ್ಧಾರದಿಂದಾಗಿ ಪ್ರಯಾಣಿಕನಿಗೆ ತಕ್ಷಣವೇ ತುರ್ತು ವೈದ್ಯಕೀಯ ಚಿಕಿತ್ಸೆ ಲಭ್ಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿದ ಚಾಲಕನ ಮಾನವೀಯತೆ ಹಾಗೂ ಸಮಯಪ್ರಜ್ಞೆಗೆ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ