ಬೆಂಗಳೂರು, ಜು.15: ಸಿಲಿಕಾನ್ ಸಿಟಿಯಲ್ಲಿ ಅನಾಥ ವಾಹನಗಳು ಹಾಗೂ ದೀರ್ಘಕಾಲದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿರುವ ವಾಹನಗಳ ವಿರುದ್ಧ ಜಿಬಿಎ ಸಮರ ಸಾರಿದೆ. ಪ್ರಮುಖ ರಸ್ತೆಗಳಲ್ಲಿ ಇಂತಹ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಿ, ಟೋಯಿಂಗ್ ಮಾಡುವ ಮೂಲಕ ತೆರವು ಕಾರ್ಯಾಚರಣೆಯ ಕಠಿಣ ಎಚ್ಚರಿಕೆ ನೀಡುತ್ತಿದೆ. ಆದರೆ, ಜಿಬಿಎ ಕೈಗೊಂಡಿರುವ ಈ ಕ್ರಮದ ಬೆನ್ನಲ್ಲೇ ನಗರದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಮುಖ್ಯ ರಸ್ತೆಗಳಲ್ಲಿ ಜಿಬಿಎ ಕಣ್ಣು ತಪ್ಪಿಸಲು ವಾಹನ ಮಾಲೀಕರು ಈಗ ವಸತಿ ಪ್ರದೇಶಗಳ ಗಲ್ಲಿ-ಗಲ್ಲಿಗಳನ್ನೇ ತಮ್ಮ ಹೊಸ ಪಾರ್ಕಿಂಗ್ ತಾಣಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಮೊದಲ ಹಂತದಲ್ಲಿರುವ ಲವಕುಶ ಪಾರ್ಕ್ ಪಕ್ಕದ ರಸ್ತೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇಲ್ಲಿನ ರಸ್ತೆಯ ಎರಡೂ ಬದಿಗಳಲ್ಲೂ ಸಾಲು ಸಾಲು ಕಾರುಗಳು ನಿಂತಿದ್ದು, ಇಡೀ ರಸ್ತೆಯೇ ಪಾರ್ಕಿಂಗ್ ಲಾಟ್ನಂತೆ ಮಾರ್ಪಟ್ಟಿದೆ. ಆಶ್ಚರ್ಯದ ಸಂಗತಿ ಎಂದರೆ, ಈ ವಾಹನಗಳಲ್ಲಿ ಬಹುತೇಕವು ಸ್ಥಳೀಯ ನಿವಾಸಿಗಳದ್ದಲ್ಲ, ಬೇರೆ ಪ್ರದೇಶದ ವಾಹನ ಮಾಲೀಕರು ಜಿಬಿಎಗೆ ಹೆದರಿ ತಮ್ಮ ಕಾರುಗಳನ್ನು ಇಲ್ಲಿ ದಿನಗಟ್ಟಲೆ, ವಾರಗಟ್ಟಲೆ ನಿಲ್ಲಿಸಿ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಗಲ್ಲಿಗಳ ರಸ್ತೆಯಲ್ಲಿ ಅನಿಯಂತ್ರಿತವಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡುವುದೇ ಕಷ್ಟಕರವಾಗಿದೆ. ಕಿರಿದಾದ ಗಲ್ಲಿಗಳಲ್ಲಿ ಎರಡು ವಾಹನಗಳು ಎದುರು ಬಂದರೆ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತಿದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳು ಕೂಡ ಸಾಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಸ್ವಚ್ಛಗೊಳಿಸಲು ಬರುವ ಜಿಬಿಎ ಸಿಬ್ಬಂದಿಗೂ ಈ ಸಾಲು ಸಾಲು ವಾಹನಗಳ ಕಾರಣದಿಂದ ಸ್ವಚ್ಛತಾ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ. ವಾಹನಗಳ ಕೆಳಗೆ ಹಾಗೂ ಮಧ್ಯೆ ಕಸದ ರಾಶಿ ಬೀಳುತ್ತಿದ್ದು, ಇಡೀ ಪ್ರದೇಶ ದುರ್ವಾಸನೆಯಿಂದ ನರಳುತ್ತಿದೆ. ಈ ಅಕ್ರಮ ಪಾರ್ಕಿಂಗ್ ಸಮಸ್ಯೆ ಕೇವಲ ಸಂಚಾರ ಮತ್ತು ಸ್ವಚ್ಛತೆಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಸ್ಥಳೀಯರ ಭದ್ರತೆಗೂ ಕಂಟಕ ತಂದಿದೆ. ರಾತ್ರಿ ವೇಳೆ ಕತ್ತಲಾಗುತ್ತಿದ್ದಂತೆ ಕೆಲವರು ಈ ವಾಹನಗಳ ಮರೆಯಲ್ಲಿ ನಿಂತು ಮದ್ಯಪಾನ ಮಾಡುತ್ತಿದ್ದು, ಖಾಲಿ ಬಾಟಲಿಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ರಾತ್ರಿ ವೇಳೆ ಈ ರಸ್ತೆಗಳಲ್ಲಿ ಓಡಾಡಲು ಭಯಪಡುವಂತಾಗಿದೆ.
ಇದನ್ನೂ ಓದಿ: ಫುಟ್ಪಾತ್ ಒತ್ತುವರಿ, ಅನಾಥ ವಾಹನಗಳ ತೆರವು ಬೆನ್ನಲ್ಲೇ ಮತ್ತೊಂದು ಅಭಿಯಾನಕ್ಕೆ ಬೆಂಗಳೂರು ಸಿದ್ಧ! ಆಗಸ್ಟ್ 1ರಿಂದ ಕ್ಲೀನಿಂಗ್
ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯ ನಿವಾಸಿಗಳು ಹಲವು ಬಾರಿ ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯ ರಸ್ತೆಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಸಿದರೆ ಸಾಲದು, ವಸತಿ ಪ್ರದೇಶಗಳ ಗಲ್ಲಿಗಳಲ್ಲಿ ಶಾಶ್ವತವಾಗಿ ನಿಲ್ಲಿಸಿರುವ ಇಂತಹ ವಾಹನಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಕಡಕ್ಕಾಗಿ ಒತ್ತಾಯಿಸಿದ್ದಾರೆ. ಮುಖ್ಯ ರಸ್ತೆಯಿಂದ ಗಲ್ಲಿಗೆ ಶಿಫ್ಟ್ ಆದ ಈ ಹೊಸ ಪಾರ್ಕಿಂಗ್ ಟ್ರೆಂಡ್ಗೆ ಜಿಬಿಎ ಬ್ರೇಕ್ ಹಾಕುತ್ತಾ? ಅಥವಾ ಲೇಔಟ್ಗಳು ಹೀಗೆಯೇ ಅಕ್ರಮ ಪಾರ್ಕಿಂಗ್ ಅಡ್ಡೆಗಳಾಗಿ ಉಳಿಯುತ್ತವಾ? ಎಂಬುದನ್ನು ಅಧಿಕಾರಿಗಳೇ ಉತ್ತರಿಸಬೇಕಿದೆ.
ವರದಿ: ನಟರಾಜ್ ಬೆಂಗಳೂರು
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ