ಬೆಂಗಳೂರು, ಜುಲೈ 14: ಚಿಕನ್ ಮತ್ತು ಮೊಟ್ಟೆ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ದರ ಇದೀಗ ದಾಖಲೆಯ ಮಟ್ಟ ತಲುಪಿದ್ದು, ಬೆಂಗಳೂರಿನಲ್ಲಿ (Bengaluru) ಒಂದು ಕೆಜಿ ಬಾಯ್ಲರ್ ಚಿಕನ್ ಬೆಲೆ 360 ರೂಪಾಯಿಗೆ ಹಾಗೂ ಒಂದು ಮೊಟ್ಟೆಯ ಚಿಲ್ಲರೆ ದರ 9 ರೂಪಾಯಿಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿನ ಮಾಹಿತಿ ಪ್ರಕಾರ, ಚರ್ಮವಿಲ್ಲದ (Without Skin Chicken) ಬ್ರಾಯ್ಲರ್ ಚಿಕನ್ ಪ್ರತಿ ಕೆಜಿಗೆ 360 ರೂಪಾಯಿ ಹಾಗೂ ಚರ್ಮ ಸಮೇತ (With Skin Chicken) ಚಿಕನ್ ಪ್ರತಿ ಕೆಜಿಗೆ 340 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ 300 ರೂಪಾಯಿ ಆಸುಪಾಸಿನಲ್ಲಿದ್ದ ಚಿಕನ್ ಬೆಲೆ ಈಗ 350ರಿಂದ 360 ರೂಪಾಯಿವರೆಗೆ ಏರಿಕೆಯಾಗಿದೆ.
ಮೊಟ್ಟೆ ದರವೂ ಇದೇ ರೀತಿ ಏರಿಕೆ ಕಂಡಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ 8 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 8.30 ರಿಂದ 9 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಮೂರು ದಿನಗಳ ಹಿಂದಷ್ಟೇ 7ರಿಂದ 7.50 ರೂಪಾಯಿ ಇದ್ದ ಮೊಟ್ಟೆ ಬೆಲೆ ಈಗ 9 ರೂಪಾಯಿಗೆ ತಲುಪಿರುವುದು ಗ್ರಾಹಕರಿಗೆ ಹೆಚ್ಚುವರಿ ಹೊರೆ ತಂದಿದೆ.
ಚಿಕನ್, ಮೊಟ್ಟೆ ದರ ಏರಿಕೆ ಬಗ್ಗೆ ವ್ಯಾಪಾರಿಗಳು ಹೇಳೋದೇನು?
ವ್ಯಾಪಾರಿಗಳ ಪ್ರಕಾರ, ಈ ಬಾರಿ ಕೋಳಿಗಳ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದು ಹಾಗೂ ಬೇರೆ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕೋಳಿ ಪೂರೈಕೆಯಾಗುತ್ತಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆಯಾಗಿದೆ. ಇದರಿಂದ ಚಿಕನ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಅವರು ಹೇಳುತ್ತಾರೆ.
ಬೆಲೆ ಏರಿಕೆ ಬಗ್ಗೆ ವ್ಯಾಪಾರಿಗಳ ಮಾತು
ಚಿಕನ್, ಮೊಟ್ಟೆ ಖರೀದಿ ಇಳಿಕೆ
ಬೆಲೆ ಏರಿಕೆಯ ಪರಿಣಾಮ ಗ್ರಾಹಕರ ಖರೀದಿ ಪ್ರಮಾಣದಲ್ಲೂ ಬದಲಾವಣೆ ಕಂಡುಬಂದಿದೆ. ಈ ಹಿಂದೆ ಒಂದು ಕೆಜಿ ಚಿಕನ್ ಖರೀದಿಸುತ್ತಿದ್ದವರು ಈಗ 500 ಅಥವಾ 750 ಗ್ರಾಂ ಮಾತ್ರ ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೆಚ್ಚಿದ ದರದ ಕಾರಣ ಗ್ರಾಹಕರ ಸಂಖ್ಯೆ ಕೂಡ ಕಡಿಮೆಯಾಗಿದೆ ಎನ್ನಲಾಗಿದೆ.
ಚಿಕನ್ ಬಿರಿಯಾನಿ, ಮೊಟ್ಟೆ ಕರಿ ದರ ಏರಿಕೆ ಸಾಧ್ಯತೆ
ಚಿಕನ್ ಮತ್ತು ಮೊಟ್ಟೆ ದರ ಏರಿಕೆಯಿಂದ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೂ ಹೊರೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಚಿಕನ್ ಬಿರಿಯಾನಿ, ಮೊಟ್ಟೆ ಕರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ