ಗುರುಗ್ರಾಮದ ಮಹಾನಗರ ಪಾಲಿಕೆ ಕಚೇರಿಗೆ ಬಾಂಬ್ ಬೆದರಿಕೆ; ಮೇಯರ್ ಕಚೇರಿ ಖಾಲಿ, ಹೈ ಅಲರ್ಟ್ ಘೋಷಣೆ – Kannada News

ಗುರುಗ್ರಾಮ, ಜೂನ್ 4: ಹರಿಯಾಣದ ಗುರುಗ್ರಾಮದಲ್ಲಿರುವ ಮಹಾನಗರ ಪಾಲಿಕೆ ಪ್ರಧಾನ ಕಚೇರಿಗೆ ಇಂದು ಬಾಂಬ್ ಬೆದರಿಕೆ (Bomb Threat) ಬಂದಿದೆ. ಪಾಲಿಕೆಯ ಮುಖ್ಯ ಕಚೇರಿ ಹಾಗೂ ಮೇಯರ್ ಅವರ ಕಾರ್ಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಬಂದ ಅನಾಮಧೇಯ ಕರೆಯಿಂದಾಗಿ ಇಡೀ ಕಟ್ಟಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಂದು ಮಧ್ಯಾಹ್ನ ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಫೋನ್ ಕರೆ ಬಂದಿದ್ದು, ಕಟ್ಟಡದ ಆವರಣದಲ್ಲಿ ಮತ್ತು ಮೇಯರ್ ಕಚೇರಿಯ ಸಮೀಪದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದ.

ಬೆದರಿಕೆ ಕರೆ ಬರುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮೇಯರ್, ಹಿರಿಯ ಅಧಿಕಾರಿಗಳು ಹಾಗೂ ನೂರಾರು ಸಿಬ್ಬಂದಿ ಸೇರಿದಂತೆ ಇಡೀ ಕಟ್ಟಡದಲ್ಲಿದ್ದವರನ್ನು ತಕ್ಷಣವೇ ಹೊರಗೆ ಕಳುಹಿಸಿ ಕಟ್ಟಡವನ್ನು ಖಾಲಿ ಮಾಡಿಸಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಗುರುಗ್ರಾಮ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಸ್ಥಳಕ್ಕೆ ಧಾವಿಸಿದ್ದರು.

ಇದನ್ನೂ ಓದಿ: ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ

ಮೇಯರ್ ಕಚೇರಿ, ಕೌನ್ಸಿಲರ್ ಗಳ ಕೊಠಡಿಗಳು, ಬೇಸ್‌ಮೆಂಟ್ ಪಾರ್ಕಿಂಗ್ ಸೇರಿದಂತೆ ಇಡೀ 5 ಅಂತಸ್ತಿನ ಕಟ್ಟಡವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ಕಚೇರಿಯ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಇದುವರೆಗಿನ ತಪಾಸಣೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಹುಸಿ ಬಾಂಬ್ ಕರೆ ಇರಬಹುದು ಎಂದು ಶಂಕಿಸಲಾಗಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯ ವಹಿಸದೆ ಸಂಪೂರ್ಣ ತಪಾಸಣೆ ಮುಂದುವರಿಸಲಾಗಿದೆ. ಸದ್ಯ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *