Headlines

ಗರ್ಭಾವಸ್ಥೆಯಲ್ಲಿ ಯೋಗ, ಸ್ಟ್ರೆಚಿಂಗ್ ಸುರಕ್ಷಿತವೇ? ತಜ್ಞರು ನೀಡಿರುವ ಮಾಹಿತಿ ನಿಮಗಾಗಿ – Kannada News | Yoga During Pregnancy: What Every Expecting Mother Should Know

ಗರ್ಭಾವಸ್ಥೆ (Pregnancy) ಮಹಿಳೆಯರ ಜೀವನದ ಅತ್ಯಂತ ವಿಶೇಷ ಹಂತ. ಈ ಅವಧಿಯಲ್ಲಿ ದೇಹದಲ್ಲಿ ಹಲವು ರೀತಿಯ ಹಾರ್ಮೋನಲ್ ಮತ್ತು ದೈಹಿಕ ಬದಲಾವಣೆಗಳು ನಡೆಯುತ್ತವೆ. ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ, ವಿಶ್ರಾಂತಿ ಹಾಗೂ ಸುರಕ್ಷಿತ ದೈಹಿಕ ಚಟುವಟಿಕೆಗಳು ಅಗತ್ಯವಾಗಿವೆ. ಆದರೆ ಗರ್ಭಿಣಿಯರು ಯೋಗ ಮತ್ತು ಸ್ಟ್ರೆಚಿಂಗ್ ಮಾಡಬಹುದೇ, ಇದರಿಂದ ಯಾವ ರೀತಿಯ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕು. ಅದರ ಜೊತೆಗೆ ಯೋಗ ಮಾಡುವಾಗ ಗಮನಿಸಬೇಕಾದ ಅಂಶಗಳು ಮತ್ತು ಯಾರಿಗೆ ವೈದ್ಯರ ಸಲಹೆ ಬೇಕು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ತಜ್ಞರ ಪ್ರಕಾರ, ಗಂಭೀರ ಆರೋಗ್ಯ ಸಮಸ್ಯೆಗಳು ಅಥವಾ ಹೈ- ರಿಸ್ಕ್ ಗರ್ಭಧಾರಣೆ ಇಲ್ಲದ ಮಹಿಳೆಯರು ವೈದ್ಯರ ಸಲಹೆಯೊಂದಿಗೆ ಯೋಗ, ಸ್ಟ್ರೆಚಿಂಗ್ ಮತ್ತು ಲಘು ವ್ಯಾಯಾಮಗಳನ್ನು ಮಾಡಬಹುದು. ಇಂತಹ ಚಟುವಟಿಕೆಗಳು ದೇಹವನ್ನು ಚುರುಕಾಗಿಡಲು, ಬೆನ್ನುನೋವು ಮತ್ತು ದಣಿವು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಜೊತೆಗೆ ಮನಸ್ಸಿಗೆ ಶಾಂತಿ ನೀಡುವುದರೊಂದಿಗೆ ಹೆರಿಗೆಗೆ ದೇಹವನ್ನು ಸಿದ್ಧಗೊಳಿಸಲು ನೆರವಾಗಬಹುದು. ಆದರೆ ಪ್ರತಿಯೊಬ್ಬ ಮಹಿಳೆಯ ಆರೋಗ್ಯ ಸ್ಥಿತಿ ವಿಭಿನ್ನವಾಗಿರುವುದರಿಂದ ಯಾವುದೇ ಹೊಸ ವ್ಯಾಯಾಮವನ್ನು ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ದೇಹದ ಅಗತ್ಯತೆಗಳು ಬದಲಾಗುವುದರಿಂದ ಅದಕ್ಕೆ ಅನುಗುಣವಾಗಿ ವ್ಯಾಯಾಮದಲ್ಲಿಯೂ ಬದಲಾವಣೆ ಮಾಡಬೇಕು.

ಯೋಗ ಮಾಡುವಾಗ ಗಮನಿಸಬೇಕಾದ ಅಂಶಗಳು:

ಸಾಮಾನ್ಯವಾಗಿ ಯೋಗ ಮತ್ತು ಸ್ಟ್ರೆಚಿಂಗ್ ಅನ್ನು ಅನುಭವಿ ತರಬೇತುದಾರರ ಮಾರ್ಗದರ್ಶನದಲ್ಲಿ ಮಾಡುವುದು ಉತ್ತಮ. ಆರಂಭದಲ್ಲಿ ಸರಳ ವ್ಯಾಯಾಮಗಳಿಂದ ಪ್ರಾರಂಭಿಸಿ, ದೇಹಕ್ಕೆ ಹೆಚ್ಚು ಒತ್ತಡ ನೀಡಬಾರದು. ಸಾಕಷ್ಟು ನೀರು ಕುಡಿಯುವುದು ಮತ್ತು ಆರಾಮದಾಯಕವಾಗಿರುವ ಉಡುಪು ಧರಿಸುವುದು ಮುಖ್ಯ. ಹೊಟ್ಟೆಯ ಮೇಲೆ ಒತ್ತಡ ಬೀರುವ ಅಥವಾ ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಇರುವ ಆಸನಗಳನ್ನು ತಪ್ಪಿಸಬೇಕು. ವ್ಯಾಯಾಮದ ವೇಳೆ ತಲೆಸುತ್ತು, ಉಸಿರಾಟದ ತೊಂದರೆ, ನೋವು, ರಕ್ತಸ್ರಾವ ಅಥವಾ ಅಸಹಜ ಲಕ್ಷಣಗಳು ಕಂಡುಬಂದರೆ ತಕ್ಷಣ ನಿಲ್ಲಿಸಿ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ: ಮೆನೋಪಾಸ್ ಎಂದರೇನು? ಈ ಹಂತದ ನಂತರ ಮಹಿಳೆಯರು ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು?

ಯಾರಿಗೆ ವೈದ್ಯರ ಸಲಹೆ ಅಗತ್ಯ?

ಅಧಿಕ ರಕ್ತದೊತ್ತಡ, ಹೃದಯದ ಕಾಯಿಲೆ, ತೀವ್ರ ರಕ್ತಹೀನತೆ, ಗರ್ಭಾವಸ್ಥೆಯ ರಕ್ತಸ್ರಾವ, ಪ್ಲಾಸೆಂಟಾ ಸಮಸ್ಯೆಗಳು ಅಥವಾ ಅವಧಿಗೂ ಮುನ್ನ ಹೆರಿಗೆಯ ಅಪಾಯ ಇರುವ ಮಹಿಳೆಯರು ಯೋಗ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಅವಳಿ ಗರ್ಭಧಾರಣೆ, ಹಿಂದಿನ ಗರ್ಭಪಾತದ ಇತಿಹಾಸ ಅಥವಾ ಹೈ- ರಿಸ್ಕ್ ಗರ್ಭಧಾರಣೆ ಇರುವವರು ಸ್ವಯಂಪ್ರೇರಿತವಾಗಿ ಹೊಸ ವ್ಯಾಯಾಮಗಳನ್ನು ಆರಂಭಿಸಬಾರದು. ಸರಿಯಾದ ಮಾರ್ಗದರ್ಶನದಲ್ಲಿ ಯೋಗ ಮತ್ತು ಸ್ಟ್ರೆಚಿಂಗ್ ಮಾಡಿದರೆ ಗರ್ಭಾವಸ್ಥೆಯನ್ನು ಹೆಚ್ಚು ಆರೋಗ್ಯಕರ ಹಾಗೂ ಆರಾಮದಾಯಕವಾಗಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *