ದಳಪತಿ ವಿಜಯ್ (Thalapathy Vijay) ನಟಿಸಿರುವ ಕೊನೆಯ ಸಿನಿಮಾ ಎನ್ನಲಾಗುತ್ತಿರುವ ‘ಜನ ನಾಯಗನ್’ ಹಲವು ತಿಂಗಳ ವಿಳಂಬದ ಬಳಿಕ ನಾಳೆ (ಜುಲೈ 23) ಬಿಡುಗಡೆ ಆಗಲಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿದೆ. ಮೊದಲಿಗೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಬಳಿಕ ನ್ಯಾಯಾಲಯದಲ್ಲೂ ತ್ವರಿತ ನ್ಯಾಯ ಸಿಗಲಿಲ್ಲ. ಇದೆಲ್ಲ ಆಗುತ್ತಿರುವಾಗ ಇದ್ದಕ್ಕಿಂದ್ದಂತೆ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಯ್ತು. ಕೋಟ್ಯಂತರ ಜನ ಅನಧಿಕೃತವಾಗಿ ಡೌನ್ಲೋಡ್ ಮಾಡಿಕೊಂಡು ಸಿನಿಮಾ ನೋಡಿದರು. ದೂರುಗಳು ಸಹ ದಾಖಲಾದವು. ಕೆಲವರು ಚಿತ್ರತಂಡದವರೇ ಲೀಕ್ ಮಾಡಿದ್ದಾರೆ ಎಂದು ಸಹ ಆರೋಪಿಸಿದರು. ಇದೀಗ ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವಾಗ ‘ಜನ ನಾಯಗನ್’ ಲೀಕ್ ಬಗ್ಗೆ ನಿರ್ದೇಶಕ ವಿನೋದ್ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.
‘ಜನ ನಾಯಗನ್’ ಸಿನಿಮಾ ಲೀಕ್ ಆದಾಗ ನನಗೆ ಆಘಾತವಾಯ್ತು. ಅದೊಂದು ಕೆಟ್ಟ ಘಟನೆ, ಅದರಿಂದ ಆದ ನಷ್ಟವನ್ನು, ಹಾನಿಯನ್ನು ತುಂಬಲು ಸಾಧ್ಯವೇ ಇಲ್ಲ. ಆದರೆ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿ ಇರಲಿಲ್ಲ’ ಎಂದಿದ್ದಾರೆ. ಸಿನಿಮಾ ಲೀಕ್ ಅನ್ನು ವಿಜಯ್ ಅವರೇ ಮಾಡಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ವಿನೋದ್, ‘ಈ ಸಿನಿಮಾ ಲೀಕ್ ಆಗದಿದ್ದರೂ ವಿಜಯ್ ಯಶಸ್ವಿ ಆಗುತ್ತಿದ್ದರು. ಅವರಿಗೆ ಸಿನಿಮಾದ ಬೆಂಬಲ ಬೇಕಿರಲಿಲ್ಲ’ ಎಂದಿದ್ದಾರೆ.
‘ಲೀಕ್ ಆದ ಸಿನಿಮಾ ದೃಶ್ಯಗಳಲ್ಲಿ ಎಡಿಟಿಂಗ್ ಮಾರ್ಕ್ಗಳು ಸ್ಪಷ್ಟವಾಗಿತ್ತು. ಆಗಲೇ ನಮಗೆ ಗೊತ್ತಾಯ್ತು, ಈ ಸಿನಿಮಾ ಎಡಿಟಿಂಗ್ ಟೇಬಲ್ನಿಂದ ಲೀಕ್ ಆಗಿದೆ ಎಂದು. ಸಿನಿಮಾದ ಎಡಿಟಿಂಗ್ ತಂಡದಲ್ಲಿದ್ದ ಪ್ರತಿಯೊಬ್ಬರನ್ನೂ ವಿಚಾರಣೆ ಮಾಡಲಾಯ್ತು. ಗೂಗಲ್ ಸಂಸ್ಥೆಯನ್ನು ಸಹ ಸಂಪರ್ಕಿಸಿ, ಸಿನಿಮಾ ಗೂಗಲ್ ಡ್ರೈವ್ ಮೂಲಕ ಏನಾದರೂ ಟ್ರಾನ್ಸ್ಫರ್ ಆಗಿದೆಯೇ ಎಂಬ ತನಿಖೆಯನ್ನು ಸಹ ಮಾಡಲಾಯ್ತು’ ಎಂದಿದ್ದಾರೆ.
ಇದನ್ನೂ ಓದಿ:ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ತನಿಖೆಯ ಬಳಿಕ ಗೊತ್ತಾಗಿದ್ದು ಏನೆಂದರೆ ಫ್ಲೀಲ್ಯಾನ್ಸ್ ನೌಕರನೊಬ್ಬ ಎಡಿಟಿಂಗ್ ರೂಂನಲ್ಲಿದ್ದ ಸೀನ್ಗಳನ್ನು ಕಾಪಿ ಮಾಡಿಕೊಂಡು ತೆಗೆದುಕೊಂಡು ಹೋಗಿದ್ದ. ಸೀನ್ಗಳನ್ನು ತಾನೇ ಜೋಡಿಸಿ, ತನ್ನ ಕೆಲವು ಗೆಳೆಯರನ್ನು ಕರೆಸಿಕೊಂಡು ಒಟ್ಟಿಗೆ ಸಿನಿಮಾ ನೋಡಿದ್ದರು. ಆದರೆ ಸಿನಿಮಾ ಒಬ್ಬರ ಮೂಲಕ ಇನ್ನೊಬ್ಬರಿಗೆ ಹರಿದಾಡಿ ಕೊನೆಗೆ ಆನ್ಲೈನ್ಗೆ ಸಹ ಅಪ್ಲೋಡ್ ಮಾಡಲ್ಪಟ್ಟಿತ್ತು. ಅಲ್ಲಿಂದ ಸಿನಿಮಾ ದೊಡ್ಡ ಮಟ್ಟದಲ್ಲಿ ಲೀಕ್ ಆಯ್ತು’ ಎಂದಿದ್ದಾರೆ.
ಪೊಲೀಸರು ಆ ಯುವಕನನ್ನು ಪ್ರಶ್ನೆ ಮಾಡಿದಾಗಲೂ ಸಹ ಆತ ಹೆಚ್ಚಿಗೆ ಏನೂ ಹೇಳಿರಲಿಲ್ಲ. ಬಳಿಕ ನಾನು ಆತನನ್ನು ಭೇಟಿ ಆದಾಗ ಆತ ಅಳುತ್ತಾ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಆತನೇ ಈ ಕೃತ್ಯ ಮಾಡಿದನಾ ಅಥವಾ ಯಾರಾದರೂ ಆತನ ಹಿಂದೆ ಇದ್ದಾರಾ ಎಂಬುದು ನಮಗೆ ಈಗಲೂ ಗೊತ್ತಿಲ್ಲ’ ಎಂದಿದ್ದಾರೆ ವಿನೋದ್. ‘ಜನ ನಾಯಗನ್’ ಸಿನಿಮಾ ನಾಳೆ (ಜುಲೈ 23) ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ಪೂಜಾ ಹೆಗ್ಡೆ ಮತ್ತು ಮಮಿತಾ ಬಿಜು ನಾಯಕಿಯರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ