ಕೋಲಾರ, ಜುಲೈ 09: ಜಿಲ್ಲೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರ್ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ. ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ, ಅವುಗಳನ್ನು ರಸ್ತೆ ಬದಿ ಮತ್ತು ಕೆರೆಗಳಲ್ಲಿ ಸುರಿಯುವಂತಹ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳು ಒಂದು 15 ಕೆ.ಜಿ. ಬಾಕ್ಸ್ ಟೊಮ್ಯಾಟೋ 600 ರಿಂದ 700 ರೂಪಾಯಿ ವರೆಗೆ ಮಾರಾಟವಾಗಿ ಸದ್ದು ಮಾಡಿತ್ತು. ಆದರೆ ಜುಲೈ ಆರಂಭದಿಂದ ಬೆಲೆ ತೀವ್ರ ಕುಸಿತ ಕಂಡಿದೆ. ಪ್ರಸ್ತುತ, ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ. ಬಾಕ್ಸ್ ಟೊಮ್ಯಾಟೋ 50 ರಿಂದ 200 ರೂಪಾಯಿಗೆ ಮಾರಾಟವಾಗುತ್ತಿದೆ. ಬೇಡಿಕೆಗಿಂತ ಹೆಚ್ಚಾಗಿ ಟೊಮ್ಯಾಟೋ ಉತ್ಪಾದನೆ ಆಗಿರುವುದು ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಸಲಕರಣೆಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ರೈತರಿಗೆ ಒಂದು 15 ಕೆ.ಜಿ. ಬಾಕ್ಸ್ ಟೊಮ್ಯಾಟೋಗೆ ಕನಿಷ್ಠ 250 ರಿಂದ 300 ರೂಪಾಯಿ ದೊರೆತರೆ ಮಾತ್ರ ಲಾಭ ಸಿಗುತ್ತದೆ. ಈಗ ಸಾಗಾಟ ವೆಚ್ಚವೂ ಸಿಗದ ಕಾರಣ, ರೈತರು ಬೆಳೆಯನ್ನು ರಸ್ತೆ ಬದಿ ಸುರಿದು ಹೋಗುತ್ತಿದ್ದಾರೆ.