ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಮೂಲಕ ಭಾರತೀಯ ರಾಜಕೀಯದಲ್ಲೇ ಹೊಸ ಸಂಚಲನ ಮೂಡಿಸಿದೆ. ಟಿವಿಕೆ ಅಬ್ಬರಕ್ಕೆ ಆಡಳಿತಾರೂಢ ಎಐಎಡಿಎಂಕೆ ಪಕ್ಷವೇ ನೆಲಕಚ್ಚಿದೆ. ಈ ಐತಿಹಾಸಿಕ ಜಯದ ಹಿಂದೆ ವಿಜಯ್ ಅವರ ದಶಕಗಳ ಕಾಲದ ವ್ಯವಸ್ಥಿತ ಸಂಘಟನೆ ಮತ್ತು ಅಭಿಮಾನಿಗಳನ್ನು ಕಾರ್ಯಕರ್ತರನ್ನಾಗಿ ಬದಲಿಸಿದ ಚಾತುರ್ಯ ಅಡಗಿದೆ. ಆ ಬಗ್ಗೆ ಇಲ್ಲಿದೆ ವಿವರ.
1.ವಿಜಯ್ ಗೆಲುವಿನ ತಂತ್ರ ಬಯಲು
2.ಸಹಾಯ ಮಾಡಿತು ಅಭಿಮಾನಿ ಸಂಘಟನೆ
3. ಚಾಣಾಕ್ಷತೆಯಿಂದ ವಿಜಯ್ಗೆ ಗೆಲುವು
ವಿಜಯ್ ಅವರ ರಾಜಕೀಯಕ್ಕೆ ಕಾಲಿಡುವ ಘೋಷಣೆ ಮಾಡಿದ್ದು ಕೆಲ ವರ್ಷಗಳ ಹಿಂದೆ. 2024ರ ಫೆಬ್ರವರಿ 2ರಂದು ಪಕ್ಷ ಘೋಷಣೆ ಮಾಡಿದರು. ಹಲವು ವರ್ಷ ಸೈಕಲ್ ಹೊಡೆದರೂ ಸಿಗದ ಗೆಲುವು ಎರಡೇ ವರ್ಷಗಳಲ್ಲಿ ಸಿಗಲು ಹೇಗೆ ಸಾಧ್ಯ ಎಂಬುದು ಅನೇಕರ ಪ್ರಶ್ನೆ. ಆದರೆ, ಇದರ ಹಿಂದಿನ ಕಥೆ ಬೇರೆಯದೇ ಇದೆ.
ವಿಜಯ್ ಅವರ ದೊಡ್ಡ ಬಲ ಎಂದರೆ ಅಭಿಮಾನಿಗಳು. ಹಲವು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದ ವಿಜಯ್ಗೆ ಹುಚ್ಚು ಅಭಿಮಾನಿಗಳಿದ್ದಾರೆ. ಅವರು ಹೇಳಿದ್ದನ್ನು ಶಿರಸಾ ಪಾಲಿಸುತ್ತಾರೆ. ಇದು ಅವರಿಗೆ ಬಲ ತಂದಿತ್ತು. 2009ರಲ್ಲಿ ಅವರು ಆರಂಭಿಸಿದ ‘ವಿಜಯ್ ಮಕ್ಕಳ ಇಯಕ್ಕಂ’ (VMI) ಫೌಂಡೇಷನ್ ವಿಜಯ್ ಗೆಲುವಿನ ಹಿಂದಿರೋ ದೊಡ್ಡ ಬಲ.
ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾಗಲೇ ವಿಜಯ್ ತಮ್ಮ ಅಭಿಮಾನಿಗಳನ್ನು ಕೇವಲ ಸಿನಿಮಾ ಪ್ರಚಾರಕ್ಕೆ ಸೀಮಿತಗೊಳಿಸಲಿಲ್ಲ. ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿದ್ದರು. ರಕ್ತದಾನ, ಉಚಿತ ಆಹಾರ ವಿತರಣೆ ಮತ್ತು ಶಿಕ್ಷಣಕ್ಕೆ ನೆರವು ನೀಡುವ ಮೂಲಕ ಈ ಸಂಘಟನೆಯು ರಾಜ್ಯದ ಮೂಲೆ ಮೂಲೆಗಳಲ್ಲಿ ಬೇರೂರಿತ್ತು. ವಿಜಯ್ ಕೇವಲ ನಟನಾಗಿ ಮಾತ್ರ ಕಾಣದೆ, ಕಷ್ಟದಲ್ಲಿರುವ ವ್ಯಕ್ತಿಗಳಿಗೆ ನೆರವಾಗಿ ಹಾಗೂ ವಿಜಯ್ ಮಕ್ಕಳ ಇಯಕ್ಕಂ ಮೂಲಕ ಸಹಾಯ ಮಾಡುವ ವ್ಯಕ್ತಿಯಾಗಿ ಕಂಡರು. ಚುನಾವಣೆ ಸಮೀಪಿಸುತ್ತಿದ್ದಂತೆ, ಪ್ರತಿಯೊಂದು ಬೂತ್ ಮಟ್ಟದಲ್ಲೂ ಭದ್ರವಾದ ನೆಟ್ವರ್ಕ್ ರೂಪಿಸಿದರು.
ವ್ಯವಸ್ಥಿತ ಪಕ್ಷ ಸಂಘಟನೆ:
ರಾಜಕೀಯ ಪ್ರವೇಶಕ್ಕೂ ಮುನ್ನವೇ ವಿಜಯ್ ಅತ್ಯಂತ ಯೋಜಿತವಾಗಿ ಹೆಜ್ಜೆ ಇಟ್ಟಿದ್ದರು. ಕೆಳಹಂತದ ಕಾರ್ಯಕರ್ತರಿಗೆ ಜವಾಬ್ದಾರಿ ಹಂಚುವುದು, ಯುವಜನತೆಯನ್ನು ಆಕರ್ಷಿಸುವುದು ಮತ್ತು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಅವರ ಸಂಘಟನಾ ಶಕ್ತಿ ಯಶಸ್ವಿಯಾಯಿತು. ಅವರ ಸಿನಿಮಾ ಇಮೇಜ್ ಅನ್ನು ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಬಳಸಿಕೊಂಡಿದ್ದರು. ಸಿನಿಮಾಗಳ ಮೂಲಕ ಅವರ ರಾಜಕೀಯ ಸಿದ್ಧಾಂತವನ್ನು ಜನರಿಗೆ ತಲುಪಿಸಿದರು.
ಐಷಾರಾಮಿ ಜೀವನ ಮತ್ತು ಸರಳ ನಾಯಕತ್ವ:
ಚೆನ್ನೈನ ಸಮುದ್ರ ತೀರದಲ್ಲಿರುವ ಸುಮಾರು 80 ಕೋಟಿ ರೂಪಾಯಿ ಬೆಲೆಯ, ಹಾಲಿವುಡ್ ನಟ ಟಾಮ್ ಕ್ರ್ಯೂಸ್ ಅವರ ಮನೆಯಿಂದ ಸ್ಫೂರ್ತಿ ಪಡೆದ ಐಷಾರಾಮಿ ಬಂಗಲೆಯಲ್ಲಿ ವಿಜಯ್ ವಾಸವಿದ್ದರೂ, ಅಭಿಮಾನಿಗಳ ಪಾಲಿಗೆ ಅವರು ಎಂದಿಗೂ ಕೈಗೆಟುಕುವ ನಾಯಕನಾಗಿದ್ದರು. ಈ ನಿಕಟ ಸಂಪರ್ಕವೇ ಅವರ ಪಕ್ಷಕ್ಕೆ ಚುನಾವಣಾ ಸುನಾಮಿ ಎಬ್ಬಿಸಲು ಬೇಕಾದ ಶಕ್ತಿಯನ್ನು ನೀಡಿತು.
ಇದನ್ನೂ ಓದಿ: ವಿಜಯ್ ಗೆಲುವಿಗೆ ಕೇವಲ ‘ಸ್ಟಾರ್ ಗಿರಿ’ ಕಾರಣವೇ? ನಿಜ ಏನೆಂದು ಇಲ್ಲಿ ತಿಳಿಯಿರಿ
ಸಿನಿಮಾ ನಟನೊಬ್ಬ ಕೇವಲ ವರ್ಚಸ್ಸಿನಿಂದ ಮಾತ್ರವಲ್ಲದೆ, ಬಲಿಷ್ಠವಾದ ಸಂಘಟನಾ ಚಾಣಾಕ್ಷತೆಯಿಂದ ಹೇಗೆ ಅಧಿಕಾರ ಹಿಡಿಯಬಹುದು ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ. ದಶಕಗಳ ಕಾಲದ ಅಭಿಮಾನಿಗಳ ಪ್ರೀತಿಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಅವರ ಕಾರ್ಯತಂತ್ರ ಸಂಪೂರ್ಣ ಯಶಸ್ವಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.