Headlines

ಕೋಲ್ಕತ್ತಾದಲ್ಲಿ ಸೌರವ್ ಗಂಗೂಲಿ ಬಯೋಪಿಕ್ ಶೂಟಿಂಗ್ ಶುರು; ‘ದಾದಾ’ ಆಟಕ್ಕೆ ಮೈದಾನ ಸಜ್ಜು

ಕೋಲ್ಕತ್ತಾದಲ್ಲಿ ಸೌರವ್ ಗಂಗೂಲಿ ಬಯೋಪಿಕ್ ಶೂಟಿಂಗ್ ಶುರು; ‘ದಾದಾ’ ಆಟಕ್ಕೆ ಮೈದಾನ ಸಜ್ಜು

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ (Biopic) ಚಿತ್ರೀಕರಣ ಭರದಿಂದ ಸಾಗುತ್ತಿದೆ. ‘ದಾದಾ: ದಿ ಸೌರವ್ ಗಂಗೂಲಿ ಸ್ಟೋರಿ’ (Dada: The Sourav Ganguly Story) ಹೆಸರಿನ ಈ ಬಹುನಿರೀಕ್ಷಿತ ಚಿತ್ರದಲ್ಲಿ ಗಂಗೂಲಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವ ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್​ಕುಮಾರ್ ರಾವ್ (Rajkummar Rao)ಅವರು ಸದ್ಯ ಕೋಲ್ಕತ್ತಾದಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ‘ಮಿಡ್ ಡೇ’ ವರದಿಯ ಪ್ರಕಾರ, ಈ ಸಿನಿಮಾದ ಮುಂಬೈ ಶೆಡ್ಯೂಲ್ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಚಿತ್ರತಂಡ ಕೋಲ್ಕತ್ತಾದಲ್ಲಿ 15 ದಿನಗಳ ಕಾಲ ಬೀಡುಬಿಟ್ಟಿದ್ದು, ನಗರದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಿದೆ. ಗಂಗೂಲಿ ಅವರ ಜೀವನದ ಪ್ರಮುಖ ಘಟ್ಟಗಳನ್ನು ಈ ಭಾಗದಲ್ಲಿ ಸೆರೆಹಿಡಿಯಲಾಗುತ್ತಿದೆ.

ರಾಜ್​ಕುಮಾರ್ ರಾವ್ ಈ ವಾರದ ಆರಂಭದಲ್ಲೇ ಕೋಲ್ಕತ್ತಾ ತಲುಪಿದ್ದು, ಬುಧವಾರದಂದು (ಮೇ 27) ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಮುಂಜಾನೆ ವರ್ಕೌಟ್ ಮುಗಿಸಿದ ಅವರು, ತದನಂತರ ಬಯೋಪಿಕ್‌ನ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾದರು. ಗಂಗೂಲಿ ಅವರ ಹುಟ್ಟೂರಾದ ಬೆಹಾಲಾದ ಸಣ್ಣ ಗಲ್ಲಿಗಳಿಂದ ಹಿಡಿದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವವರೆಗಿನ ರೋಚಕ ಜರ್ನಿಯನ್ನು ಈ ಸಿನಿಮಾ ಒಳಗೊಳ್ಳಲಿದೆ.

ಇತ್ತೀಚೆಗೆ ಸೌರವ್ ಗಂಗೂಲಿ ಅವರ ಬೆಹಾಲಾದ ಸ್ವಗೃಹದಲ್ಲೇ ಶೂಟಿಂಗ್‌ಗೆ ಚಾಲನೆ ನೀಡಲಾಗಿತ್ತು. ಆ ಬಳಿಕ ಕೋಲ್ಕತ್ತಾದ ಐತಿಹಾಸಿಕ ‘ಈಸ್ಟ್ ಬೆಂಗಾಲ್ ಕ್ಲಬ್’ ಮೈದಾನದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಗಂಗೂಲಿ ಅವರು ಆರಂಭಿಕ ದಿನಗಳಲ್ಲಿ ‘ಆರ್ಯನ್ ಕ್ಲಬ್’ ಪರ ಕ್ರಿಕೆಟ್ ಆಡುತ್ತಿದ್ದ ದಿನಗಳನ್ನು ಇಲ್ಲಿ ಮರುಸೃಷ್ಟಿಸಲಾಗಿದೆ. ಕೋಲ್ಕತ್ತಾದ ಪ್ರತಿಷ್ಠಿತ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲೂ ಭರ್ಜರಿ ಶೂಟಿಂಗ್ ನಡೆಸಲಾಗಿದೆ.

‘ದಾದಾ’ ಬಯೋಪಿಕ್​ಗೆ ಖ್ಯಾತ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್‌ನ ಹಿಟ್ ಮ್ಯೂಸಿಕ್ ಡೈರೆಕ್ಟರ್ ಪ್ರೀತಮ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸೌರವ್ ಗಂಗೂಲಿ ಅವರ ಪತ್ನಿ ಡೋನಾ ಗಂಗೂಲಿ ಪಾತ್ರದಲ್ಲಿ ನಟಿ ತಾನ್ಯಾ ಮಾಣಿಕ್ತಲ ಕಾಣಿಸಿಕೊಳ್ಳಲಿದ್ದಾರೆ. ಗಂಗೂಲಿ ಅವರ ಕ್ರಿಕೆಟ್ ಬದುಕಿನ ಜೊತೆಗೆ ಡೋನಾ ಅವರೊಂದಿಗಿನ ಪ್ರೇಮ ಜೀವನದ ಕಥೆಯೂ ಚಿತ್ರದಲ್ಲಿ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು ನಟಿಸ್ತಾರಾ? ಈ ಸುದ್ದಿ ಹಬ್ಬಲು ಕಾರಣ ಇಲ್ಲಿದೆ..

ಚಿತ್ರದಲ್ಲಿ ಬಂಗಾಳಿ ನೇಟಿವಿಟಿಯನ್ನು ಕಾಪಾಡಿಕೊಳ್ಳಲು ಬಂಗಾಳಿ ಚಿತ್ರರಂಗದ ಪ್ರಮುಖ ನಟರನ್ನು ಪ್ರಮುಖ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸೌರವ್ ಗಂಗೂಲಿ ಅವರ ತಾಯಿ ನಿರುಪಾ ಗಂಗೂಲಿ ಪಾತ್ರದಲ್ಲಿ ಅಪರಾಜಿತಾ ಆಧ್ಯಾ ಹಾಗೂ ತಂದೆ ಚಂಡಿ ಗಂಗೂಲಿ ಪಾತ್ರದಲ್ಲಿ ಹಿರಿಯ ನಟ ಶಾಶ್ವತ ಚಟರ್ಜಿ ನಟಿಸುತ್ತಿದ್ದಾರೆ. ಮಾಜಿ ಬಿಸಿಸಿಐ ಅಧ್ಯಕ್ಷರೂ ಆಗಿರುವ ಗಂಗೂಲಿ ಅವರ ಬಯೋಪಿಕ್ ಸದ್ಯ ಕ್ರಿಕೆಟ್ ಮತ್ತು ಸಿನಿ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *