Headlines

ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್​ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು… – Kannada News | HCL 50 years, co founder Ajai Chowdhry shares inspirational story of the company’s journey

ಎಚ್​ಸಿಎಲ್​ನ ಆರು ಸಂಸ್ಥಾಪಕರುImage Credit source: X user @AjaiChowdhry

ನವದೆಹಲಿ, ಆಗಸ್ಟ್ 12: ಎಚ್​ಸಿಎಲ್ ಇವತ್ತು ಭಾರತದ ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದು. ಭಾರತದಲ್ಲಿ ಮೊದಲು ಕಂಪ್ಯೂಟರ್ ತಯಾರಿಸಿದ ಕಂಪನಿಗಳಲ್ಲಿ ಒಂದು. ಲಕ್ಷಾಂತರ ಕೋಟಿ ರೂ ಮೌಲ್ಯದ ಕಂಪನಿ ಎನಿಸಿದೆ. ಈ ಕಂಪನಿ ಶುರುವಾಗಿ 50 ವರ್ಷ ಗತಿಸಿದೆ. ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ದಿಗ್ಗಜ ಸಂಸ್ಥೆಯಾಗಿ ಬೆಳೆದು ನಿಂತಿರುವ ಎಚ್‌ಸಿಎಲ್ (HCL) ಕೇವಲ ₹1.87 ಲಕ್ಷದ ಬಂಡವಾಳದಲ್ಲಿ ಆರಂಭವಾಗಿತ್ತು ಎಂಬ ಸತ್ಯ ಬಹಳ ಮಂದಿಗೆ ತಿಳಿದಿಲ್ಲ. ಕಂಪನಿಯ 50 ವರ್ಷದ ಸಂಭ್ರಮದ ಸಂದರ್ಭದಲ್ಲಿ ಈ ಐತಿಹಾಸಿಕ ಪಯಣವನ್ನು ಎಚ್‌ಸಿಎಲ್ ಸಹ-ಸಂಸ್ಥಾಪಕರಾದ ಅಜಯ್ ಚೌಧರಿ ಅವರು ತಮ್ಮ ‘X’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕೆಲಸಕ್ಕೆ ರಾಜೀನಾಮೆ, ಕಾರ್ ಮಾರಾಟ ಮತ್ತು ಆ ಹುಚ್ಚು ಧೈರ್ಯ

1976 ರಲ್ಲಿ ಕಂಪನಿಯನ್ನು ಆರಂಭಿಸಿದ ದಿನಗಳನ್ನು ನೆನಪಿಸಿಕೊಂಡ ಅಜಯ್ ಚೌಧರಿ, “ನಾವು ಆರು ಜನ ಇದ್ದೆವು—ಶಿವ್ ನಾಡಾರ್, ಅರ್ಜುನ್ ಮಲ್ಹೋತ್ರಾ, ಯೋಗೇಶ್ ವೈದ್ಯ, ಸುಭಾಷ್ ಅರೋರಾ, ಡಿ.ಎಸ್. ಪುರಿ ಮತ್ತು ನಾನು. ನಾವೆಲ್ಲರೂ ನಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದೆವು,” ಎಂದಿದ್ದಾರೆ.

ಅಜಯ್ ಚೌಧರಿ ಹಂಚಿಕೊಂಡ ಪೋಸ್ಟ್ ಇದು

ಆ ಸಮಯದಲ್ಲಿ ಭಾರತದಲ್ಲಿ ‘ಸ್ಟಾರ್ಟ್‌ಅಪ್’ ಅಥವಾ ‘ವೆಂಚರ್ ಕ್ಯಾಪಿಟಲ್’ ಎಂಬ ಪರಿಕಲ್ಪನೆಗಳೇ ಇರಲಿಲ್ಲ. ಆಸ್ತಿ ಪತ್ರಗಳಿರದ ಯುವಕರಿಗೆ ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುತ್ತಿರಲಿಲ್ಲ. ಕಂಪ್ಯೂಟರ್ ಅಂದರೆ ಏನು ಎಂದೇ ಹೆಚ್ಚಿನ ಜನರಿಗೆ ತಿಳಿದಿರದ ಆ ಕಾಲದಲ್ಲಿ, ಮೈಕ್ರೋಪ್ರೊಸೆಸರ್ ಜಗತ್ತನ್ನೇ ಬದಲಾಯಿಸಲಿದೆ ಎಂಬ ನಂಬಿಕೆಯಿಂದ ಈ ಆರು ಜನ ಯುವಕರು ತಮಗಿದ್ದ ಉಳಿತಾಯದ ಹಣ, ಸಾಲ ಹಾಗೂ ಒಬ್ಬರ ಕಾರನ್ನು ಮಾರಿ ಒಟ್ಟುಗೂಡಿಸಿದ್ದು ₹1.87 ಲಕ್ಷ!

ಇದನ್ನೂ ಓದಿ: ಈ ವರ್ಷ 8.11 ಲಕ್ಷ ಕೋಟಿ ರೂ ದಾಟಿದ ನಿವ್ವಳ ನೇರ ತೆರಿಗೆ ಸಂಗ್ರಹ; ಹಿಂದಿನ ವರ್ಷದಕ್ಕಿಂತ ಶೇ 23ರಷ್ಟು ಹೆಚ್ಚಳ

ದೆಹಲಿಯ ‘ಗೋಲ್ಫ್ ಲಿಂಕ್ಸ್’ ಪ್ರದೇಶದಲ್ಲಿದ್ದ ಒಂದು ಸಣ್ಣ ‘ಬಾರ್ಸಾತಿ’ (ಟೆರೇಸ್ ಕೊಠಡಿ) ಅವರ ಮೊದಲ ಕಚೇರಿಯಾಗಿತ್ತು. ಆಗ ಅವರ ಕಂಪನಿಯ ಹೆಸರು ‘ಮೈಕ್ರೋಕಾಂಪ್’ (Microcomp) ಆಗಿತ್ತು.

ಕಂಪ್ಯೂಟರ್ ಸಿದ್ದಗೊಳ್ಳುವ ಮುನ್ನವೇ ಮಾರಾಟಕ್ಕೆ ಧೈರ್ಯ

ತಮ್ಮ ಕಥೆಯ ಅತ್ಯಂತ ಸಾಹಸಮಯ ಭಾಗವನ್ನು ಹಂಚಿಕೊಂಡ ಚೌಧರಿ, “ಇನ್ನೂ ವಿನ್ಯಾಸ ಹಂತದಲ್ಲೇ ಇದ್ದ ಕಂಪ್ಯೂಟರ್ ಅನ್ನು ನಾವು ಮಾರಾಟ ಮಾಡಲು ಶುರು ಮಾಡಿದೆವು! ನಮ್ಮ ಬಳಿ ಕೇವಲ ಒಂದು ಬ್ರೋಷರ್ ಮತ್ತು ಕಂಪ್ಯೂಟರ್‌ನ ಒಂದು ಮಾದರಿ (Mock-up) ಇತ್ತು. ನಮ್ಮ ಮಾರಾಟ ಸಿಬ್ಬಂದಿ ಭಾರತದಾದ್ಯಂತ ಪ್ರತಿಯೊಂದು ಬಾಗಿಲು ತಟ್ಟಿ, ತಾವು ಎಂದಿಗೂ ಬಳಸದ ತಂತ್ರಜ್ಞಾನವನ್ನು ನಂಬಿ ಖರೀದಿಸುವಂತೆ ಉದ್ಯಮಿಗಳನ್ನು ಒಪ್ಪಿಸುತ್ತಿದ್ದರು,” ಎಂದು ಬರೆದುಕೊಂಡಿದ್ದಾರೆ. ಒಂದೆರಡು ಐಐಟಿಯಿಂದ ಪೂರಕ ಸ್ಪಂದನೆ ಸಿಕ್ಕಿತಂತೆ. ಆರ್ಡರ್ ಸಿಕ್ಕ ಬಳಿಕ ಮುಂದಿನ ಸವಾಲು ಇದ್ದದ್ದು ಕಂಪ್ಯೂಟರ್ ಅನ್ನು ತಯಾರಿಸುವ ಕೆಲಸ.

ಇವರ ಬಳಿ ಕಂಪ್ಯೂಟರ್ ತಯಾರಿಕೆಗೆ ಅಗತ್ಯವಿದ್ದ ಲೈಸೆನ್ಸ್ ಇರಲಿಲ್ಲ. ಆಗ ಇವರು ಹೋಗಿದ್ದ ‘ಯುಪಿ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್’ ಬಳಿ. ಆ ಸಂಸ್ಥೆಗೆ ಲೈಸೆನ್ಸ್ ಇತ್ತು, ಇವರ ಬಳಿ ತಂತ್ರಜ್ಞಾನ ಇತ್ತು. ಹೀಗೆ, ಈ ಎರಡು ಕಂಪನಿಗಳು ಸೇರಿ HCL (Hindustan Computers Limited) ಜನಿಸಿತು. ಐಐಟಿ ಖರಗ್‌ಪುರ ಮತ್ತು ಐಐಟಿ ಮದ್ರಾಸ್ ಸಂಸ್ಥೆಗಳಿಂದ ಎಚ್‌ಸಿಎಲ್‌ಗೆ ಮೊದಲ ಆರ್ಡರ್‌ಗಳು ಬಂದವು.

ಇದನ್ನೂ ಓದಿ: ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ

50 ವರ್ಷಗಳ ಕನಸಿನ ಹಾದಿ

ಸಣ್ಣ ಕೊಠಡಿಯಿಂದ ಆರಂಭವಾದ ಎಚ್‌ಸಿಎಲ್, ಕೇವಲ 4 ವರ್ಷಗಳಲ್ಲಿ ಸಿಂಗಾಪುರಕ್ಕೂ ಕಾಲಿಟ್ಟು ಬೆಳೆಯಿತು.

“50 ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, 1976 ರಲ್ಲಿ ಕುಳಿತಿದ್ದ ಆ ಆರು ಜನರ ‘ಈ ಹುಚ್ಚು ಕಲ್ಪನೆ ನಿಜವಾಗಲು ಸಾಧ್ಯವೇ?’ ಎಂಬ ಪ್ರಶ್ನೆ ನೆನಪಾಗುತ್ತದೆ. ದೊಡ್ಡ ಬ್ರಾಂಡ್, ದೊಡ್ಡ ಬ್ಯಾಲೆನ್ಸ್ ಶೀಟ್ ಇಲ್ಲದಿದ್ದರೂ ಹಾದಿ ಕಂಡುಕೊಳ್ಳುವ ನಮ್ಮ ಛಲವೇ ಎಚ್‌ಸಿಎಲ್‌ನ ನಿಜವಾದ ಕಥೆ,” ಎಂದು ಅಜಯ್ ಚೌಧರಿ ಭಾವನಾತ್ಮಕವಾಗಿ ಬರೆದಿದ್ದಾರೆ.

“ದೊಡ್ಡ ಕನಸು ಕಾಣಿ, ರಿಸ್ಕ್ ತೆಗೆದುಕೊಳ್ಳಿ ಮತ್ತು ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ” ಎಂಬ ಸಂದೇಶದೊಂದಿಗೆ ಅವರು ತಮ್ಮ ಪೋಸ್ಟ್ ಮುಗಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *