ರಿಲಯನ್ಸ್ ಜಿಯೋImage Credit source: Avishek Das/SOPA images/LightRocket via Getty Images
ನವದೆಹಲಿ, ಜೂನ್ 19: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್‌ನ (Jio Platforms) ಐಪಿಒ (IPO) ಆಗಲಿರುವುದನ್ನು ಖಚಿತಪಡಿಸಿದೆ. ಆರ್ಐಎಲ್ನ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಛೇರ್ಮನ್ ಮುಕೇಶ್ ಅಂಬಾನಿ ಅವರು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒಗೆ ಇವತ್ತು ಸೆಬಿ ಬಳಿ ಡಿಎಚ್ಆರ್ಪಿಯನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಐಪಿಒಗೆ ರಿಲಯನ್ಸ್ ಮಂಡಳಿಯ ಅನುಮೋದನೆ ಸಿಕ್ಕಿರುವುದಾಗಿಯೂ ಹೇಳಿದ್ದಾರೆ.
ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ವಿವರ
ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಐಪಿಒ ಮೂಲಕ ಮಾರುಕಟ್ಟೆಗೆ ಹೊಸದಾಗಿ 27 ಕೋಟಿ ಈಕ್ವಿಟಿ ಷೇರುಗಳನ್ನು ಹೊರತರಲಿದೆ. ಇದು ಸಂಪೂರ್ಣವಾಗಿ ‘ಫ್ರೆಶ್ ಇಶ್ಯೂ’ (Fresh Issue) ಆಗಿರಲಿದೆ. ಪ್ರತೀ ಷೇರಿನ ಮುಖಬೆಲೆ 10 ರೂ ಇರುತ್ತದೆ.
ಇದನ್ನೂ ಓದಿ: Reliance AGM 2026: ರಿಲಯನ್ಸ್ ಇಂಡಸ್ಟ್ರೀಸ್ನಿಂದ ಭರ್ಜರಿ ಬಂಡವಾಳ ವೆಚ್ಚ; ಒಂದು ವರ್ಷದಲ್ಲಿ 1.44 ಲಕ್ಷ ಕೋಟಿ ರೂ ವೆಚ್ಚ
ಫ್ರೆಶ್ ಇಶ್ಯೂ ಎಂದರೇನು?: ಇಲ್ಲಿ ಹಳೆಯ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ (OFS ಇಲ್ಲ). ಬದಲಾಗಿ, ಕಂಪನಿಯು ನೇರವಾಗಿ ಹೊಸ ಷೇರುಗಳನ್ನು ಸೃಷ್ಟಿಸಿ ಮಾರುಕಟ್ಟೆಗೆ ಬಿಡುತ್ತಿದೆ. ಇದರಿಂದ ಬರುವ ಹಣವನ್ನು ಕಂಪನಿಯು ತನ್ನ ಮುಂದಿನ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಾಚರಣೆಯ ಅಗತ್ಯಗಳಿಗಾಗಿ ಬಳಸಿಕೊಳ್ಳಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಈ ಐಪಿಒಗೆ ಸಂಬಂಧಿಸಿದಂತೆ ತನ್ನ ನಿಯಂತ್ರಕ ದಾಖಲೆಗಳಲ್ಲಿ ಈ ಮಾಹಿತಿಯನ್ನು ಸ್ಪಷ್ಟಪಡಿಸಿದೆ.
ಜಿಯೋ ಐಪಿಒದಿಂದ ಏನು ನಿರೀಕ್ಷಿಸಬಹುದು?
27 ಕೋಟಿ ಷೇರುಗಳನ್ನು ವಿತರಿಸುವ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್ ಭಾರಿ ಪ್ರಮಾಣದ ಬಂಡವಾಳವನ್ನು ಸಂಗ್ರಹಿಸಲು ಸಜ್ಜಾಗಿದೆ. ಒಂದು ಅಂದಾಜು ಪ್ರಕಾರ ಈ ಐಪಿಒ ಮೌಲ್ಯ 37,000 ಕೋಟಿ ರೂ ಇರುವ ಅಂದಾಜಿದೆ. ಇದು ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನ್ನುವ ದಾಖಲೆ ಬರೆಯಬಹುದು.
ಇದನ್ನೂ ಓದಿ: ಅಕ್ಸೆಂಚರ್ ಕೊಟ್ಟ ಒಂದು ರಿಪೋರ್ಟ್ಗೆ ಭಾರತದ ಷೇರುಬಜಾರು ಅಲ್ಲೋಲಕಲ್ಲೋಲ; ಶುಕ್ರವಾರ 2 ಲಕ್ಷ ಕೋಟಿ ರೂ ನಷ್ಟ
ಮಾರುಕಟ್ಟೆಯ ಮೇಲಿನ ಪರಿಣಾಮ
ಜಿಯೋದಂತಹ ಬೃಹತ್ ಸಂಸ್ಥೆಯ ಐಪಿಒ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸುವ ನಿರೀಕ್ಷೆಯಿದೆ. ಇದು ಡಿಜಿಟಲ್ ಮತ್ತು ಟೆಲಿಕಾಂ ವಲಯದ ಹೂಡಿಕೆದಾರರ ಪಾಲಿಗೆ ಒಂದು ಪ್ರಮುಖ ಅವಕಾಶವಾಗಲಿದೆ. ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳ ಬೇಡಿಕೆ ಹೆಚ್ಚುತ್ತಿರುವುದರಿಂದ, ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈ ಐಪಿಒ ಮೇಲೆ ಹೂಡಿಕೆದಾರರು ಮತ್ತು ಮಾರುಕಟ್ಟೆ ವಿಶ್ಲೇಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ