Headlines

ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಿಸಬೇಡಿ ಎಂದಿದ್ದ ನಲ್ಸಾರ್ ವಿದ್ಯಾರ್ಥಿಗಳ ಈ ವರ್ಷದ ನೋಂದಣಿ ತಡೆಹಿಡಿದ ಬಾರ್ ಕೌನ್ಸಿಲ್! – Kannada News | Bar Council halts enrolment of all NALSAR 2026 graduates after students oppose CJI Invite to convocation

ನವದೆಹಲಿ, ಆಗಸ್ಟ್ 13: ಹೈದರಾಬಾದ್‌ನ ಪ್ರತಿಷ್ಠಿತ ‘ನಲ್ಸಾರ್ ಕಾನೂನು ವಿಶ್ವವಿದ್ಯಾಲಯ’ದ (NALSAR University of Law) 2026ರ ಸಾಲಿನಲ್ಲಿ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು ವಕೀಲರಾಗಿ ನೋಂದಣಿ ಮಾಡಿಕೊಳ್ಳುವುದನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಇಂದು ತಾತ್ಕಾಲಿಕವಾಗಿ ತಡೆಹಿಡಿದಿದೆ. ನಲ್ಸಾರ್ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (CJI Surya Kant) ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವುದಕ್ಕೆ ಅಲ್ಲಿನ ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬಿಸಿಐ ಈ ಕಠಿಣ ಕ್ರಮ ಕೈಗೊಂಡಿದೆ.

“ಬಿಸಿಐನಿಂದ ಮುಂದಿನ ಆದೇಶ ಬರುವವರೆಗೆ, 2026ರ ಸಾಲಿನಲ್ಲಿ NALSAR ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದ ಯಾವುದೇ ವಿದ್ಯಾರ್ಥಿಯನ್ನು ಯಾವುದೇ ಬಾರ್ ಕೌನ್ಸಿಲ್‌ನಲ್ಲಿ ವಕೀಲರನ್ನಾಗಿ ನೋಂದಾಯಿಸಿಕೊಳ್ಳಬಾರದು” ಎಂದು ಬಿಎಸ್‍ಐ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಆದೇಶದಿಂದಾಗಿ, ಬಿಸಿಐನಿಂದ ಹೊಸ ಆದೇಶ ಬರುವವರೆಗೆ ಈ ಸಾಲಿನ ಪದವೀಧರರು ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ನೋಂದಾಯಿಸಿಕೊಂಡು ವಕೀಲ ವೃತ್ತಿ ಆರಂಭಿಸಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: Cockroach Janta Party: ಏನಿದು ‘ಕಾಕ್ರೋಚ್ ಜನತಾ ಪಾರ್ಟಿ’? ಇಂಟರ್‌ನೆಟ್ ಮೀಮ್‌ನಿಂದ ಶಿಕ್ಷಣ ಸಚಿವರ ರಾಜೀನಾಮೆಯವರೆಗೆ ಯುವ ಕ್ರಾಂತಿಯ ಪೂರ್ಣ ವರದಿ

ನಲ್ಸಾರ್ ಘಟಿಕೋತ್ಸವದ ಸುತ್ತ ನಡೆದ ಘಟನೆಗಳು ಮತ್ತು ವಿದ್ಯಾರ್ಥಿಗಳ ನಡವಳಿಕೆಯ ಕುರಿತು ವರದಿ ನೀಡುವಂತೆ ಬಿಸಿಐ, NALSAR ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಸೂಚಿಸಿದೆ. ವರದಿ ಬಂದ ಬಳಿಕ ವಿಚಾರಣೆಯ ನಂತರ ವಿದ್ಯಾರ್ಥಿಗಳಿಂದ ಯಾವುದೇ ಅಶಿಸ್ತಿನ ಕೃತ್ಯ ನಡೆದಿಲ್ಲ ಎಂಬುದು ಕಂಡುಬಂದರೆ, ನೋಂದಣಿಗೆ ಅವಕಾಶ ನೀಡಲಾಗುವುದು ಎಂದು ಅವರು ಬಾರ್ ಕೌನ್ಸಿಲ್ ಹೇಳಿದೆ. ಹಾಗೇ, ಈ ಆದೇಶವನ್ನು ಪ್ರಶ್ನಿಸಲು ಬಯಸುವ ಯಾರು ಬೇಕಾದರೂ ನ್ಯಾಯಾಲಯದ ಮೊರೆ ಹೋಗಬಹುದು ಎಂದು ತಿಳಿಸಿದೆ.

450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪತ್ರಕ್ಕೆ ಸಹಿ:

ಸಿಜೆಐ ಸೂರ್ಯಕಾಂತ್ ಅವರಿಗೆ ನೀಡಲು ಉದ್ದೇಶಿಸಿರುವ ಆಹ್ವಾನವನ್ನು ಮರುಪರಿಶೀಲಿಸುವಂತೆ ಕೋರಿ NALSAR ವಿವಿಯ 2026ರ ಬ್ಯಾಚ್‌ನ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಉಪಕುಲಪತಿಗಳು, ರಿಜಿಸ್ಟ್ರಾರ್, ಪ್ರಾಧ್ಯಾಪಕರು ಹಾಗೂ ಇತರ ಅಧಿಕಾರಿಗಳಿಗೆ ಈ ಪತ್ರ ರವಾನಿಸಲಾಗಿತ್ತು. ತಾವು ಮನವಿ ಸಲ್ಲಿಸಿದ ಸಮಯದಲ್ಲಿ ಘಟಿಕೋತ್ಸವದ ದಿನಾಂಕ ಹಾಗೂ ಮುಖ್ಯ ಅತಿಥಿಗಳ ಆಯ್ಕೆ ಅಧಿಕೃತವಾಗಿ ಅಂತಿಮಗೊಂಡಿರಲಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಸಿಜೆಐ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶವೇಕೆ?:

ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಿಂದ ಸಂಸತ್ತಿನ ಕಡೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಕ್ರಮಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸಿಜೆಐ ನಿರ್ವಹಿಸಿದ ರೀತಿಗೆ ವಿರೋಧವನ್ನು ವಿದ್ಯಾರ್ಥಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಜುಲೈ 23ರಂದು ನಡೆದ ವಿಚಾರಣೆಯ ವೇಳೆ, ಪೊಲೀಸರ ದೌರ್ಜನ್ಯದ ವಿಡಿಯೋಗಳನ್ನು ವೀಕ್ಷಿಸಲು ಸಿಜೆಐ ನಿರಾಕರಿಸಿದ್ದರು ಎಂದು ಆರೋಪಿಸಲಾಗಿತ್ತು. “ನಮಗೆ ವಿಡಿಯೋಗಳಲ್ಲಿ ಆಸಕ್ತಿಯಿಲ್ಲ, ನಮಗೆ ನೋಡಲು ಸಮಯವಿಲ್ಲ” ಎಂದು ಸಿಜೆಐ ಹೇಳಿದ್ದರೆನ್ನಲಾಗಿದೆ.

ಇದನ್ನೂ ಓದಿ: ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ; ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಸಮಾಧಾನ

ಅಲ್ಲದೆ, ಭಾರತೀಯ ಯುವಕರನ್ನು “ಕಾಕ್ರೋಚ್” ಎಂದು ಹೋಲಿಸಿದ್ದಕ್ಕೆ ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿದ್ದರು. “ಯುವಕರನ್ನು ಕಾಕ್ರೋಚ್​​ಗಳಿಗೆ ಹೋಲಿಸುವುದರಿಂದ ಹಿಡಿದು, ಪೊಲೀಸ್ ದೌರ್ಜನ್ಯದ ವಿಡಿಯೋ ನೋಡಲು ಸಮಯವಿಲ್ಲ ಎಂದು ಅಸಂವೇದನಾಶೀಲವಾಗಿ ಹೇಳುವವರೆಗೆ, ಸಿಜೆಐ ಅವರು ನಮ್ಮಂತಹ ವಿದ್ಯಾರ್ಥಿಗಳ ಬಗ್ಗೆ ಉದಾಸೀನತೆ ತೋರಿದ್ದಾರೆ. ಶೈಕ್ಷಣಿಕವಾಗಿ ಮತ್ತು ಭಾವುಕವಾಗಿ ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸುವ ನಮ್ಮ ಕಾಲೇಜಿನ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸುವುದು ನಮಗೆ ಸರಿ ಎನಿಸುತ್ತಿಲ್ಲ” ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಹಾಗೇ, ತಮ್ಮ ಆಕ್ಷೇಪಣೆಯು ಸಿಜೆಐ ವಹಿಸಿರುವ ಸಾಂವಿಧಾನಿಕ ಹುದ್ದೆಯ ವಿರುದ್ಧವಲ್ಲ, ಅವರ ನಡವಳಿಕೆಗೆ ಸಂಬಂಧಿಸಿದ್ದು ಎಂದು ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದರು. “ಕಾನೂನು ವಿದ್ಯಾರ್ಥಿಗಳಾಗಿ, ಪದವಿ ಪಡೆಯುತ್ತಿರುವ ಬ್ಯಾಚ್ ಆಗಿ ನಮ್ಮ ಕಳಕಳಿ ನಿರ್ದಿಷ್ಟವಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:41 pm, Thu, 13 August 26

Source link

Leave a Reply

Your email address will not be published. Required fields are marked *