ರಾಯಚೂರು, ಜುಲೈ 24: ಭೀಕರ ಬರಗಾಲಕ್ಕೆ (Drought) ರಾಯಚೂರು (raichur) ಜಿಲ್ಲೆಯ ರೈತರು ತತ್ತರಿಸಿದ್ದಾರೆ. ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ಬೆಳೆ ಮಳೆ ಕೈ ಕೊಟ್ಟಿದ್ದರಿಂದ ಒಣಗಿ ಹೋಗಿದೆ. ಹೀಗಾಗಿ ಅನ್ನದಾತರು ಊರು ಬಿಡುತ್ತಿದ್ದಾರೆ. ಮಾಡಿದ ಸಾಲ ತೀರಿಸುವುದಕ್ಕೆ ಕುಟುಂಬ ಸಮೇತ ರೈತರು ಗೂಳೆ ಹೋಗುತ್ತಿದ್ದಾರೆ.
ತೀವ್ರ ಸಂಕಷ್ಟಕ್ಕೆ ಸಿಲುಕಿದ ರೈತರು
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿಲುನಾಡು ರಾಯಚೂರು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೃಷಿ ಸಂಪೂರ್ಣ ನೆಲಕಚ್ಚಿದ್ದು, ಜೀವನೋಪಾಯಕ್ಕಾಗಿ ಕುಟುಂಬ ಸಮೇತ ನಗರಗಳತ್ತ ಗೂಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಕೈಕೊಟ್ಟ ಮಳೆ: ಬಳ್ಳಾರಿ, ವಿಜಯನಗರದಿಂದ ಬರೋಬ್ಬರಿ 13,000 ಮಂದಿ ಗುಳೆ?
ಮಕ್ಕಳು ಓದುತ್ತಿದ್ದ ಶಾಲೆಗಳಿಂದ ಟಿಸಿ ಪಡೆದು ಬೆಂಗಳೂರು, ಹೈದರಾಬಾದ್, ಪುಣೆಯಂತಹ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಮಕ್ಕಳ ಶಿಕ್ಷಣಕ್ಕೂ ಹೊಡೆತ ಬಿದ್ದಿದೆ. ರಾಯಚೂರು ತಾಲ್ಲೂಕಿನ ಹೂಗನಹಳ್ಳಿ ಗ್ರಾಮದಲ್ಲಿ ಟಿವಿ9 ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ವಾಸ್ತವ ಬಯಲಾಗಿದೆ.
ಕೈಕೊಟ್ಟ ಮಳೆ: ನೆಲಕ್ಕಚ್ಚಿದ ಬೆಳೆ
ರಾಯಚೂರು ಜಿಲ್ಲೆಯ ಹೂಗನಹಳ್ಳಿ ಗ್ರಾಮದಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲ ಸೋಲ ಮಾಡಿ ರೈತರು ಪ್ರತಿ ಎಕರೆಗೆ 40-50 ಸಾವಿರ ಖರ್ಚು ಮಾಡಿ ಹತ್ತಿ, ತೊಗರಿ ಸೇರಿ ಇನ್ನಿತರ ಬೆಳೆ ಬೆಳೆದಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆ ಬೆಳೆ ನೆಲಕ್ಕಚ್ಚಿದೆ. ಹೀಗಾಗಿ ರೈತರು ಗೂಳೆ ಹೋಗುತ್ತಿದ್ದಾರೆ.
ಗ್ರಾಮದಲ್ಲಿರುವ 90 ಮನೆಗಳ ಪೈಕಿ 30ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕಲಾಗಿದೆ. ಬಿತ್ತನೆ ಮಾಡಿದರೂ ಮಳೆ ಕೈಕೊಟ್ಟ ಪರಿಣಾಮ ಬೆಳೆ ಒಣಗಿ ಹೋಗಿದ್ದು, ಬೀಜ ಮತ್ತು ಗೊಬ್ಬರಕ್ಕಾಗಿ ಪಡೆದ ಸಾಲ ತೀರಿಸುವ ದಾರಿ ಕಾಣದೆ ಕುಟುಂಬ ಸಮೇತ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಲಿ ಕೆಲಸ ಅರಸಿ ರೈತ ಕುಟುಂಬಗಳ ವಲಸೆ
ದೊಡ್ಡ ದೊಡ್ಡ ನಗರಗಳಲ್ಲಿ ಕೂಲಿ ಕೆಲಸ ಅರಸಿ ರೈತ ಕುಟುಂಬಗಳು ವಲಸೆ ಹೋಗುತ್ತಿದ್ದಾರೆ. ಕೆಲವು ಮನೆಗಳಲ್ಲಿ ಮಾತ್ರ ವಯಸ್ಸಾದ ತಂದೆ-ತಾಯಿ ಉಳಿದಿದ್ದು, ಮಕ್ಕಳು ಹಾಗೂ ಯುವಕರು ಕೆಲಸಕ್ಕಾಗಿ ಹೊರನಾಡಿಗೆ ತೆರಳಿದ್ದಾರೆ. ಹೀಗಾಗಿ ಸರ್ಕಾರ ಬರ ಪೀಡಿತ ಜಿಲ್ಲೆ ಅಂತ ಘೋಷಿಸಲಿ ಎನ್ನುವುದು ಗ್ರಾಮಸ್ಥರಾದ ಬುಜ್ಜಿಬಾಬು ಅವರ ಮಾತು.
ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!
ಒಂದೆಡೆ ಮಳೆಯಿಲ್ಲ, ಮತ್ತೊಂದೆಡೆ ಗ್ರಾಮದಲ್ಲಿ ಕೆಲಸವೂ ಇಲ್ಲ, ಹೀಗಾಗಿ ಕೈಗೆ ದುಡಿಮೆ ಸಿಗದ ಕಾರಣ ಬದುಕು ಕಟ್ಟಿಕೊಳ್ಳಲು ಗ್ರಾಮಸ್ಥರು ನಗರಗಳತ್ತ ಮುಖ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಯ ಅಭಾವ ಗ್ರಾಮೀಣ ಬದುಕನ್ನೇ ಅಸ್ತವ್ಯಸ್ತಗೊಳಿಸಿರುವುದಂತು ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.