ತಿರುವನಂತಪುರಂ, ಮೇ 07: ಕೇರಳದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ಉಂಟಾಗಿದೆ. ಕಾಂಗ್ರೆಸ್ನ ಪ್ರಮುಖ ನಾಯಕರಾದ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತಲ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರ ನಡುವೆ ಸ್ಪರ್ಧೆ ಹಿನ್ನೆಲೆ ಹೈಕಮಾಂಡ್ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಈ ಪ್ರಕ್ರಿಯೆಗಾಗಿ ಎಐಸಿಸಿ ವೀಕ್ಷಕರಾದ ಮುಕುಲ್ ವಾಸನಿಕ್ ಮತ್ತು ಅಜಯ್ ಮಾಕೇನ್ ಅವರು ಕೇರಳದ ತಿರುವನಂತಪುರಂನ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. 63 ಕಾಂಗ್ರೆಸ್ ಶಾಸಕರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಆರಂಭಿಕ ಮಾಹಿತಿಗಳ ಪ್ರಕಾರ, ಕೆ.ಸಿ. ವೇಣುಗೋಪಾಲ್ ಅವರಿಗೆ 47 ಶಾಸಕರ, ವಿ.ಡಿ. ಸತೀಶನ್ ಅವರಿಗೆ 35 ಶಾಸಕರ ಮತ್ತು ರಮೇಶ್ ಚೆನ್ನಿತಲ ಅವರಿಗೆ 16 ಶಾಸಕರ ಬೆಂಬಲವಿದೆ ಎಂದು ತಿಳಿದುಬಂದಿದೆ. ಈ ವರದಿಗಳನ್ನು ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ. ಮೇ 10ರೊಳಗೆ ಕೇರಳದಲ್ಲಿ ಹೊಸ ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕಾರ ಸ್ವೀಕಾರ ಮಾಡುವ ನಿರೀಕ್ಷೆಯಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.