ಬರೋಬ್ಬರಿ 160 ಅಧಿಕಾರಿಗಳಿಗೆ ಟ್ರಾನ್ಸ್ಫರ್ ಭಾಗ್ಯImage Credit source: Tv9 Kannada
ಬೆಂಗಳೂರು, ಜುಲೈ 20: ಗಣಿ ಇಲಾಖೆಗೆ ಸಿಎಂ ಡಿ.ಕೆ. ಶಿವಕುಮಾರ್ ಮೇಜರ್ ಸರ್ಜರಿ ಮಾಡಿದ್ದು, ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದ ಇಲಾಖೆಯ ಶೇ.80ರಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮೂಲಕ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಬರೋಬ್ಬರಿ 160 ಅಧಿಕಾರಿಗಳ ಬೃಹತ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದ್ದು, 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು, 6 ಉಪನಿರ್ದೇಶಕರು ಈ ಪಟ್ಟಿಯಲ್ಲಿದ್ದಾರೆ. ದಶಕಗಳ ಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಸ್ವಂತ ಹಾಗೂ ನೆರೆಯ ಜಿಲ್ಲೆಗಳಲ್ಲಿ ಬೀಡು ಬಿಟ್ಟಿದ್ದ ಅಧಿಕಾರಿಗಳಿಗೆ ಟ್ರಾನ್ಸ್ಫರ್ ಭಾಗ್ಯ ಸಿಕ್ಕಿದೆ.
ಆದೇಶದಲ್ಲಿ ಏನಿದೆ?
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹೆಚ್ಚಿನ ಉಪ ನಿರ್ದೇಶಕರು ತಮ್ಮ ಸ್ವಂತ ಜಿಲ್ಲೆಗಳಲ್ಲಿ ಅಥವಾ ನೆರೆಯ ಜಿಲ್ಲೆಗಳಲ್ಲಿಯೇ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದಾರೆ ಅಥವಾ ಆಡಳಿತಾತ್ಮಕ ಹಾಗೂ ಸಾರ್ವಜನಿಕ ದೂರುಗಳನ್ನು ಎದುರಿಸುತ್ತಿದ್ದಾರೆ. ಇಂತಹ ದೀರ್ಘಕಾಲದ ಕಾರ್ಯಾವಧಿಯು ಸ್ವಹಿತಾಸಕ್ತಿಗಳಿಗೆ ಎಡೆಮಾಡಿಕೊಡುತ್ತದೆ ಹಾಗೂ ಇಲಾಖೆಯ ಘನತೆಗೆ ಧಕ್ಕೆ ತರುವ ಕಾರಣ ಸ್ಥಳೀಯ ಮಟ್ಟದ ಏಕಸ್ವಾಮ್ಯವನ್ನು ಮುರಿಯಲು ಮತ್ತು ಸಾಂಖ್ಯಿಕ ಅಕ್ರಮಗಳನ್ನು ತಡೆಗಟ್ಟಲು, ಇಲಾಖೆಯ ಪ್ರಮುಖ ಆದಾಯ ಸಂಗ್ರಹಣಾ ಕಾರ್ಯಗಳಿಗೆ ಯಾವುದೇ ಅಡಚಣೆಯಾಗದಂತೆ, ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿಈ ಕೂಡಲೇ ಜಾರಿಗೆ ಬರುವಂತೆ 160 ಅಧಿಕಾರಿಗಳನ್ನು ವರ್ಗಾವಣೆ ಮಾಡಿರೋದಾಗಿ ಆದೇಶದಲ್ಲಿ ತಿಳಿಸಲಾಗಿದೆ. ವರ್ಗಾಯಿಸಿದ ಹುದ್ದೆಗೆ ತಕ್ಷಣ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡುವಂತೆಯೂ ಸೂಚಿಸಲಾಗಿದೆ.
ಇದನ್ನೂ ಓದಿ: ಮನೆ ಮನೆಗೆ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆಗೆ ಚಾಲನೆ; SIR ವೇಳೆ ಇದನ್ನು ಮಾನ್ಯ ದಾಖಲೆಯಾಗಿ ಪರಿಣಗಣಿಸಲಾಗುತ್ತದೆಯೇ?
ಅನಧಿಕೃತ ಗಣಿಗಾರಿಕೆಗೆ ಕಡಿವಾಣಕ್ಕೆ ಕಠಿಣ ಕ್ರಮ
ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗಣಿ ಇಲಾಖೆಯಲ್ಲಿ ಆಡಳಿತಾತ್ಮಕ ಬದಲಾವಣೆ ಮಾಡಲಾಗಿದೆ. ಜುಲೈ 1ರಂದು ನಡೆದಿದ್ದ ಗಣಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರಿಂದ ಈ ವಿಷಯ ಪ್ರಸ್ತಾಪವಾಗಿತ್ತು. ಈ ಬಗ್ಗೆ ಕಡತ ಮಂಡಿಸುವಂತೆ ಸಭೆಯಲ್ಲೇ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರಿಗೆ ಸಿಎಂ ಸೂಚನೆ ನೀಡಿದ್ದರು. ಸ್ಥಳೀಯ ಪ್ರಭಾವಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಒತ್ತು ನೀಡಿದ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಗಣಿ ಇಲಾಖೆಯ ಇತಿಹಾಸದಲ್ಲೇ ಇದು ಅತಿದೊಡ್ಡ ವರ್ಗಾವಣೆ ಪ್ರಕ್ರಿಯೆಯಾಗಿದ್ದು, ಗಣಿ ಆದಾಯ ಹೆಚ್ಚಳ ಮತ್ತು ಅಕ್ರಮ ಗಣಿಗಾರಿಕೆ ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:59 pm, Mon, 20 July 26