Headlines

ಕೋಲಾರದಲ್ಲಿ ಗರ್ಭಿಣಿಯರ ಮರಣ ಪ್ರಮಾಣ ತಗ್ಗಿಸಲು RRR ಸಂಜೀವಿನಿ: ಏನಿದು RRR ಫಾರ್ಮುಲಾ? – Kannada News | RRR Formula Halves Maternal Deaths: A National Model for Pregnant Women Safety

ಕೋಲಾರ, ಏಪ್ರಿಲ್​ 19: ಪ್ರತಿಯೊಬ್ಬ ಮಹಿಳೆಯರ ಪಾಲಿಗೆ ಹೆರಿಗೆ (Mortality) ಎಂಬುದು ಮರುಜನ್ಮದ ಸಮಾನ. ಹೆರಿಗೆ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡುವ ವೇಳೆ ಅದೆಷ್ಟೋ ಮಹಿಳೆಯರು (women) ಹಲವು ಕಾರಣಗಳಿಂದ ಸಾವನ್ನಪ್ಪುತ್ತಾರೆ. ಹೀಗಾಗಿ ಆ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡ ಅದೊಂದು ಫಾರ್ಮುಲಾ ಗರ್ಭಿಣಿ ಮಹಿಳೆಯರ ಸಾವಿನ ಸಂಖ್ಯೆ ಕಡಿಮೆ ಮಾಡಿ ದೇಶದ ಗಮನ ಸೆಳೆದಿದೆ.

ಪ್ರತಿಯೊಂದು ಹೆಣ್ಣಿನ ಕನಸು ತಾನೊಂದು ಮಗುವಿಗೆ ಜನ್ಮ ಕೊಡಬೇಕು, ಆ ಮೂಲಕ ತಾಯಿಯಾಗಿ ಪರಿಪೂರ್ಣತೆ ಹೊಂದಬೇಕು ಅನ್ನೋ ಹಂಬಲ ಇರುತ್ತದೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ. ಮಹಿಳೆಯರ ಹೆರಿಗೆ ಸಮಯವನ್ನು ಮಹಿಳೆಯ ಪುನರ್ಜನ್ಮ ಎಂದೇ ಪರಿಗಣಿಸಲಾಗುತ್ತದೆ. ಕಾರಣ ಅದೆಷ್ಟೋ ಮಹಿಳೆಯರು ಹೆರಿಗೆ ಸಮಯದಲ್ಲಿ ಹಲವು ಕಾರಣಗಳಿಂದ ಸಾವನ್ನಪ್ಪುತ್ತಾರೆ. ಇದನ್ನು ಎಂ.ಎಂ.ಆರ್​ ಎನ್ನುತ್ತಾರೆ ಅಂದರೆ ಮಾತೃ ಮರಣ ಪ್ರಮಾಣ.

ಇದನ್ನೂ ಓದಿ: ಕೋಲಾರದಲ್ಲೊಂದು ವಿಚಿತ್ರ ಘಟನೆ: ಮನುಷ್ಯರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ

ಇದು ದೇಶದಲ್ಲಿ ಶೇ 97 ರಷ್ಟಿದೆ. ಇನ್ನು ಕರ್ನಾಟಕದಲ್ಲಿ ಶೇ 68 ರಷ್ಟಿದೆ. ಕೋಲಾರ ಜಿಲ್ಲೆಯಲ್ಲಿ ಇದರ ಪ್ರಮಾಣ ಶೇ 23 ರಷ್ಟಿದೆ. ಇಡೀ ದೇಶದಲ್ಲಿ ಇದರ ಪ್ರಮಾಣ ಕಡಿಮೆಯಾಗಲು ಕಾರಣ ಕೋಲಾರ ಜಿಲ್ಲೆಯಲ್ಲಿ ಕಳೆದ ಒಂದುವರೆ ವರ್ಷಗಳ ಹಿಂದೆ ಮಾತೃ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಹಲವು ತಜ್ಞ ವೈದ್ಯರು, ಅಧಿಕಾರಿಗಳ ತಂಡ ಕೈಗೊಂಡ ಅದೊಂದು ಫಾರ್ಮುಲಾದಿಂದ ಕೇವಲ ಒಂದೇ ವರ್ಷದಲ್ಲಿ ಕೋಲಾರ ಜಿಲ್ಲೆಯಲ್ಲಿನ ಮಾತೃ ಮರಣ ಪ್ರಮಾಣ ಶೇ 50 ರಷ್ಟು ಕುಸಿತ ಕಂಡಿದೆ.

ಕೋಲಾರ ಜಿಲ್ಲೆಯಲ್ಲಿ ಈ ಮಾತೃ ಮರಣ ಪ್ರಮಾಣವನ್ನು ತಗ್ಗಿಸಲು ಕೈಗೊಂಡ ಅದೊಂದು ಸೂತ್ರವೇ ಆರ್​.ಆರ್.ಆರ್. ಇದೊಂದು ಸೂತ್ರ ಇಂದು ಜಿಲ್ಲೆಯ ಇಡೀ ದೇಶದ ಗಮನ ಸೆಳೆದಿದೆ. ಅಲ್ಲದೆ ಮಾತೃ ಮರಣ ಪ್ರಮಾಣವನ್ನು ಶೇ 50ರಷ್ಟು ಕುಸಿಯುವಂತೆ ಮಾಡಿದೆ. ಇದು ನಿಜಕ್ಕೂ ಹೆಗ್ಗಳಿಕೆಯ ವಿಚಾರವೇ ಸರಿ.

ಏನಿದು ಆರ್​ಆರ್​ಆರ್​​ ಸೂತ್ರ?

2023-24ರಲ್ಲಿ 9 ಜನ ಮಹಿಳೆಯರು ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದರು. ಇದರ ಪ್ರಮಾಣ ಶೇ 50 ರಷ್ಟಿತ್ತು, 2024-25ರಲ್ಲಿ 8 ಜನ ಗರ್ಭಿಣಿ ಮಹಿಳೆಯರ ಸಾವಾಗಿದ್ದು, ಇದರ ಪ್ರಮಾಣ ಶೇ 46ರಷ್ಟಿತ್ತು. ಆದರೆ ಈ ಆರ್​.ಆರ್​.ಆರ್​. ಸೂತ್ರ ಪ್ರಯೋಗದ ನಂತರ 2025-26ರಲ್ಲಿ 4 ಜನ ಗರ್ಭಿಣಿಯರು ಸಾವನ್ನಪ್ಪಿದ್ದು, ಇದರ ಪ್ರಮಾಣ ಶೇ 23ಕ್ಕೆ ಕುಸಿದಿದೆ. ಅಷ್ಟಕ್ಕೂ ಕಳೆದ ಒಂದೂವರೆ ವರ್ಷಗಳ ಹಿಂದೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್​.ರವಿ ಹಾಗೂ ಆರೋಗ್ಯಾಧಿಕಾರಿಗಳ ತಂಡ ಮಾತೃ ಮರಣ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹಲವು ಸಭೆಗಳನ್ನು ಮಾಡಿ ಚಿಂತನೆ ನಡೆಸಿ ಅವರು ಕಂಡುಕೊಂಡಿದ್ದೇ ಈ ಆರ್​ಆರ್​ಆರ್​​​ ಸೂತ್ರ. ಇದರಿಂದ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯರ ಸಾವಿನ ಸಾವಿನ ಪ್ರಮಾಣ ಕಡಿಮೆ ಆಗಿದೆ.

ಆರ್​ಆರ್​ಆರ್​​ ಅರ್ಥವೇನು?

ಮೊದಲ ಆರ್​ ಅಂದರೆ (ರೀ ಅಸೆಸ್​ಮೆಂಟ್ ಆಫ್​ ರಿಸ್ಕ್​) ಅಂದರೆ ಕಠಿಣ ಪರಿಸ್ಥಿತಿಯಲ್ಲಿರುವ ಗರ್ಭಿಣಿ ಮಹಿಳೆಯರ ಮೇಲೆ ಹೆಚ್ಚಿನ ನಿಗಾವಹಿಸುವುದು. ಎರಡನೇ ಆರ್​. (ರೆಡ್ಯೂಸ್​ ದ ಡಿಲೇ) ಗರ್ಭಿಣಿ ಮಹಿಳೆ ಹೆರಿಗೆ ಸಂದರ್ಭದಲ್ಲಾಗುವ ವಿಳಂಬವನ್ನು ತಡೆದು ಕೂಡಲೇ ಆಸ್ಪತ್ರೆಗೆ ದಾಖಲಿಸುವುದು. ಮೂರನೇ ಆರ್​. (ರೆಸ್ಪಾನ್ಸ್​ ಕ್ವಿಕ್ಲಿ) ಅಂದರೆ ಗರ್ಭಿಣಿ ಮಹಿಳೆ ಪ್ರಾಥಮಿಕ ಅಥವಾ ತಾಲ್ಲೂಕಾಸ್ಪತ್ರೆಗೆ ದಾಖಲಾದ 10 ರಿಂದ 15 ನಿಮಿಷದಲ್ಲಿ ದೊಡ್ಡ ಆಸ್ಪತ್ರೆಯ ಅವಶ್ಯಕತೆ ಇದ್ದರೆ ಆಕೆಯನ್ನು ಕೂಡಲೇ ರವಾನೆ ಮಾಡುವುದು ಹಾಗೂ ಮಾಹಿತಿಯನ್ನು ಕೂಡಲೇ ಜಿಲ್ಲಾಸ್ಪತ್ರೆಗಳಿಗೆ ತಿಳಿಸುವುದು. ಹೀಗೆ ಮೂರು ಸೂತ್ರಗಳ ಮೂಲಕ ಕೋಲಾರ ಜಿಲ್ಲೆಯಲ್ಲಿನ ಮಾತೃ ಮರಣ ಪ್ರಮಾಣವನ್ನು ತಗ್ಗಿಸಲಾಗಿದೆ.

ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್​ ಅವರು ಮಾತನಾಡಿದ್ದು, ಕಠಿಣ ಪರಿಸ್ಥಿತಿಯಲ್ಲಿರುವ ಗರ್ಭಿಣಿಯರ ಮೇಲೆ ವಿಶೇಷ ನಿಗಾ ವಹಿಸಿದ್ದರಿಂದ ಈ ಬದಲಾವಣೆ ಸಾಧ್ಯವಾಗಿದೆ ಎಂದಿದ್ದಾರೆ. ಗರ್ಭಿಣಿಯರ ಮರಣ ಪ್ರಮಾಣ ತಗ್ಗಿಸಲು ತಜ್ಞರ ಸಭೆ ನಡೆಸಿ ಈ ಆರ್.ಆರ್.ಆರ್ ಸೂತ್ರ ಜಾರಿಗೆ ತರಲಾಯಿತು. ಇದರ ಫಲವಾಗಿ ಇಂದು ಮರಣ ಪ್ರಮಾಣ ಶೇ. 23ಕ್ಕೆ ಕುಸಿದಿದೆ ಎಂದು ಜಿಲ್ಲಾಧಿಕಾರಿ ಡಾ. ಎಂಆರ್​ ರವಿ ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಪಿಂಚಣಿ ಹಣಕ್ಕೂ ಪರದಾಟ: ನಿತ್ಯ ಅಲೆದು ಅಲೆದು ಕಂಗಾಲಾದ ವೃದ್ಧರು, ಅಂಗವಿಕಲ ಪಿಂಚಣಿದಾರರು

ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರೂಪಿಸಲಾದ ಅದೊಂದು ಸೂತ್ರ ಇಂದು ಗರ್ಭಿಣಿ ಮಹಿಳೆಯರ ಸಾವಿನ ಪ್ರಮಾಣ ಕಡಿಮೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನಷ್ಟು ಕಡಿಮೆ ಮಾಡುವ ಉದ್ದೇಶ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯದ್ದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *