ಕುಮಾರ್ ಮತ್ತು ಆತನ ಗರ್ಭಿಣಿ ಪತ್ನಿ
ದೊಡ್ಡಬಳ್ಳಾಪುರ, ಮೇ 03: ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಯಾಗಲು ಮುಂದಾಗಿದ್ದ ವರನೊಬ್ಬನ ಮದುವೆಯನ್ನು ಗರ್ಭಿಣಿ ಪತ್ನಿ (Pregnant Wife) ಮಂಟಪಕ್ಕೇ ಬಂದು ನಿಲ್ಲಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
ಮನೆಯವರ ಒತ್ತಾಯಕ್ಕೆ ಎರಡನೇ ಮದುವೆ
ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಕಳೆದ ಒಂದು ವರ್ಷದ ಹಿಂದೆಯಷ್ಟೇ ಕುಮಾರ್ ಎಂಬ ಯುವಕ ವಿವಾಹವಾಗಿದ್ದ. ಈಗ ಕುಮಾರ್ ಪತ್ನಿ ಏಳು ತಿಂಗಳ ಗರ್ಭಿಣಿ. ಆದರೆ ಮನೆಯವರ ಒತ್ತಡಕ್ಕೆ ಮಣಿದ ಕುಮಾರ್, ತನ್ನ ಮೊದಲ ಮದುವೆಯ ವಿಷಯ ಮರೆಮಾಚಿ ಮತ್ತೊಬ್ಬ ಯುವತಿಯೊಂದಿಗೆ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದ. ವಿಶೇಷವೆಂದರೆ ತಾನು ಎರಡನೇ ಮದುವೆಯಾಗುತ್ತಿರುವ ವಿಷಯವನ್ನು ಸ್ವತಃ ಕುಮಾರ್ ಅವರೇ ತಡರಾತ್ರಿ ಮೊದಲ ಪತ್ನಿ ಕರೆ ಮಾಡಿ ತಿಳಿಸಿದ್ದ. ಮನೆಯವರು ಬಲವಂತವಾಗಿ ಈ ಮದುವೆ ಮಾಡಿಸುತ್ತಿದ್ದಾರೆ ಎಂದು ಆಕೆ ಬಳಿ ಅಸಹಾಯಕತನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಂಗಾಲಾದ ಗರ್ಭಿಣಿ ರಾತ್ರೋರಾತ್ರಿ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಧಾವಿಸಿದ್ದಾರೆ.
ಇದನ್ನೂ ಓದಿ ಹನಿಯೂರು ಚಂದ್ರೇಗೌಡ ಒಬ್ಬರಿಗೆ ನಟ, ಇನ್ನೊಬ್ಬರಿಗೆ ಪ್ರೊಫೆಸರ್: ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು
ಮದುವೆ ಮಂಟಪದಲ್ಲಿ ಹೈಡ್ರಾಮಾ
ಇಂದು (ಮೇ 3) ಬೆಳಗ್ಗೆ ಮದುವೆ ಶಾಸ್ತ್ರಗಳು ಆರಂಭವಾಗುವ ಮುನ್ನವೇ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಮಾರ್ ಪತ್ನಿ, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಮದುವೆಯನ್ನು ತಡೆದಿದ್ದಾರೆ. ತನ್ನ ಮದುವೆಯ ದಾಖಲೆಗಳು ಮತ್ತು ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತಕ್ಷಣವೇ ವರ ಕುಮಾರ್ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವರನನ್ನು ವಶಕ್ಕೆ ಪಡೆದಿದ್ದು, ಮೊದಲ ಮದುವೆಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸದ್ಯ ಹಸೆಮಣೆ ಏರಬೇಕಿದ್ದ ವರ ಈಗ ಕಂಬಿ ಎಣಿಸುವಂತಾಗಿದ್ದು, ಎರಡನೇ ಮದುವೆಯಾಗಬೇಕಿದ್ದ ಯುವತಿಯ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ