ಬೆಂಗಳೂರು, (ಮೇ 14): ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ರಾಜ್ಯದ ಶಾಲಾ-ಕಾಲೇಜುಗಳಲ್ಲಿ (School And Colleges) ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಇದು ಯಾರನ್ನಾದರೂ ಓಲೈಸುವ ಇಲ್ಲವೇ ನೋಯಿಸುವ ಉದ್ದೇಶದ ವಸ್ತ್ರಸಂಹಿತೆ ಅಲ್ಲ. ಎಲ್ಲ ಜಾತಿ-ಧರ್ಮಗಳ ಆಚರಣೆ, ಸಂಪ್ರದಾಯಗಳನ್ನು ಗೌರವಿಸುವ ವಸ್ತ್ರಸಂಹಿತೆಯಾಗಿದೆ.ಜಾತಿ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿರುವವರಿಗೆ ಇದರಿಂದ ನೋವಾಗಿರುವುದು ಸಹಜವೇ ಆಗಿದೆ. ಅವರು ಮೊದಲು ತಮ್ಮೊಳಗೆ ಇಣುಕಿ ಆತ್ಮವಿಮರ್ಶೆ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹಿಜಾಬ್ ಗೆ (Hijab) ಅನುಮತಿ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.
- ಹಿಜಾಬ್ಗೆ ಅನುಮತಿ ನೀಡಿದ್ದಕ್ಕೆ ವಿಪಕ್ಷಗಳ ಟೀಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ.
- ಸಂವಿಧಾನದ ಆಶಯವಾಗಿರುವ ಸರ್ವಧರ್ಮ ಸಮಭಾವದ ಆಶಯಕ್ಕೆ ಅನುಗುಣವಾಗಿಯೇ ಪರಿಷ್ಕೃತ ವಸ್ತ್ರಸಂಹಿತೆಯನ್ನು ಜಾರಿ.
- ಸಿಎಂ ಸಿದ್ದರಾಮಯ್ಯರಿಂದ ಮಾಧ್ಯಮ ಪ್ರಕಟಣೆ ಮೂಲಕ ಸಿದ್ದರಾಮಯ್ಯ ತಿರುಗೇಟು.
ರಾಜ್ಯ ಸರ್ಕಾರದಿಂದ ಹಿಜಾಬ್ ಗೆ ಅನುಮತಿ ನೀಡಿರುವುದಕ್ಕೆ ವಿಪಕ್ಷಗಳು ಟೀಕೆ ಮಾಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದು, ಇಂದು ದೇಶಾದ್ಯಂತ ಚರ್ಚೆಯಾಗುತ್ತಿರುವುದು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ರದ್ದಾಗಿರುವ ನೀಟ್ ಪರೀಕ್ಷೆಗಳ ಬಗ್ಗೆ
ಅಮಾಯಕ ವಿದ್ಯಾರ್ಥಿಗಳ ಭವಿಷ್ಯವನ್ನೇ ಮುರುಟಿ ಹಾಕಿರುವ ಇಂತದ್ದೊಂದು ಗಂಭೀರ ಅಪರಾಧದ ಬಗ್ಗೆ ಪರೀಕ್ಷಾ ಪೇ ಚರ್ಚಾ ಮಾಡಿ. ಮಕ್ಕಳನ್ನು ಮುದ್ದು ಮಾಡುವ ಪ್ರಧಾನಿ ನರೇಂದ್ರ ಮೋದಿಯವರಾಗಲಿ, ರಾಜ್ಯದ ಬಿಜೆಪಿ ನಾಯಕರಾಗಲಿ ಚಕಾರ ಎತ್ತುತ್ತಿಲ್ಲ. ಈ ಅಪರಾಧದಲ್ಲಿ ಬಿಜೆಪಿಯ ನಾಯಕರೇ ಭಾಗಿಯಾಗಿದ್ದಾರೆಂಬ ಗಂಭೀರ ಆರೋಪಗಳಿದ್ದರೂ ಎಲ್ಲ ಬಿಜೆಪಿ ನಾಯಕರು ತಮ್ಮ ಪ್ರಧಾನಿ ಮತ್ತು ಶಿಕ್ಷಣ ಸಚಿವರನ್ನು ಸಮರ್ಥಿಸಲು ಹೊರಟಿದ್ದಾರೆ. ಇದು ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಬಲಿಯಾಗಿರುವ ದೇಶದ 22 ಲಕ್ಷ ವಿದ್ಯಾರ್ಥಿಗಳಿಗೆ ಬಗೆಯುವ ದ್ರೋಹ ಅಲ್ಲವೇ? ಎಂದು ಹಿಜಾಬ್ ವಿರೋಧಿಗಳಿಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹಿಜಾಬ್ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ
ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆಯನ್ನೂ ವಿರೋಧಿಸಬೇಕಲ್ವಾ?
ನಮ್ಮ ಸರ್ಕಾರ ನಡೆಸಿದ್ದ ಸಿಇಟಿ ಪರೀಕ್ಷೆಯಲ್ಲಿ ಒಂದೆರಡು ಕೇಂದ್ರಗಳಲ್ಲಿ ಲೋಪಗಳು ಕಂಡುಬಂದಾಗ ಹಾರಾಟ-ಹೋರಾಟ ನಡೆಸಿದ್ದ ರಾಜ್ಯದ ಬಿಜೆಪಿ ನಾಯಕರು, ಕರ್ನಾಟಕದ ಒಂದು ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ. ಕನಿಷ್ಠ ರಾಜ್ಯದ ವಿದ್ಯಾರ್ಥಿಗಳ ಬಗ್ಗೆಯಾದರೂ ಇವರಿಗೆ ಕಾಳಜಿ ಬೇಡವೇ? ಒಂದೆರಡು ಕಡೆಗಳಲ್ಲಿ ಜನಿವಾರ ತೆಗೆಸಿದಾಗ, ಉಡುಪಿಯ ಒಂದೆರಡು ಶಾಲೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಾಗ ಇಡೀ ಕರ್ನಾಟಕಕ್ಕೆ ಕೋಮುದ್ವೇಷದ ಬೆಂಕಿ ಹಚ್ಚಲು ಹೊರಟ ಈ ಬಿಜೆಪಿ ನಾಯಕರಿಗೆ ನೀಟ್ ಪರೀಕ್ಷೆಯ ರದ್ದತಿಯಿಂದ ರೋದಿಸುತ್ತಿರುವ ವಿದ್ಯಾರ್ಥಿಗಳ ಕಣ್ಣೀರು ಕಾಣಿಸುತ್ತಿಲ್ಲವೇ? ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಿರುವ ವಸ್ತ್ರಸಂಹಿತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೇಂದ್ರಿಯ ವಿದ್ಯಾಲಯಗಳ ವಸ್ತ್ರಸಂಹಿತೆಗೆ ಅನುಗುಣವಾಗಿಯೇ ಇದೆ. ರಾಜ್ಯ ಸರ್ಕಾರ ಹೊರಡಿಸಿರುವ ವಸ್ತ್ರ ಸಂಹಿತೆಯನ್ನು ವಿರೋಧಿಸುವವರು ಕೇಂದ್ರೀಯ ವಿದ್ಯಾಲಯಗಳ ವಸ್ತ್ರಸಂಹಿತೆಯನ್ನೂ ವಿರೋಧಿಸಬೇಕಲ್ವಾ? ಎಂದು ತಿರುಗೇಟು ನೀಡಿದ್ದಾರೆ.
ಯಾಕೆ ಈ ಹಿಪಾಕ್ರಸಿ?
ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಮುಸ್ಲಿಮರ ಓಲೈಕೆಯಾದರೆ ಜನಿವಾರ, ಪೇಟ/ಟರ್ಬನ್ ಧರಿಸಲು ಅವಕಾಶ ನೀಡಿರುವುದು ಆಯಾಧರ್ಮಗಳ ಓಲೈಕೆಯಾಗುವುದೇ? ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಸಿಇಟಿ ಪರೀಕ್ಷೆಗಳು ಕ್ರಾಂತಿಕಾರಿ ಕ್ರಮವಾಗಿತ್ತು. ಅದರಿಂದಾಗಿ ಸಾವಿರಾರು ಬಡವಿದ್ಯಾರ್ಥಿಗಳು ಕೂಡಾ ಎಂಜನಿಯರ್, ಡಾಕ್ಟರ್ ಗಳಾಗಿದ್ದರು. ಬಿಜೆಪಿ ಸರ್ಕಾರ ಅದನ್ನು ವ್ಯವಸ್ಥಿತವಾಗಿ ನಾಶಮಾಡಿದೆ. 2024ರಲ್ಲಿ ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತಂದಾಗ ನಮ್ಮ ಸರ್ಕಾರ ಅದನ್ನು ವಿರೋಧಿಸಿತ್ತು. ನೀಟ್ ನಿಂದಾಗಿ ರಾಜ್ಯದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಈ ವ್ಯವಸ್ಥೆ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಶಿಕ್ಷಣದ ಹಕ್ಕನ್ನು ಕಳೆದುಕೊಂಡಿದೆ ಎಂದು ಕಿಡಿಕಾರಿದ್ದಾರೆ.
ದಶಕಗಳಿಂದ ಸಿಇಟಿ ಪರೀಕ್ಷೆಗಳನ್ನು ನಮ್ಮ ಸರ್ಕಾರಗಳು ಸುರಕ್ಷಿತವಾಗಿ ನಡೆಸಿಕೊಂಡು ಬಂದಿವೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಒಂದು ನೀಟ್ ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಯೋಗ್ಯತೆ ಇಲ್ಲದಂತಾಗಿದೆ. ಇದು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಈ ಲೋಪಕ್ಕೆ ನಾನು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹೊಣೆ ಮಾಡುತ್ತೇನೆ.ಅವರು ದೇಶದ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಮತ್ತು ಅಸಮರ್ಥ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣದಿಂದ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಆಗ್ರಹಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ವೈಚಾರಿಕತೆ, ವೈಜ್ಞಾನಿಕತೆ, ಸಮಾನತೆ, ಭ್ರಾತೃತ್ವ, ಘನತೆ, ಪರಸ್ಪರ ಗೌರವ ಮತ್ತು ಜಾತ್ಯತೀತ ದೃಷ್ಟಿಕೋನವನ್ನು ಉತ್ತೇಜಿಸಬೇಕು. ಸಾಂವಿಧಾನಿಕ ಅರ್ಥದಲ್ಲಿ ಜಾತ್ಯತೀತತೆ ಎಂದರೆ ವೈಯಕ್ತಿಕ ನಂಬಿಕೆಗಳಿಗೆ ವಿರುದ್ಧವಲ್ಲ ಬದಲಾಗಿ ಎಲ್ಲರಿಗೂ ಸಮಾನ ಗೌರವ ನೀಡುವಿಕೆ, ಸಾಂಸ್ಥಿಕ ನಿಷ್ಪಕ್ಷಪಾತತೆ ಮತ್ತು ತಾರತಮ್ಯ ರಹಿತ ವರ್ತನೆಯಾಗಿದೆ. ಸರ್ಕಾರವು ಸಾಂವಿಧಾನಿಕ ತತ್ವಗಳಿಗೆ ಅನುಗುಣವಾಗಿ ಎಲ್ಲಾ ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ತಟಸ್ಥ ಮತ್ತು ಸಮಾನ ನಿಲುವು ಹೊಂದಿರಬೇಕಿದೆ.
ಅದೇ ರೀತಿ ಯಾರಿಗೂ ತೊಂದರೆಯಾಗದಂತಹ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಆಚರಣೆಗಳಿಂದಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಹಕ್ಕು ನಿರಾಕರಣೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಸಮವಸ್ತ್ರಕ್ಕೆ ಪೂರಕವಾಗಿ ಮತ್ತು ಅದಕ್ಕೆ ಹೊಂದಿಕೊಳ್ಳುವಂತೆ ಸೀಮಿತ ಸಾಂಪ್ರದಾಯಿಕ ಅಥವಾ ನಂಬಿಕೆ ಆಧಾರಿತ ಗುರುತುಗಳನ್ನು ಧರಿಸಲು ಅವಕಾಶ ಕಲ್ಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕ ಸುವ್ಯವಸ್ಥೆ, ಸುರಕ್ಷತೆ, ತರಗತಿಯ ವಾತಾವರಣ ಮತ್ತು ಶಿಕ್ಷಣ ಸಂಸ್ಥೆಗಳ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು, ಸಮಾನತೆ ಮತ್ತು ಘನತೆಯನ್ನು ಮರುಸ್ಥಾಪಿಸಲು ನಾವು ಬದ್ಧರಿದ್ದೇವೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ವಿರೋಧಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 6:58 pm, Thu, 14 May 26