Headlines

ಗದಗದ ಸರ್ಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಸಾರ್ವಜನಿಕರು, ಸಿಬ್ಬಂದಿ ಮೊಬೈಲ್​​ ಟಾರ್ಚೇ ಇಲ್ಲಿ ಬೆಳಕು! – Kannada News | Electricity Cut Over Rupees 3,000 Dues, Gadag Government Office Left in Darkness for 8 Months

ದಗದ ಸರ್ಕಾರಿ ಕಚೇರಿಗೆ ಕತ್ತಲೆ ಭಾಗ್ಯ

ಗದಗ, ಮೇ 12: ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ, ಇದರಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ರಾಜ್ಯ ಸರ್ಕಾರವೇನೋ ಗರ್ವದಿಂದ ಹೇಳಿಕೊಳ್ಳುತ್ತಿದೆ. ಆದರೆ ಇದೇ ಸರ್ಕಾರದ ಅಡಿಯಲ್ಲಿ ಬರುವ ಗದಗದ ಕಚೇರಿಯೊಂದು ಒಂದೆರಡಲ್ಲ ಬರೋಬ್ಬರಿ 8 ತಿಂಗಳಿನಿಂದ ಕತ್ತಲೆ ಭಾಗ್ಯದಲ್ಲಿದೆ. ಬಿಲ್​​ ಪಾವತಿಸದೇ ಇರುವ ಕಾರಣ ವಿದ್ಯುತ್​​ ಸಂಪರ್ಕ ಕಡಿತಗೊಳಿಸಲಾಗಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ದಿನನಿತ್ಯದ ವ್ಯವಹಾರ ನಿರ್ವಹಿಸಬೇಕಾದ ಸ್ಥಿತಿ ಇದೆ.

ಬಿಲ್ ಪಾವತಿಸದ ಹಿನ್ನೆಲೆ  ಲಕ್ಷ್ಮೇಶ್ವರದ ಭೂದಾಖಲೆ ಮತ್ತು ನಗರ ಸರ್ವೇ ಕಚೇರಿಯ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ಕಡಿತಗೊಳಿಸಿದೆ. ಅಧಿಕಾರಿಗಳ ಪ್ರಕಾರ, ಸುಮಾರು 3,000 ವಿದ್ಯುತ್ ಬಿಲ್ ಬಾಕಿಯಿದೆ. ಹೆಸರು ಬಹಿರಂಗಪಡಿಸದ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಸುಮಾರು ಎಂಟು ತಿಂಗಳ ಹಿಂದೆ ಕಡಿತಗೊಂಡಿರುವ ವಿದ್ಯುತ್​​ ಸಂಪರ್ಕ ಇನ್ನೂ ಮರಳಿ ಬಂದಿಲ್ಲ. ಆಗಿನಿಂದ ಸಿಬ್ಬಂದಿ ಹಾಗೂ ಸಾರ್ವಜನಿಕರು ಕತ್ತಲೆಯಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿರುವ ಲಕ್ಷ್ಮೇಶ್ವರ ಈಗ ತಾಲೂಕು ಕೇಂದ್ರವಾಗಿದ್ದರೂ, ಭೂದಾಖಲೆ ಕಚೇರಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ತಾಂಡವವಾಡುತ್ತಿದೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ.

ಇದನ್ನೂ ಓದಿ: ಮುಸುಕುದಾರಿ ಗ್ಯಾಂಗ್​​​​​​ನ​​​ ಹೆಡೆಮುರಿ ಕಟ್ಟಿದ ಖಾಕಿ; 1.26 ಕೋಟಿ ರೂ ಮೌಲ್ಯದ ಚಿನ್ನಾಭರಣ ವಶಕ್ಕೆ

ಕಚೇರಿಯ ಸಂಪೂರ್ಣ ಕೆಲಸವನ್ನು ಕೇವಲ ಇಬ್ಬರು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು, ಜಮೀನು ಹಾಗೂ ಆಸ್ತಿ ಅಳತೆ, ಗಡಿ ಗುರುತು, ನಕ್ಷೆ ತಯಾರಿ, ಹಳೆಯ ಸರ್ವೇ ದಾಖಲೆಗಳ ನಿರ್ವಹಣೆ, ಸರ್ವೇ ನಂಬರ್ ಮತ್ತು ಆಸ್ತಿ ಕಾರ್ಡ್ ವಿತರಣೆ, ನಗರ ಪ್ರದೇಶಗಳ ಖಾಸಗಿ ಹಾಗೂ ಸರ್ಕಾರಿ ಜಮೀನುಗಳ ಅಳತೆ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ಈ ಕಚೇರಿಯಲ್ಲಿ ನಡೆಯುತ್ತವೆ. ಸರ್ಕಾರ ಭೂ ದಾಖಲೆ ಹಾಗೂ ಸರ್ವೇ ನಕ್ಷೆಗಳ ಡಿಜಿಟಲೀಕರಣದ ಬಗ್ಗೆ ಹೇಳುತ್ತಿದ್ದರೂ, ಕಚೇರಿಯಲ್ಲಿ ಇನ್ನೂ ಕೈಬರಹದ ನಕ್ಷೆಗಳನ್ನೇ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಚೇರಿಯಲ್ಲಿ ಕಂಪ್ಯೂಟರ್ ಅಥವಾ ಸಮರ್ಪಕ ಡಿಜಿಟಲ್ ಸೌಲಭ್ಯಗಳೇ ಇಲ್ಲದ ಕಾರಣ ಸಿಬ್ಬಂದಿ ತಮ್ಮ ವೈಯಕ್ತಿಕ ಮೊಬೈಲ್‌ಗಳ ಮೂಲಕ ಅರ್ಜಿಗಳನ್ನು ಪರಿಶೀಲಿಸಿ, ನಕ್ಷೆ ಹಾಗೂ ಸರ್ವೇ ಮಾಹಿತಿಗಳನ್ನು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ವಿದ್ಯುತ್ ಸಮಸ್ಯೆಯನ್ನು ತಕ್ಷಣ ಪರಿಷ್ಕರಿಸಿ ತಾಲೂಕಿನ ಜನರಿಗೆ ಉತ್ತಮ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:03 pm, Tue, 12 May 26

Source link

Leave a Reply

Your email address will not be published. Required fields are marked *