Headlines

ಚಿನ್ನದ ಮೇಲಿನ ವಿವಿಧ ಹೂಡಿಕೆಗಳಿಗೆ ವಿವಿಧ ತೆರಿಗೆಗಳು ಹೇಗೆ? ಇಲ್ಲಿದೆ ಡೀಟೇಲ್ಸ್ – Kannada News | Gold Investment Tax Rules India: Capital Gains on Physical, Digital Gold, SGB & ETFs Explained

ಭಾರತೀಯರಿಗೆ ಚಿನ್ನದ ಮೇಲಿನ ಹೂಡಿಕೆ ಎಂದರೆ ಅಚ್ಚುಮೆಚ್ಚು. ಆದರೆ, ನೀವು ಯಾವ ರೂಪದಲ್ಲಿ ಚಿನ್ನವನ್ನು ಖರೀದಿಸುತ್ತೀರಿ (ಭೌತಿಕ ಚಿನ್ನ, ಡಿಜಿಟಲ್ ಚಿನ್ನ, ಗೋಲ್ಡ್ ಇಟಿಎಫ್ ಅಥವಾ ಸಾವರಿನ್ ಗೋಲ್ಡ್ ಬಾಂಡ್), ಮತ್ತು ಅದನ್ನು ಮಾರಿ ಎಷ್ಟು ಲಾಭ ಗಳಿಸುತ್ತೀರಿ ಎಂಬುದರ ಆಧಾರದ ಮೇಲೆ ಅದರ ಮೇಲಿನ ಆದಾಯ ತೆರಿಗೆ ನಿಯಮಗಳು ಬದಲಾಗುತ್ತವೆ. ಚಿನ್ನಕ್ಕೆ ಜಿಎಸ್​ಟಿ ಇರುತ್ತದೆ, ಖರೀದಿಸುವಾಗಲೂ ಮತ್ತು ಮಾರುವಾಗಲೂ ಜಿಎಸ್​ಟಿ ಇರುತ್ತದೆ. ಆದಾಯ ತೆರಿಗೆ ವಿಚಾರಕ್ಕೆ ಬಂದರೆ ಮಾರಿದಾಗ ಸಿಗುವ ಲಾಭಕ್ಕೆ ತೆರಿಗೆಗಳು ಇರುತ್ತವೆ. ಇತ್ತೀಚಿನ ಬಜೆಟ್ ನಿಯಮಗಳ ಅನ್ವೇಷಣೆಯೊಂದಿಗೆ, ಹೂಡಿಕೆದಾರರು ಚಿನ್ನದ ಮೇಲಿನ ಬಂಡವಾಳ ಲಾಭದ ತೆರಿಗೆ (Capital Gains Tax) ನಿಯಮಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅತ್ಯಗತ್ಯ. ಯಾವ ರೀತಿಯ ಚಿನ್ನದ ಹೂಡಿಕೆಗೆ ಎಷ್ಟು ತೆರಿಗೆ ಅನ್ವಯಿಸುತ್ತದೆ ಎಂಬ ವಿವರ ಇಲ್ಲಿದೆ:

ಭೌತಿಕ ಚಿನ್ನ (Physical Gold – ಆಭರಣ, ನಾಣ್ಯ, ಬಿಸ್ಕತ್)

ಆಭರಣ, ಕಾಯಿನ್, ಬಿಸ್ಕತ್ ಇತ್ಯಾದಿ ಭೌತಿಕ ಚಿನ್ನವನ್ನು ನೀವೆಷ್ಟು ವರ್ಷ ಕಾಲ ಇಟ್ಟುಕೊಂಡು ಮಾರಾಟ ಮಾಡುತ್ತೀರಿ ಎಂಬುದರ ಮೇಲೆ ತೆರಿಗೆ ನಿರ್ಧಾರವಾಗುತ್ತದೆ. ಮಾರಾಟದಿಂದ ಸಿಗುವ ಲಾಭದ ಮೇಲೆ ಎರಡು ರೀತಿಯ ತೆರಿಗೆ ಅನ್ವಯ ಆಗುತ್ತದೆ. ಅಲ್ಪಾವಧಿ ಲಾಭ ಗಳಿಕೆ ಮತ್ತು ದೀರ್ಘಾವಧಿ ಲಾಭ ಗಳಿಕೆ ತೆರಿಗೆ ವಿಧಗಳಿರುತ್ತವೆ:

  • ಅಲ್ಪಾವಧಿ ಲಾಭ ಗಳಿಕೆ (STCG): ಚಿನ್ನವನ್ನು ಖರೀದಿಸಿದ 24 ತಿಂಗಳ (2 ವರ್ಷ) ಒಳಗಾಗಿ ಮಾರಾಟ ಮಾಡಿದರೆ, ಅದರಿಂದ ಬರುವ ಲಾಭವನ್ನು ನಿಮ್ಮ ಒಟ್ಟು ಆದಾಯಕ್ಕೆ ಸೇರಿಸಿ, ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ (Income Tax Slab) ದರದಂತೆ ತೆರಿಗೆ ವಿಧಿಸಲಾಗುತ್ತದೆ.
  • ದೀರ್ಘಾವಧಿ ಲಾಭ ಗಳಿಕೆ (LTCG): 24 ತಿಂಗಳಿಗಿಂತ ಹೆಚ್ಚು ಅವಧಿ ಇಟ್ಟುಕೊಂಡು ಮಾರಾಟ ಮಾಡಿದರೆ, ಬಂದ ಲಾಭದ ಮೇಲೆ ಶೇ. 12.5 ರಷ್ಟು ನಿಗದಿತ ದರದಲ್ಲಿ ತೆರಿಗೆ ಅನ್ವಯಿಸುತ್ತದೆ (ಹಳೆಯ ನಿಯಮದಲ್ಲಿದ್ದ ಇಂಡೆಕ್ಸೇಷನ್ ಸೌಲಭ್ಯವನ್ನು ಈಗ ತೆಗೆದುಹಾಕಲಾಗಿದೆ).

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ಸ್ ಮಾದರಿಯಲ್ಲಿ ಬಾಂಡ್ ವಿತರಕರ ಜಾಲ ಬೆಳೆಸಲು ಸೆಬಿ ಸಜ್ಜು

ಡಿಜಿಟಲ್ ಚಿನ್ನ (Digital Gold)

ವಿವಿಧ ಮೊಬೈಲ್ ಆಪ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸುವ ಡಿಜಿಟಲ್ ಚಿನ್ನಕ್ಕೂ ಭೌತಿಕ ಚಿನ್ನಕ್ಕಿರುವ ನಿಯಮಗಳೇ ಅನ್ವಯಿಸುತ್ತವೆ:

  • 24 ತಿಂಗಳ ಒಳಗಿನ ಮಾರಾಟಕ್ಕೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್‌ನಂತೆ ತೆರಿಗೆ ಇರುತ್ತದೆ.
  • 24 ತಿಂಗಳ ನಂತರದ ಮಾರಾಟಕ್ಕೆ ಶೇ. 12.5 ರಷ್ಟು ದೀರ್ಘಾವಧಿ ಬಂಡವಾಳ ಲಾಭದ ತೆರಿಗೆ (LTCG) ಅನ್ವಯವಾಗುತ್ತದೆ.

ಗೋಲ್ಡ್ ಇಟಿಎಫ್ ಮತ್ತು ಗೋಲ್ಡ್ ಮ್ಯೂಚುವಲ್ ಫಂಡ್‌ಗಳು

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಗೋಲ್ಡ್ ಇಟಿಎಫ್ ಮತ್ತು ಫಂಡ್‌ಗಳ ನಿಯಮಗಳು ಇತ್ತೀಚಿನ ತಿದ್ದುಪಡಿಗಳ ನಂತರ ಬದಲಾಗಿವೆ:

  • ಇವುಗಳನ್ನು ಖರೀದಿಸಿದ 12 ತಿಂಗಳ (1 ವರ್ಷ) ಒಳಗಾಗಿ ಮಾರಾಟ ಮಾಡಿದರೆ, ಬರುವ ಲಾಭವನ್ನು ಅಲ್ಪಾವಧಿ ಲಾಭ (STCG) ಎಂದು ಪರಿಗಣಿಸಿ ನಿಮ್ಮ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
  • 12 ತಿಂಗಳ ನಂತರ ಮಾರಾಟ ಮಾಡಿದರೆ, ಅದನ್ನು ದೀರ್ಘಾವಧಿ ಲಾಭ (LTCG) ಎಂದು ಪರಿಗಣಿಸಿ ಶೇ. 12.5 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಸಾವರಿನ್ ಗೋಲ್ಡ್ ಬಾಂಡ್ (SGB)

ತೆರಿಗೆ ಉಳಿತಾಯದ ದೃಷ್ಟಿಯಿಂದ ಸರ್ಕಾರಿ ಗೋಲ್ಡ್ ಬಾಂಡ್‌ಗಳು ಅತ್ಯಂತ ಆಕರ್ಷಕವಿವೆ. ಆದರೆ, ಸದ್ಯ ಹೊಸ ಬಾಂಡ್​ಗಳನ್ನು ವಿತರಿಸುತ್ತಿಲ್ಲವಾದರೂ ಸುಮಾರು ಹತ್ತು ವರ್ಷಗಳ ಕಾಲ ಹೂಡಿಕೆಗೆ ಅವಕಾಶ ಇತ್ತು. ನೀವೀಗಾಗಲೇ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ದರೆ, ಅದು ಮೆಚ್ಯೂರಿಟಿ ಆದಾಗ ಸಿಗುವ ಲಾಭಕ್ಕೆ ಏನೇನು ತೆರಿಗೆ ಅನ್ವಯ ಆಗುತ್ತದೆ ಎನ್ನುವ ವಿವರ ಇಂತಿದೆ:

  • ಮೆಚುರಿಟಿ ಅವಧಿ: ನೀವು ಬಾಂಡ್ ಅನ್ನು ಪೂರ್ತಿ 8 ವರ್ಷಗಳ ಅವಧಿಯವರೆಗೆ ಇಟ್ಟುಕೊಂಡು, ಮೆಚುರಿಟಿ ಸಮಯದಲ್ಲಿ ಹಣ ಹಿಂಪಡೆದರೆ, ಬರುವ ಲಾಭಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ (ಯಾವುದೇ ತೆರಿಗೆ ಇರುವುದಿಲ್ಲ).
  • ಅವಧಿಗೆ ಮುನ್ನ ಮಾರಾಟ (ಷೇರು ಮಾರುಕಟ್ಟೆಯಲ್ಲಿ): ಒಂದು ವೇಳೆ ನೀವು 12 ತಿಂಗಳ ಒಳಗಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ನಿಮ್ಮ ಸ್ಲ್ಯಾಬ್ ದರದಂತೆ ಮತ್ತು 12 ತಿಂಗಳ ನಂತರ ಮಾರಾಟ ಮಾಡಿದರೆ ಶೇ. 12.5 ರಷ್ಟು LTCG ತೆರಿಗೆ ಅನ್ವಯಿಸುತ್ತದೆ.
  • ವಾರ್ಷಿಕ ಬಡ್ಡಿ: ಎಸ್‌ಜಿಬಿ ಮೇಲೆ ಸಿಗುವ ಶೇ. 2.50 ರಷ್ಟು ವಾರ್ಷಿಕ ಬಡ್ಡಿಯು ಸಂಪೂರ್ಣವಾಗಿ ನಿಮ್ಮ ಆದಾಯದ ಸ್ಲ್ಯಾಬ್ ಪ್ರಕಾರ ತೆರಿಗೆಗೆ ಒಳಪಡುತ್ತದೆ.

ಇದನ್ನೂ ಓದಿ: ಲಿಥಿಯಂ ಮತ್ತು ವಿರಳ ಭೂಖನಿಜಗಳಿಗೆ ರಷ್ಯಾ ಜೊತೆ ಶೀಘ್ರದಲ್ಲೇ ಭಾರತದ ಮಹತ್ವದ ಒಪ್ಪಂದ

ಹೂಡಿಕೆದಾರರಿಗೆ ಕಿವಿಮಾತು

ಚಿನ್ನದಲ್ಲಿ ಹೂಡಿಕೆ ಮಾಡುವ ಮುನ್ನ ಕೇವಲ ಲಾಭವನ್ನಷ್ಟೇ ಅಲ್ಲದೆ, ಭವಿಷ್ಯದಲ್ಲಿ ಅದನ್ನು ಮಾರಾಟ ಮಾಡುವಾಗ ಕೈ ಸೇರುವ ನಿವ್ವಳ ಹಣದ ಮೇಲಾಗುವ ತೆರಿಗೆಯ ಪರಿಣಾಮವನ್ನು ಲೆಕ್ಕ ಹಾಕುವುದು ಜಾಣತನ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *