ವಿಜಯಪುರ, ಜೂನ್ 20: ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ ಆಕಾಶದಲ್ಲಿ ಶನಿವಾರ ಬೆಳಿಗ್ಗೆ ಒಂದು ಅಪರೂಪದ ವಿಸ್ಮಯ ಕಾಣಿಸಿಕೊಂಡು ಜನರ ಗಮನ ಸೆಳೆದಿದೆ. ಬೆಳಿಗ್ಗೆ ಸುಮಾರು 10:30ರ ಸುಮಾರಿಗೆ ಸೂರ್ಯನ ಸುತ್ತಲೂ ಪ್ರಕಾಶಮಾನವಾದ ಸ್ವರ್ಣ ವರ್ಣದ ವೃತ್ತಾಕಾರದ ಉಂಗುರ ಮೂಡಿದೆ. ಈ ಆಕರ್ಷಕ ದೃಶ್ಯವನ್ನು ಕಂಡು ಜನಸಾಮಾನ್ಯರು ಕೌತುಕದಿಂದ ಆಕಾಶದತ್ತ ಮುಖ ಮಾಡಿದ್ದಾರೆ. ಘೋಣಸಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈ ಅಪರೂಪದ ಉಂಗುರಾಕೃತಿಯನ್ನು ಕಂಡು ಅತ್ಯಂತ ಖುಷಿ ಪಟ್ಟರು. ಶಾಲೆಯ ಶಿಕ್ಷಕರಾದ ಪರಮೇಶ್ವರ ಗದ್ಯಾಳ ಅವರು ವಿದ್ಯಾರ್ಥಿಗಳಿಗೆ ಈ ಪ್ರಕೃತಿ ವಿಸ್ಮಯವನ್ನು ತೋರಿಸಿ, ಇದು ಹೇಗೆ ಸಂಭವಿಸುತ್ತದೆ ಎಂಬ ಕುರಿತ ವೈಜ್ಞಾನಿಕ ಮಾಹಿತಿ ನೀಡಿದರು. ವಾತಾವರಣದ ಮೇಲ್ಭಾಗದಲ್ಲಿರುವ ಹನಿಗಳು ಮತ್ತು ಮಂಜಿನ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ ವಕ್ರೀಭವನಗೊಂಡು (Refraction) ಈ ರೀತಿಯ ‘ಸನ್ ಹ್ಯಾಲೋ (Sun Halo)’ ಅಥವಾ ಸೂರ್ಯನ ಉಂಗುರ ಸೃಷ್ಟಿಯಾಗುತ್ತದೆ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ