ಸಚಿವ ಸ್ಥಾನಕ್ಕಾಗಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿImage Credit source: Tv9 Kannada
ಬೆಂಗಳೂರು, ಆಗಸ್ಟ್ 04: 19 ಮಂದಿ ಸಚಿವರು ಸಿಎಂ ಡಿಕೆ ಶಿವಕುಮಾರ್ ಅವರ ಸಂಪುಟಕ್ಕೆ ನಿನ್ನೆ ಸೇರ್ಪಡೆಯಾಗಿದ್ದಾರೆ. ಹೈಕಮಾಂಡ್ ಪಟ್ಟಿಯಲ್ಲಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಸೇರಿ 20 ಮಂದಿಯ ಹೆಸರಿತ್ತಾದರೂ ಕೊನೆ ಕ್ಷಣದಲ್ಲಿ ಅವರನ್ನು ಪ್ರಮಾಣವಚನ ಸ್ವೀಕರಿಸದಂತೆ ತಡೆಯಲಾಗಿತ್ತು. ಹೀಗಾಗಿ ಖಾಲಿ ಉಳಿದಿರುವ ಒಂದು ಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಮಹಿಳಾ ಶಾಸಕರ ನಡುವೆ ತೀವ್ರ ಪೈಪೋಟಿ ಶುರುವಾಗಿದೆ. ಈ ನಡುವೆ ಸಚಿವ ಸ್ಥಾನದಿಂದ ವಂಚಿತರಾಗಿರುವ ಗಾಯತ್ರಿ ಶಾಂತೇಗೌಡ ಪುನಃ ಯತ್ನ ನಡೆಸುತ್ತಿದ್ದು, ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ರೇಸ್ನಲ್ಲಿ ಇರೋ ಶಾಸಕಿಯರು ಯಾರ್ಯಾರು?
ಗಾಯತ್ರಿ ಶಾಂತೇಗೌಡ ಅವರ ಜೊತೆಗೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಎಂಎಲ್ಸಿ ಉಮಾಶ್ರೀ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಕೂಡ ಸಚಿವ ಸ್ಥಾನದ ರೇಸ್ನಲ್ಲಿರುವ ಪ್ರಮುಖರಾಗಿದ್ದಾರೆ.
ಇದನ್ನೂ ಓದಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ: ‘ಮನಸ್ಸಿಗೆ ನೋವಾಗಿದೆ’ ಎಂದ ಬಸವರಾಜ ಹೊರಟ್ಟಿ
ಸಚಿವ ಸ್ಥಾನ ಸಂಬಂಧ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ. ಮಹಿಳಾ ಮೀಸಲಾತಿ ಪರ ಧ್ವನಿ ಎತ್ತಿದ್ದೇವೆ, ಅವಕಾಶ ಸಿಗಬೇಕು. ಸಂಪುಟದಲ್ಲಿ ಅವಕಾಶ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನಯನಾ ಮೋಟಮ್ಮ ಹೇಳಿದ್ದಾರೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂಬುದು ನಿಜ. ನನಗೆ ಭರವಸೆಯಿದೆ, ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತೆ. ಪಕ್ಷಕ್ಕಾಗಿ ದುಡಿದಿದ್ದೇವೆ, ಹೀಗಾಗಿ ಹೈಕಮಾಂಡ್ ಪರಿಗಣಿಸುವ ವಿಶ್ವಾಸವಿದೆ ಎಂದು ಉಮಾಶ್ರೀ ತಿಳಿಸಿದ್ದಾರೆ. ಮತ್ತೊಂದೆಡೆ ಪತಿ ಸಮೇತ ಅನ್ನಪೂರ್ಣಾ ತುಕಾರಾಂ ಸಿಎಂ ಡಿಕೆಶಿ ಅವರನ್ನು ಭೇಟಿಯಾಗಿರುವ ಕಾರಣ ಪೈಪೋಟಿ ತೀವ್ರಗೊಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:32 pm, Tue, 4 August 26