ಚರ್ಚೆಗೆ ಗ್ರಾಸವಾದ ಬಿಎಂಟಿಸಿ ನಿರ್ವಾಹಕನ ನಡೆImage Credit source: Bengaluru Civic X Account
ಬೆಂಗಳೂರು, ಜೂನ್ 10: ಶಕ್ತಿ ಯೋಜನೆ ಮತ್ತು ಯುಪಿಐ ಆಧಾರಿತ ಟಿಕೆಟ್ ದುರ್ಬಳಕೆ ಆರೋಪಗಳು ಕೇಳಿಬರುತ್ತಿರುವ ನಡುವೆಯೇ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನಿರ್ವಾಹಕರೊಬ್ಬರು ಟಿಕೆಟ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಶಂಕೆ ಮೂಡಿಸುತ್ತಿರುವಂತಹ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಬಿಎಂಟಿಸಿ ನಿರ್ವಾಹಕರು ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರದಿಂದ ಮೇಲಿಂದ ಮೇಲೆ ಟಿಕೆಟ್‌ಗಳನ್ನು ಮುದ್ರಿಸುತ್ತಿರುವುದು ಕಂಡುಬಂದಿದೆ. ಆದರೆ ಅವುಗಳನ್ನು ಯಾವುದೇ ಪ್ರಯಾಣಿಕರಿಗೆ ಅವರು ನೀಡುತ್ತಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಗಮನಿಸಬಹುದಾಗಿದೆ.
ಚರ್ಚೆಗೆ ಗ್ರಾಸವಾದ ನಿರ್ವಾಹಕನ ನಡೆ
I observed this suspicious behaviour of generating random tickets by conductor today… @BMTC_BENGALURU should take close look into this matter, this happen near near Kamakya at 10.01am. It happens in almost all buses. This is 410FG.If the bus skipped dedicated starting point.1/2 pic.twitter.com/Jl0BP4jCd6
— Bengaluru Civic (@pavan1f) June 8, 2026
ಬೆಂಗಳೂರು ಸಿವಿಕ್ ಎಂಬ ಹೆಸರಿನ ಬಳಕೆದಾರರು ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈ ವಿಚಾರವನ್ನು ಬಿಎಂಟಿಸಿ ಗಂಭೀರವಾಗಿ ಪರಿಶೀಲಿಸಬೇಕು ಎಂದು ಬರೆದುಕೊಂಡಿದ್ದಾರೆ. ಅವರ ಪ್ರಕಾರ, ಈ ಘಟನೆ ದಕ್ಷಿಣ ಬೆಂಗಳೂರಿನ ಕಾಮಾಕ್ಯ ಸಮೀಪ ನಡೆದಿದೆ. ಇದೇ ರೀತಿ ಬಹುತೇಕ ಎಲ್ಲಾ ಬಸ್‌ಗಳಲ್ಲೂ ನಡೆಯುತ್ತದೆ ಎಂದೂ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಐಶಾರಾಮಿ ಜೀವನಕ್ಕಾಗಿ ಉಂಡ ಮನೆಗೇ ಕನ್ನ; 25 ಲಕ್ಷ ಹಣ ಕದ್ದು ಜೈಲುಪಾಲಾದ ನೇಪಾಳಿ ದಂಪತಿ
ಬಿಎಂಟಿಸಿ ಪ್ರತಿಕ್ರಿಯೆ
Please provide the ticket/vehicle details, date, and time for necessary action.
— BMTC (@BMTC_BENGALURU) June 8, 2026
ಜೂನ್ 9ರಂದು ಮತ್ತೊಂದು ಪೋಸ್ಟ್‌ನಲ್ಲಿ ಅವರು, ನಾಗರಭಾವಿಯಿಂದ ಕತ್ರಿಗುಪ್ಪೆಯವರೆಗೆ ಶಕ್ತಿ ಯೋಜನೆಯಡಿ ಐದು ಟಿಕೆಟ್‌ಗಳನ್ನು ಸೃಷ್ಟಿಸಲಾಗಿದೆ. ಅಂದರೆ ಸುಮಾರು 90 ಮೌಲ್ಯದ ಟಿಕೆಟ್‌ಗಳು. ಇದೇ ರೀತಿ ಬೇರೆ ನಿಲ್ದಾಣಗಳಲ್ಲಿಯೂ ಟಿಕೆಟ್‌ಗಳನ್ನು ಮುದ್ರಿಸಲಾಗುತ್ತಿತ್ತು. ನಾನು ವಿಡಿಯೊ ಸೆರೆಹಿಡಿದಾಗ ಬಸ್ ಖಾಲಿಯಾಗಿತ್ತು ಎಂದು ವಿವರಿಸಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ, ಅಗತ್ಯ ಕ್ರಮಕ್ಕಾಗಿ ಟಿಕೆಟ್ ಅಥವಾ ವಾಹನದ ವಿವರಗಳ ಜೊತೆಗೆ ಘಟನೆ ನಡೆದ ದಿನಾಂಕ ಮತ್ತು ಸಮಯವನ್ನು ಹಂಚಿಕೊಳ್ಳುವಂತೆ ಬಳಕೆದಾರರನ್ನು ಕೋರಿದೆ. ಇದಕ್ಕೆ ಪ್ರತಿಯಾಗಿ ಬಳಕೆದಾರರು ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಪ್ರಯಾಣಿಸಿದ್ದ ತಮ್ಮ ಟಿಕೆಟ್ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಪರ-ವಿರೋಧ ಚರ್ಚೆ
ಈ ಪೋಸ್ಟ್ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ಶುರುವಾಗಿದೆ. ಕೆಲವರು ನಿರ್ವಾಹಕರ ಪರವಾಗಿ ವಾದಿಸಿ, ವಿಡಿಯೋದಲ್ಲಿನ ಚಟುವಟಿಕೆಗೆ ಬೇರೆ ಕಾರಣಗಳಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ನಿರ್ವಾಹಕರಿಗೆ ಏನು ಲಾಭ? ಅಂತಿಮ ಲೆಕ್ಕದಲ್ಲಿ ಹಣ ಹೊಂದಿಕೆಯಾಗದಿದ್ದರೆ ಅವರೇ ತಮ್ಮ ಜೇಬಿನಿಂದ ಪಾವತಿಸಬೇಕಾಗುತ್ತದೆ ಎಂದು ಒಬ್ಬರು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಹೆಚ್ಚುವರಿ ಟಿಕೆಟ್ ಆದಾಯ ಬಿಎಂಟಿಸಿ ಖಾತೆಗೆ ಹೋಗುತ್ತದೆ, ನಿರ್ವಾಹಕರಿಗೆ ಅಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು, ಇದರಲ್ಲಿ ವಂಚನೆ ಏನು ಎನ್ನುವುದು ಅರ್ಥವಾಗುತ್ತಿಲ್ಲ. ಅಂತಿಮ ಲೆಕ್ಕದಲ್ಲಿ ನಷ್ಟವಾದರೆ ನಿರ್ವಾಹಕರೇ ಭರಿಸಬೇಕಾಗುತ್ತದೆ. ಇದು ಅತಿರಂಜಿತ ಆರೋಪದಂತೆ ಕಾಣುತ್ತದೆ ಎಂದು ಅಭಿಪ್ರಾಯಪಟ್ಟಿರೋದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:07 pm, Wed, 10 June 26