
ನವದೆಹಲಿ, ಮಾರ್ಚ್ 30: ಇರಾನ್ ಯುದ್ಧ ನಿಲ್ಲದ ಹಿನ್ನೆಲೆಯಲ್ಲಿ ರಸಗೊಬ್ಬರ, ಎಲ್ಪಿಜಿ, ಪೆಟ್ರೋಲ್, ಡೀಸಲ್, ಗ್ಯಾಸ್ ಪೂರೈಕೆ ಬಗ್ಗೆ ಜನರ ಆತಂಕ ಮುಂದುವರಿದಿದೆ. ಸರ್ಕಾರ ದಿನವೂ ಜನರಿಗೆ ಈ ಅಗತ್ಯ ವಸ್ತುಗಳ ಪೂರೈಕೆ ಸ್ಥಿತಿ ಬಗ್ಗೆ ಮಾಹಿತಿ ಒದಗಿಸುತ್ತಿದೆ. ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಬಂದರು, ಹಡಗು, ಜಲಮಾರ್ಗ ಇತ್ಯಾದಿ ಸಚಿವಾಲಯದ ಅಧಿಕಾರಿಗಳು ಇಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯೂರಿಯಾ ಸಂಗ್ರಹ ಸಾಕಷ್ಟಿದೆ. ಬೇರೆ ಬೇರೆ ಮೂಲಗಳಿಂದ ರಸಗೊಬ್ಬರ ಪೂರೈಕೆಗೆ (Urea supply) ಪ್ರಯತ್ನಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ರಸಗೊಬ್ಬರ ಪೂರೈಕೆ ನಿಲ್ಲದಂತೆ ಸರ್ಕಾರದ ಅತೀವ ಯತ್ನ
ಭಾರತದ ಪೆಟ್ರೋಲ್, ಡೀಸಲ್ ಮತ್ತು ಗ್ಯಾಸ್ ಅವಶ್ಯಕತೆಗೆ ಆಮದು ಮೇಲೆ ಹೆಚ್ಚಿನ ಅವಲಂಬನೆ ಇದೆ. ಹಾಗೆಯೇ, ರಸಗೊಬ್ಬರಕ್ಕೂ ಭಾರತ ಆಮದು ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ರಸಗೊಬ್ಬರ ಆಮದು ಗಲ್ಫ್ನಿಂದ ಮಾಡಲಾಗುತ್ತಿದೆ. ಪೆಟ್ರೋಲಿಯಂ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಶೇ. 20-30ರಷ್ಟು ಯೂರಿಯ, ಶೇ. 30ರಷ್ಟು ಡಿಎಪಿಯನ್ನು ಗಲ್ಫ್ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಯೂರಿಯಾ ಉತ್ಪಾದನೆಗೆ ಬೇಕಾದ ಎಲ್ಎನ್ಜಿ ಗಲ್ಫ್ನಿಂದ ಶೇ. 50ರಷ್ಟು ಪೂರೈಕೆಯಾಗುತ್ತಿದೆ. ರಸಗೊಬ್ಬರ ತಯಾರಿಕೆಗೆ ಅಗತ್ಯವಾಗಿರುವ ಕಚ್ಛಾ ಸಾಮಗ್ರಿಗಳಾದ ಅಮ್ಮೋನಿಯಾ, ಸಲ್ಫರ್ ಇತ್ಯಾದಿಯೂ ಕೂಡ ಆಮದು ಮೇಲೆ ಅವಲಂಬಿತವಾಗಿರುವಂಥವೇ. ಇದರಿಂದ ದೇಶದೊಳಗಿನ ಯೂರಿಯಾ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಬೇಗ ಡೀಲ್ ಆಗದಿದ್ದರೆ ಇರಾನ್ನ ಇಂಧನ ಘಟಕಗಳು, ಖರ್ಗ್ ದ್ವೀಪವನ್ನು ಉಡಾಯಿಸುತ್ತೇವೆ: ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ
ಸದ್ಯ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಕಳೆದ ವರ್ಷ ಈ ಅವಧಿಯಲ್ಲಿ 147 ಲಕ್ಷ ಟನ್ ಯೂರಿಯಾ ಇತ್ತು. ಈಗ ಅದು 180 ಲಕ್ಷ ಟನ್ಗಳಷ್ಟಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಾಯ ಹೆಚ್ಚು ಇರುವುದಿಲ್ಲ. ಹೀಗಾಗಿ, ಮುಂಗಾರು ಬೆಳೆ ಸೀಸನ್ಗೆ ಯೂರಿಯಾ ದಾಸ್ತಾನು ಮಾಡಲು ಅವಕಾಶ ಇದೆ ಎಂದು ಸರ್ಕಾರ ತಿಳಿಸಿದೆ.
ಯೂರಿಯಾ ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಯೂರಿಯಾ ಘಟಕಗಳಿಗೆ ಎಲ್ಎನ್ಜಿ ಪೂರೈಕೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಯೂರಿಯಾ ಉತ್ಪಾದನೆ ದಿನಕ್ಕೆ 12,000-15,000 ಟನ್ಗಳಷ್ಟು ಹೆಚ್ಚಿಗೆ ಆಗಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಇರಾನ್ನ ಖರ್ಗ್ ದ್ವೀಪದ ಮೇಲೆ ಟ್ರಂಪ್ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?
ಜಾಗತಿಕವಾಗಿ ಯೂರಿಯಾ ಲಭ್ಯತೆ ಶೋಧಿಸಿ, ಗುರುತಿಸಲು ಟ್ಯಾಸ್ಕ್ ಗ್ರೂಪ್ ರಚಿಸಲಾಗುತ್ತಿದೆ. 13.07 ಲಕ್ಷ ಟನ್ಗಳಷ್ಟು ಯೂರಿಯಾ ಖರೀದಿಗಾಗಿ ಜಾಗತಿಕ ಟೆಂಡರ್ ಕರೆಯಲಾಗಿದೆ. ರಷ್ಯಾ, ಸೌದಿ ಅರೇಬಿಯಾ, ಓಮನ್, ಮೊರಾಕ್ಕೋ, ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಷ್ಯಾ, ಜೋರ್ಡಾನ್, ಕೆನಡಾ, ಈಜಿಪ್ಟ್, ಆಲ್ಜೀರಿಯಾ, ಫಿನ್ಲ್ಯಾಂಡ್, ಟೋಬೋ ಮೊದಲಾದ ದೇಶಗಳಿಂದ ಯೂರಿಯಾ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಾಗತಿಕವಾಗಿ ವಿವಿಧೆಡೆ 16 ಭಾರತೀಯ ಮಿಷನ್ಗಳ ಮೂಲಕ ಪರ್ಯಾಯ ಪೂರೈಕೆ ಮೂಲಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ