ನೆಲಮಂಗಲ, ಮೇ 09: ಮನೆ ಅಕ್ಕಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ಕಾಂಪೌಂಡ್ ಗೊಡೆ ಸಮೇತ ಗೇಟ್ ಕುಸಿದು ಬಿದ್ದು ಐದು ವರ್ಷದ ಮಗುವೊಂದು (child) ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಭೀಕರ ದುರಂತ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ನಡೆದಿದೆ. ಗೌಸಿಯಾ (5) ಮೃತ ಮಗು. ಸುಮಯ (3) ಎಂಬ ಮತ್ತೊಂದು ಮಗುವಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
- ಆಟವಾಡುತ್ತಿದ್ದ ಮಕ್ಕಳ ಮೇಲೆ ಗೇಟ್ ಬಿದ್ದು ಅವಘಡ
- ಐದು ವರ್ಷದ ಹೆಣ್ಣು ಮಗು ಸಾವು
- ಮಗುವನ್ನು ಕಳಕೊಂಡು ಪೋಷಕರು ಗೋಳಾಟ
ನಡೆದಿದ್ದೇನು?
ಇಮಾಮ್ ಮತ್ತು ರಮೀಜಾ ದಂಪತಿ ರವಿಶಂಕರ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ 5 ತಿಂಗಳ ಹಿಂದೆಯಷ್ಟೇ ಬಾಡಿಗೆಗೆ ಬಂದಿದ್ದರು. ಬಸ್ ನಿಲ್ದಾಣದ ಬಳಿ ಹಣ್ಣು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಯ ಪುತ್ರಿ ಮನೆ ಅಕ್ಕಪಕ್ಕದಲ್ಲಿ ಆಟವಾಡುತ್ತಿದ್ದಳು. ಹಳೆಯದಾಗಿದ್ದರಿಂದ ಕಾಂಪೌಂಡ್ ಗೋಡೆ ಸಮೇತ ಗೇಟ್ ಕುಸಿದು ಬಿದ್ದು ಗೌಸಿಯಾ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಲಾರಿಗೆ ಕಾರು ಡಿಕ್ಕಿ: ಜವರಾಯನ ಅಟ್ಟಹಾಸಕ್ಕೆ ಕುಣಿಗಲ್ ಬಳಿ ದಾರಿಯಲ್ಲೇ ಪ್ರಾಣಬಿಟ್ಟ ನಾಲ್ವರು
ಇತ್ತ ಮಗುವನ್ನು ಕಳಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಈ ದುರಂತ ವೇಳೆ ಗೇಟ್ ಬಿದ್ದು ಇಮಾಮ್ ತಂಗಿ ಶಕಿಲಾ ಮಗು ಸುಮಯಗೂ (03) ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ 6 ತಿಂಗಳ ಮಗು ಸೇರಿ ಐವರ ಮೇಲೆ ಆ್ಯಸಿಡ್ ದಾಳಿ: ಆರೋಪಿಯೂ ಸೇರಿ ಇಬ್ಬರ ಸ್ಥಿತಿ ಗಂಭೀರ
ಮನೆ ಬಳಿ ಪೋಷಕರ ಕಣ್ಣೆದುರು ಆಟವಾಡುತ್ತಿದ್ದ ವೇಳೆ ನಡೆದ ಘಟನೆಯಿಂದ ಮಗುವನ್ನ ಕಳೆದುಕೊಂಡು ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಿದೆ.
ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.