ಕನ್ನಡ ಚಿತ್ರರಂಗದಲ್ಲಿ ನಟ ರಂಗಾಯಣ ರಘು (Rangayana Raghu) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಟನೆ, ಡೈಲಾಗ್ ಡೆಲಿವರಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡುತ್ತಾರೆ. ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟ ಅವರು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸಲೀಸಾಗಿ ನಿಭಾಯಿಸುವಂತಹ ಪ್ರತಿಭಾವಂತ ಕಲಾವಿದ ರಂಗಾಯಣ ರಘು. ಈಗ ಅವರು ತಮ್ಮ ವೃತ್ತಿಬದುಕಿನಲ್ಲಿ ‘ಹೊಸ ಜೀವನ’ (Hosa Jeevana) ಆರಂಭಿಸುತ್ತಿದ್ದಾರೆ. ಏನಿದು ಹೊಸ ಜೀವನ? ಮುಂದೆ ಓದಿ..
ಈವರೆಗೂ ರಂಗಾಯಣ ರಘು ಅವರು ನೂರಾರು ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಅವರು ಬರೋಬ್ಬರಿ 399 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು 400ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮೈಲಿಗಲ್ಲಿನ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾದ ಹೆಸರೇ ‘ಹೊಸ ಜೀವನ’ ಎಂಬುದು ವಿಶೇಷ.
ರಂಗಾಯಣ ರಘು ಅವರ 400ನೇ ಸಿನಿಮಾ ಎಂಬ ಕಾರಣದಿಂದಲೇ ‘ಹೊಸ ಜೀವನ’ ಕೌತುಕ ಮೂಡಿಸಿದೆ. ಈ ಆಕರ್ಷಕ ಶೀರ್ಷಿಕೆಯ ಸಿನಿಮಾಗೆ ಡಾಲಿ ಧನಂಜಯ ಅವರು ಸಾಥ್ ನೀಡಿದ್ದಾರೆ. ಡಾಲಿ ಧನಂಜಯ ಅವರು ‘ಹೊಸ ಜೀವನ’ ಸಿನಿಮಾದ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿತ್ರತಂಡದ ಬಗ್ಗೆ ವಿವರ ಸಿಕ್ಕಿದೆ. ಇದು ಸ್ನೇಹ, ಪ್ರೀತಿ, ಜೀವನದ ಹೋರಾಟ ಮತ್ತು ಮೌಲ್ಯಗಳ ಕಥೆ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ.
ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ಪಡೆದಿರುವ ಮೋಹನ್ ಕುಮಾರ್ ಹನುಮಯ್ಯ ಅವರು ‘ಹೊಸ ಜೀವನ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ರಂಗಾಯಣ ರಘು ಮಾತ್ರವಲ್ಲದೇ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಶಿವರಾಜ್ ಕೆ.ಆರ್. ಪೇಟೆ, ಅಚ್ಯುತ್ ಕುಮಾರ್, ಸುಹಾಸ್ ಅತ್ರೆಯಸ್, ಉದಯ್ ಆಚಾರ್, ಅಭಿ ಸಾಮ್ರಾಟ್ ಮುಂತಾದವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಈ ಸಿನಿಮಾಗೆ ಜಿ.ಎಸ್. ಸಂಜೀವ್ ಪ್ರಸಾದ್ ಅವರು ಬಂಡವಾಳ ಹೂಡಿದ್ದಾರೆ. ಮೋಹನ್ ಕುಮಾರ್ ಹನುಮಯ್ಯ ಅವರು ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ‘ಅರ್ಜುನ್ ಪ್ರೊಡಕ್ಷನ್’ ಮತ್ತು ‘ಚಿರು ಪ್ರೊಡಕ್ಷನ್’ ಜಂಟಿಯಾಗಿ ‘ಹೊಸ ಜೀವನ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಸುಮುಖ ರಾವ್ ಅವರ ಸಂಗೀತ ನಿರ್ದೇಶನ, ಸುನಾದ್ ಗೌತಮ್ ಅವರ ಹಿನ್ನೆಲೆ ಸಂಗೀತ, ಶಶಿಧರ್ ಗೌಡ ಅವರ ಸಂಕಲನ, ರಾಜ್ ಕಾಂತ್ ಎಸ್. ಅವರ ಛಾಯಾಗ್ರಹಣ, ಪ್ರತಾಪ್ ಎಂ.ಆರ್. ಅವರ ಸಂಭಾಷಣೆ ಈ ಸಿನಿಮಾಗೆ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.