
ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕಿ ಆಶಾ ಭೋಸ್ಲೆ (Asha Bhosle) ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. 92 ವರ್ಷದ ತುಂಬು ಜೀವನವನ್ನು ಅವರು ಕಳೆದಿದ್ದಾರೆ. ಸಂಗೀತ ಲೋಕದ ಸರಸ್ವತಿ ಎಂದೇ ಕರೆಯಲಾಗುವ ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸ್ಲೆ. ಐದು ಮಂದಿ ಮಕ್ಕಳಲ್ಲಿ ಮೂರನೇಯವರು ಆಶಾ. ಇಡೀ ಮನೆಯೇ ಸಂಗೀತ ಲೋಕಕ್ಕೆ ಅಗತ್ಯವಾದ ಸಂಸ್ಕಾರ, ಶಿಸ್ತಿನ ಗುಣಗಳನ್ನು ಮೈಗೂಡಿಸಿಕೊಂಡಿತ್ತು. ಆದರೆ ಆಶಾ ಮಾತ್ರ ತುಸು ಭಿನ್ನ. ಆದರೆ ಅವರ ಇದೇ ಗುಣದಿಂದ ಜೀವನದ ಕೆಲ ವರ್ಷಗಳನ್ನು ಬಹುತೇಕ ನರಕವಾಸದಂತೆ ಕಳೆದಿದ್ದರು ಆಶಾ ಭೋಸ್ಲೆ. ಆದರೆ ಕಡೆಗೆ ಅವರ ಕೈಹಿಡಿದಿದ್ದು ಸಂಗೀತ.
ಆಶಾ ಭೊಸ್ಲೆ ಅವರ ತಂದೆ ದೀನಾನಾಥ್ ಮಂಗೇಶ್ಕರ್, ಮರಾಠಿ ನಾಟಕದ ಖ್ಯಾತ ಗಾಯಕ, ನಟ, ನೃತ್ಯಗಾರರಾಗಿದ್ದರು. ಆದರೆ ಮದ್ಯದ ಅಮಲಿಗೆ ಬಿದ್ದು ಬಹುಬೇಗನೆ ಇಹಲೋಕ ತ್ಯಜಿಸಿದರು. ಮನೆಗೆ ಆಸರೆಯಾಗಿದ್ದ ತಂದೆ ನಿಧನವಾದಾಗ ಆಶಾಗೆ ಇನ್ನೂ 9 ವರ್ಷ ವಯಸ್ಸು. ಅಕ್ಕ ಲತಾ ಮಂಗೇಶ್ಕರ್ ಅವರು ಇಡೀ ಕುಟುಂಬದ ಜವಾಬ್ದಾರಿ ಹೆಗಲಿಗೆ ಏರಿಸಿಕೊಂಡರು.
ಇಡೀ ಕುಟುಂಬಕ್ಕೆ ಬಳುವಳಿಯಾಗಿ ಬಂದಿದ್ದ ಗಾಯನದಿಂದಲೇ ಮನೆ ನಡೆಯುತ್ತಿತ್ತು. ಆಶಾ ಭೋಸ್ಲೆ ಸಹ ಮರಾಠಿ ರಂಗಭೂಮಿ ಬಳಿಕ ಸಿನಿಮಾಗಳಿಗೂ ಹಾಡಲು ಪ್ರಾರಂಭಿಸಿದರು. ತಮ್ಮ 15ನೇ ವಯಸ್ಸಿಗೆ ಆಶಾ ಭೊಸ್ಲೆ ಸಿನಿಮಾಗಳಲ್ಲಿ ಹಾಡಲು ಪ್ರಾರಂಭಿಸಿದ್ದು ಮಾತ್ರವೇ ಅಲ್ಲದೆ, ಬಹು ಬೇಗನೆ ಬೇಡಿಕೆಯನ್ನೂ ಪಡೆದುಕೊಂಡರು. ಆ ಸಮಯದಲ್ಲಿ ಆಶಾ ಅವರಿಗೆ ಸಹಾಯ ಮಾಡುತ್ತಿದ್ದಿದ್ದು 31 ವರ್ಷದ ಗಣಪತ್ ರಾವ್ ಭೋಸ್ಲೆ. 16 ವರ್ಷದ ಆಶಾ, ತನ್ನ ಸಹಾಯಕ ಆಗಿದ್ದ ಗಣಪತ್ ರಾವ್ ಭೋಸ್ಲೆ ಜೊತೆ ಓಡಿ ಹೋಗಿ ಮದುವೆ ಆಗಿಬಿಟ್ಟರು, ಮನೆಯಲ್ಲಿ ಯಾರಿಗೂ ತಿಳಿಸದೆ. ಅಲ್ಲಿಂದ ಅವರ ನರಕ ದರ್ಶನ ಆರಂಭವಾಯ್ತು.
ಇದನ್ನೂ ಓದಿ:ಆಶಾ ಭೋಸ್ಲೆಯ ‘ಆಂಖೋ ಕೀ ಮಸ್ತಿ’ ಹಾಡಿದ ಗಿಲ್ಗಿಟ್ ಬಲ್ಟಿಸ್ತಾನ್ನ ತರುಣಿ
ಪತಿ ಮತ್ತು ಪತಿಯ ಮನೆಯರಿಂದ ಸತತ ಹಿಂಸೆ ಅನುಭವಿಸಿದರು ಆಶಾ ಭೋಸ್ಲೆ. ಕೊನೆಗೆ ಪತಿ ಗಣ್ಪತ್ ರಾವ್ ಆಶಾ ಭೋಸ್ಲೆಯನ್ನು ಮಕ್ಕಳ ಸಮೇತ ಮನೆಯಿಂದ ಹೊರಗಟ್ಟಿದರು. ಕಂಕುಳಲ್ಲಿ ಇಬ್ಬರು ಪುಟ್ಟ ಮಕ್ಕಳು ಮತ್ತು ಹೊಟ್ಟೆಯಲ್ಲಿ ಒಂದು ಮಗುವನ್ನು ಇರಿಸಿಕೊಂಡು ಮತ್ತೆ ತಮ್ಮ ಮನೆಗೆ ಮರಳಿದರು ಆಶಾ. ದಯಾಮಯಿ ಅಕ್ಕ, ಲತಾ ಮಂಗೇಶ್ಕರ್ ತಂಗಿಯನ್ನು ಮತ್ತೆ ಮನೆಗೆ ಸೇರಿಸಿಕೊಂಡರು. ತಮ್ಮ ಜೀವನ ಕತೆಯನ್ನು ಈ ವಿಷಯ ಬರೆದುಕೊಂಡಿರುವ ಆಶಾ, ‘ನನ್ನ ಪತಿ ಒಬ್ಬ ಸ್ಯಾಡಿಸ್ಟ್ ಆಗಿದ್ದ, ವಿನಾಕಾರಣ ನೋವು ನೀಡುತ್ತಿದ್ದ, ಒಂದು ಸಮಯದಲ್ಲಿ ನಾನು ಆತ್ಮಹತ್ಯೆಗೆ ನಿರ್ಧರಿಸಿ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದೆ, ಆಗ ನಾನು ನಾಲ್ಕು ತಿಂಗಳ ಗರ್ಭಿಣಿ ಆದರೆ ನಾನು ಸಾಯಲಿಲ್ಲ. ನನ್ನ ಮಕ್ಕಳ ಮೇಲಿನ ಪ್ರೀತಿ ನನ್ನನ್ನು ಬದುಕಿಸಿತು’ ಎಂದಿದ್ದಾರೆ.
ನರಕ ನೋಡಿ ಬಂದಿದ್ದ ಆಶಾ ಭೋಸ್ಲೆಗೆ ಸಂಗೀತವೊಂದೇ ಆಸರೆಯಾಗಿತ್ತು. ಸತತವಾಗಿ ಸಿನಿಮಾಗಳಿಗೆ ಹಾಡಿದರು. ಯಾವ ಮಟ್ಟಿಗೆಂದರೆ 1950ರ ದಶಕದಲ್ಲಿ ಒಂದು ವರ್ಷ ಅಕ್ಕ ಲತಾ ಮಂಗೇಶ್ಕರ್ ಅವರಿಗಿಂತಲೂ ಹೆಚ್ಚು ಹಾಡುಗಳನ್ನು ಹಾಡಿದರು. ಅವರೇ ಹೇಳಿಕೊಂಡಿರುವಂತೆ, ಅಕ್ಕ ಲತಾ ಹಾಗೂ ಆಶಾ ಅವರ ಧ್ವನಿ ಶೈಲಿ ಒಂದೇ ರೀತಿ ಇತ್ತಂತೆ. ಇದೇ ಕಾರಣಕ್ಕೆ ಆಶಾ ಅವರಿಗೆ ಯಾರೂ ಅವಕಾಶಗಳನ್ನು ನೀಡುತ್ತಿರಲಿಲ್ಲವಂತೆ. ಬಳಿಕ ಅವರು ಶೈಲಿ ಬದಲಿಸಿದ ಮೇಲೆ ಅವರಿಗೆ ಅವಕಾಶಗಳು ಬರಲು ಆರಂಭವಾದವಂತೆ. ‘ನನ್ನ ಅಕ್ಕ ನನಗಿಂತಲೂ ಬಹಳ ಪ್ರತಿಭಾವಂತೆ’ ಎಂದಿದ್ದರು ಆಶಾ.
ಆಶಾ ಭೋಸ್ಲೆ ಅವರಿಗೆ ಮೂವರು ಮಕ್ಕಳು. ಮೊದಲೇ ಮಗ ಹೇಮಂತ್ ಭೋಸ್ಲೆ ಪೈಲೆಟ್ ಆಗಿದ್ದರು ಬಳಿಕ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿ, 2015 ರಲ್ಲಿ ಕ್ಯಾನ್ಸರ್ನಿಂದ ನಿಧನ ಹೊಂದಿದರು. ಮಗಳು ವರ್ಷಾ 2012 ರಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದರು. ಅವರು ಪತ್ರಕರ್ತೆಯಾಗಿ, ಸಂಗೀತಗಾರ್ತಿಯಾಗಿದ್ದರು. ಆಶಾ ಅವರ ಕೊನೆಯ ಪುತ್ರ ಆನಂದ್ ಭೋಸ್ಲೆ. ಇವರು ಕೊನೆಯ ವರೆಗೂ ಅಮ್ಮನ ಜೊತೆಗಿದ್ದರು, ಅಮ್ಮನ ಪರ್ಸಲನ್ ಅಸಿಸ್ಟೆಂಟ್, ಕೇರ್ ಟೇಕರ್ ಎಲ್ಲವೂ ಆಗಿದ್ದರು.
1980 ರಲ್ಲಿ ಆಶಾ ಭೋಸ್ಲೆ ಅವರು ಖ್ಯಾತ ಸಂಗೀತ ನಿರ್ದೇಶಕ ಆರ್ಡಿ ಬರ್ಮನ್ ಅವರನ್ನು ವಿವಾಹವಾದರು. ಬರ್ಮನ್ ಅವರು ಆಶಾ ಅವರಿಗಿಂತಲೂ ಆರು ವರ್ಷ ಕಿರಿಯರಾಗಿದ್ದರು. ಇವರ ವಿವಾಹಕ್ಕೆ ಬರ್ಮನ್ ಅವರ ತಾಯಿ ತೀವ್ರ ವಿರೋಧ ಮಾಡಿದ್ದರು. ಆದರೂ ಇಬ್ಬರು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿತ್ತು. ಬರ್ಮನ್ ಅವರು 1994 ರಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಅವರ ಅಂತ್ಯ ಕೆಟ್ಟದಾಗಿತ್ತು, ಕೊನೆಯ ಸಮಯದಲ್ಲಿ ಆರ್ಥಿಕ ಸಂಕಷ್ಟಗಳಿಗೆ ಬರ್ಮನ್ ಸಿಕ್ಕಿದ್ದರು, ಅದು ಆಶಾ ಅವರ ಮೇಲೂ ಸಾಕಷ್ಟು ಪರಿಣಾಮ ಬೀರಿತ್ತು.
ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರೂ ಸಹ ಆಶಾ ಭೋಸ್ಲೆ ಹಾಡು ನಿಲ್ಲಿಸಲಿಲ್ಲ ಅವರ ಅದ್ಭುತ ಕಂಠಕ್ಕೆ ಅವಕಾಶಗಳು ಕಡಿಮೆ ಆಗಲೇ ಇಲ್ಲ. ತಮ್ಮ 90ರ ವಯಸ್ಸಿನಲ್ಲೂ ಸಹ ಆಶಾ ಭೋಸ್ಲೆ ಅವರು ಲೈವ್ ಸಿಂಗಿಂಗ್ ಶೋ ನೀಡುತ್ತಿದ್ದರು. ಗಂಟೆಗಳ ಕಾಲ ವೇದಿಕೆ ಮೇಲೆ ನಿಂತು ಹಾಡುತ್ತಿದ್ದರು. ಆಶಾ ಭೋಸ್ಲೆ ಬಹಳ ಚೆನ್ನಾಗಿ ಅಡುಗೆ ಸಹ ಮಾಡುತ್ತಿದ್ದರು. ಅದರಲ್ಲೂ ಕಪೂರ್ ಕುಟುಂಬಕ್ಕೆ ಆಶಾ ಮಾಡಿದ ಅಡುಗೆಗಳೆಂದರೆ ಬಹಳ ಪ್ರೀತಿ ಇತ್ತಂತೆ. ಮುಂದೆ ‘ಆಶಾ‘ಸ್’ ಹೆಸರಿನ ರೆಸ್ಟೊರೆಂಟ್ ಚೇನ್ ಅನ್ನು ಸಹ ಆಶಾ ಅವರು ತೆರೆದರು, ದುಬೈ, ಕುವೈಟ್ ಇನ್ನೂ ಹಲವು ಕಡೆ ಸುಮಾರು 15ಕ್ಕೂ ಹೆಚ್ಚು ಬ್ರ್ಯಾಂಚ್ಗಳು ಇವೆ.
ಆಶಾ ಅವರ ಗಾಯನಕ್ಕೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಎರಡು ರಾಷ್ಟ್ರಪ್ರಶಸ್ತಿ, ಜೀವಮಾನ ಸಾಧನೆ ಸೇರಿ ಸುಮಾರು 10 ಫಿಲಂಫೇರ್ ಪ್ರಶಸ್ತಿ, 17 ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಹಲವಾರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಹಲವಾರು ಪ್ರಶಸ್ತಿ, ಗೌರವಗಳು ಅವರಿಗೆ ಸಂದಿವೆ. ಪದ್ಮ ವಿಭೂಷಣ, ಮಹಾರಾಷ್ಟ್ರ ಭೂಷಣ್, ಗ್ರಾಮಿ ಜೀವಮಾನ ಸಾಧನೆ ಪ್ರಶಸ್ತಿ ಇನ್ನೂ ಹಲವಾರು ಗೌರವಗಳು ಅವರಿಗೆ ಲಭಿಸಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ