ಕೋಲಾರ, ಏ.21: ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣ ಬಳಿ ಇರುವ ‘ಎನ್.ಕೆ.ಎನ್’ (NKN) ಇಟ್ಟಿಗೆ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಜೀತಕ್ಕಿದ್ದ ಇಬ್ಬರು ಬಾಲಕರು ಸೇರಿದಂತೆ ಒಟ್ಟು 10 ಜನರನ್ನು ರಕ್ಷಿಸಿದೆ. ಕೋಲಾರ ಉಪ ವಿಭಾಗಾಧಿಕಾರಿ (AC) ಜಂಬಗಿ ರೇಣುಕಾ ಪ್ರಸಾದ್ ದಿಲೀಪ್ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ. ಮಾಲೀಕ ಮೊಹ್ಮದ್ ಇಬ್ರಾಹಿಂ ಖಾನ್ ಎಂಬುವವರಿಗೆ ಸೇರಿದ ಈ ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಕಾನೂನುಬಾಹಿರವಾಗಿ ಜೀತಕ್ಕೆ ಇರಿಸಿಕೊಳ್ಳಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು.ಒಡಿಶಾ ಮೂಲದ ಎಂಟು ಮಂದಿ ಕಾರ್ಮಿಕರು ಹಾಗೂ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ 10 ಜನರನ್ನು ಸದ್ಯ ಅಧಿಕಾರಿಗಳ ವಶಕ್ಕೆ ಪಡೆದಿದ್ದು, ಅವರಿಗೆ ಇಲಾಖೆಯಿಂದ ‘ರಿಲಿವ್ ಸರ್ಟಿಫಿಕೇಟ್’ (ಬಿಡುಗಡೆ ಪತ್ರ) ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಾಲೂರು ಇಓ ಕೃಷ್ಣಪ್ಪ, ಸಿಡಿಪಿಓ ಶೋಭ, ಕಾರ್ಮಿಕ ಅಧಿಕಾರಿ ರೇಣುಕಾ ಪ್ರಸನ್ನ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ ಕಾರ್ಖಾನೆಯ ಮಾಲೀಕ ಮೊಹ್ಮದ್ ಇಬ್ರಾಹಿಂ ಖಾನ್ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಿಸಲ್ಪಟ್ಟ ಕಾರ್ಮಿಕರಿಗೆ ಅವರವರ ಊರುಗಳಿಗೆ ಮರಳಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ