ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ತಮ್ಮ ಹೊಸ ಸಿನಿಮಾ ‘ಕರ್ತವ್ಯ’ (Kartavya) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ‘ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. 2022ರಿಂದ ವರ್ಷಕ್ಕೆ ಒಂದೇ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಸೈಫ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಕ್ಕಳಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಹುಟ್ಟಿದ ನಂತರ ತಮಗೆ ಕುಟುಂಬದ ಪ್ರಾಮುಖ್ಯತೆ ತಿಳಿಯಿತು ಎಂದು ಸೈಫ್ ಅಲಿ ಖಾನ್ (Saif Ali Khan) ಅವರು ಹೇಳಿದ್ದಾರೆ.
‘ಇಂಡಿಯಾ ಟುಡೇ’ ಜೊತೆ ಮಾತನಾಡಿದ ಸೈಫ್, ನಟರು ತಮ್ಮ ಅಸ್ತವ್ಯಸ್ತವಾಗಿರುವ ಶೂಟಿಂಗ್ ವೇಳಾಪಟ್ಟಿಯಿಂದಾಗಿ ಅನುಭವಿಸುವ ವೈಯಕ್ತಿಕ ನಷ್ಟಗಳ ಬಗ್ಗೆ ಮಾತನಾಡಿದರು. ‘ನನ್ನ ವೃತ್ತಿಜೀವನದ ಬೆಳವಣಿಗೆಗಾಗಿ ನಾನು ವೈಯಕ್ತಿಕ ಜೀವನದಲ್ಲಿ ಸಾಕಷ್ಟು ತ್ಯಾಗಗಳನ್ನು ಮಾಡಿದ್ದೇನೆ. ನಟರಾಗಿ ನಮಗೆ ಸಿಗುವ ಬೆಂಬಲವನ್ನು ನಾವು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.
ಇದಕ್ಕೆ ಗಿರಿಶಿಖರವನ್ನು ಹತ್ತುವ ಉದಾಹರಣೆ ನೀಡಿದ ಸೈಫ್ ಅಲಿ ಖಾನ್ ಅವರು, ‘ಮನೆ ಎಂಬುದು ನಮಗೆ ಬೇಸ್ ಕ್ಯಾಂಪ್ ಇದ್ದಂತೆ. ಅಲ್ಲಿಗೆ ಬಂದು ವಿಶ್ರಾಂತಿ ಪಡೆದು, ಮತ್ತೆ ಬೆಟ್ಟ ಹತ್ತಲು ಸಜ್ಜಾಗಬೇಕು. ಆದರೆ ಯಾರಾದರೂ ಬೆಟ್ಟ ಹತ್ತುವುದರಲ್ಲೇ ಹೆಚ್ಚು ಸಮಯ ಕಳೆದರೆ, ಆ ಬೇಸ್ ಕ್ಯಾಂಪ್ ಒಂದು ದಿನ ಇಲ್ಲವಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ನಟರು ತಮ್ಮ ಕುಟುಂಬದ ಹಲವು ಪ್ರಮುಖ ಕ್ಷಣಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
‘ಈ ವಯಸ್ಸಿನಲ್ಲಿ ನಾನು ಕುಟುಂಬಕ್ಕೆ ಸಮಯ ನೀಡುವ ಬಗ್ಗೆ ಹೆಚ್ಚು ಜಾಗೃತನಾಗಿದ್ದೇನೆ. ತಡವಾಗಿ ಮಕ್ಕಳಾದ ನಂತರ, ಸಂಜೆ ಒಂದು ನಿರ್ದಿಷ್ಟ ಸಮಯಕ್ಕೆ ಮನೆಗೆ ತಲುಪಬೇಕು ಅನಿಸುತ್ತದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗಿನ ಶಿಫ್ಟ್ ನನಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಏಕೆಂದರೆ ಶೂಟಿಂಗ್ ಎಂದಿಗೂ 9ಕ್ಕೆ ಶುರುವಾಗಿ 9ಕ್ಕೆ ಮುಗಿಯುವುದಿಲ್ಲ. ಕೊನೆಯ ಶಾಟ್ ಮುಗಿಯುವಾಗ 9.30 ಆಗಿರುತ್ತದೆ. ಮನೆ ತಲುಪುವಾಗ ರಾತ್ರಿ 11 ಆಗಿರುತ್ತದೆ. ರಾತ್ರಿ 11 ಗಂಟೆಗೆ ಮನೆಗೆ ಸೇರಿದರೆ ಅದು ಜೀವನವೇ ಅಲ್ಲ. ಆದರೆ ನಾನು ಹಿಂದೆ ಇಂತಹ ತ್ಯಾಗಗಳನ್ನು ಮಾಡಿದ್ದೇನೆ’ ಎಂದು ಸೈಫ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಆದಿಪುರುಷ್’ ಸಿನಿಮಾ ನೋಡಿ ಸೈಫ್ ಅಲಿ ಖಾನ್ ಮಗನಿಗೂ ಬಂತು ಕೋಪ
ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಕರ್ತವ್ಯ’ ಸಿನಿಮಾ ಪ್ರಸ್ತುತ ನೆಟ್‌ಫ್ಲಿಕ್ಸ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಆಗುತ್ತಿದೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪರಾಧವೊಂದನ್ನು ಭೇದಿಸುವ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಎದುರಾಗುವ ಕಷ್ಟಗಳು ಮತ್ತು ತಮ್ಮ ಕರ್ತವ್ಯದ ನಡುವೆ ಅವರು ಸಿಲುಕಿಕೊಳ್ಳುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.