
ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರ ವೈವಾಹಿಕ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ. ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಮುದ್ರೆ ಬಿದ್ದಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ (Divorce) ಮಂಜೂರು ಮಾಡಿದೆ. ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಹನ್ಸಿಕಾ ಅವರು ಪತಿಯಿಂದ ಯಾವುದೇ ರೀತಿಯ ಜೀವನಾಂಶ (Alimony) ಕೇಳಿಲ್ಲ.
ನ್ಯಾಯಾಲಯದಲ್ಲಿ ಹನ್ಸಿಕಾ ಪರವಾಗಿ ವಕೀಲ ಅದ್ನಾನ್ ಶೇಖ್ ವಾದ ಮಂಡಿಸಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಅವರ ಜೀವನಶೈಲಿ, ಆಲೋಚನೆಗಳು ಮತ್ತು ಸ್ವಭಾವಗಳಲ್ಲಿನ ವ್ಯತ್ಯಾಸಗಳು ಪದೇ ಪದೇ ಜಗಳಕ್ಕೆ ಕಾರಣವಾಗುತ್ತಿದ್ದವು. ಸಣ್ಣ ವಿಷಯಗಳೂ ದೊಡ್ಡ ವಿವಾದಗಳಾಗಿ ಮಾರ್ಪಡುತ್ತಿದ್ದವು ಎನ್ನಲಾಗಿದೆ.
ಇಬ್ಬರ ನಡುವಿನ ಮನಸ್ತಾಪವನ್ನು ಸರಿಪಡಿಸಲು ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಹಲವು ಬಾರಿ ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ. ಅಂತಿಮವಾಗಿ, 2024ರ ಜುಲೈ 2ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಮತ್ತು ಈಗ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಪರಸ್ಪರ ಯಾವುದೇ ಜೀವನಾಂಶ ನೀರೀಕ್ಷೆ ಮಾಡಿಲ್ಲ.
ಹನ್ಸಿಕಾ ಮತ್ತು ಸೊಹೈಲ್ 2022ರ ಡಿಸೆಂಬರ್ 4ರಂದು ಜೈಪುರದ ಅರಮನೆಯಲ್ಲಿ ಅತ್ಯಂತ ಅದ್ದೂರಿಯಾಗಿ ವಿವಾಹವಾಗಿದ್ದರು. ಇವರ ವಿವಾಹ ಪೂರ್ವ ಶಾಸ್ತ್ರಗಳಾದ ಮೆಹಂದಿ, ಸಂಗೀತ್ ಮತ್ತು ಹಳದಿ ಸಮಾರಂಭಗಳು ಸುದ್ದಿಯಾಗಿದ್ದವು. ಅಷ್ಟೇ ಅಲ್ಲದೆ, ಇವರ ಪ್ರೇಮ ಕಥೆ ಮತ್ತು ಮದುವೆಯ ಸಿದ್ಧತೆಗಳ ಬಗ್ಗೆ ‘ಹನ್ಸಿಕಾಸ್ ಲವ್ ಶಾದಿ ಡ್ರಾಮಾ’ ಎಂಬ ರಿಯಾಲಿಟಿ ಶೋನಲ್ಲಿ ಪ್ರಸಾರ ಮಾಡಲಾಗಿತ್ತು.
ಇದನ್ನೂ ಓದಿ: ‘ಬಿಂದಾಸ್’ ನಟಿಯ ಬೀಚ್ ಫೋಟೋಸ್; ಕಡಲ ತೀರದಲ್ಲಿ ನಿಂತು ಪೋಸ್ ನೀಡಿದ ಹನ್ಸಿಕಾ ಮೋಟ್ವಾನಿ
ಹನ್ಸಿಕಾ ಮೊಟ್ವಾನಿ ಅವರಿಗೆ ಈಗ 34 ವರ್ಷ ವಯಸ್ಸು. ಬಾಲನಟಿಯಾಗಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯ ಸಿನಿಮಾಗಳಲ್ಲಿ ನಾಯಕಿಯಾಗಿ ಅವರು ನಟಿಸಿದರು. ಹನ್ಸಿಕಾ ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ‘ಬಿಂದಾಸ್’. 2008ರಲ್ಲಿ ತೆರೆಕಂಡಿದ್ದ ಆ ಸಿನಿಮಾದಲ್ಲಿ ಹನ್ಸಿಕಾ ಅವರು ಪುನೀತ್ ರಾಜ್ಕುಮಾರ್ಗೆ ಜೋಡಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.