ಮಳೆಗಾಲದಲ್ಲೂ ಜೀವ ಜಲಕ್ಕಾಗಿ ಹಾಹಾಕಾರImage Credit source: Tv9 Kannada
ಕಲಬುರಗಿ, ಜುಲೈ 27: ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದಲ್ಲಿ ಜನರು ಮಳೆಗಾಲದಲ್ಲಿಯೂ ಹನಿ ನೀರಿಗೆ ಪರದಾಡಬೇಕಾದ ಸ್ಥಿತಿ ತಲೆದೋರಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟ ಬೆನ್ನಲ್ಲೇ ಗ್ರಾಮದಲ್ಲಿ ಜಲ ಕ್ಷಾಮ ತಲೆದೋರಿದ್ದು, ಈ ನಡುವೆ ನೀರಿನ ಸರಬರಾಜು ಕೂಡ 20 ದಿನಗಳಿಂದ ತಿಂಗಳಿಗೆ ಒಮ್ಮೆ ಆಗುತ್ತಿರೋದು ಸಮಸ್ಯೆ ಉಲ್ಬಣಗೊಳಿಸಿದೆ. ಗ್ರಾಮದಲ್ಲಿರುವ ಏಕೈಕ ಬಾವಿಯೇ ಈಗ ನೀರಿಗೆ ಆಧಾರವಾಗಿದ್ದು, ವಯೋವೃದ್ಧರಿಗೆ ಬಾವಿಯಿಂದ ನೀರು ಸೇದೋದು ಬಹಳ ಸಮಸ್ಯೆಯಾಗುತ್ತಿದೆ. ಹೀಗಾಗಿ ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ನೀರನ್ನೇ ಕಾಣದ ನಲ್ಲಿಗಳು!
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಜಿಲ್ಲೆ ಮತ್ತು ಮಾಜಿ ಸಿಎಂ ಧರ್ಮಸಿಂಗ್‌ಅವರ ಪುತ್ರ ಅಜಯ್ ಸಿಂಗ್ ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಈ ರೀತಿ ಸಮಸ್ಯೆ ತಲೆದೋರಿದ್ದು, ಗ್ರಾಮದಲ್ಲಿ ಜಲ ಜೀವನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದಾರೆಯಾದರೂ ಅದು ತೋರ್ಪಡಿಕೆಗೆ ಮಾತ್ರವಾಗಿದೆ. ಆ ನಲ್ಲಿಗಳಲ್ಲಿ ಈವರೆಗೂ ಒಂದು ಹನಿ ನೀರು ಕೂಡ ಬಂದಿಲ್ಲ. ಪಂಚಾಯತಿ ವತಿಯಿಂದ ಊರ ಹೊರಗಿನ ಬಾವಿಯಿಂದ ಟ್ಯಾಂಕ್ಗೆ ನೀರು ಡಂಪ್ ಮಾಡಿ ಅಲ್ಲಿಂದ ತಿಂಗಳಿಗೊಮ್ಮೆ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆಯಾದರೂ, ಅದು ಕಾಟಚಾರಕ್ಕೆ ಎಂಬಂತೆ ನಡೆಯುತ್ತಿದೆ. ಅವರು ಬಿಡುವ ನೀರು ಯಾವುದಕ್ಕೂ ಸಾಲಲ್ಲ ಎಂಬುದು ಗ್ರಾಮಸ್ಥರ ಆರೋಪ.
ಇದನ್ನೂ ಓದಿ: ಕಲಬುರಗಿಯಲ್ಲಿ 300ಕ್ಕೂ ಅಧಿಕ ಮನೆಗಳ ತೆರವಿಗೆ ಕೋರ್ಟ್ ಆದೇಶ; ಆತಂಕದಲ್ಲಿ ನಿವಾಸಿಗಳು; ಆಗಿದ್ದೇನು?
ಗ್ರಾಮಸ್ಥರು ಹೇಳೋದೇನು?
ವಾಹನಗಳ ಸೌಕರ್ಯ ಹೊಂದಿರುವ ಗ್ರಾಮದ ಕೆಲ ನಿವಾಸಿಗಳು ದೂರ ದೂರಕ್ಕೆ ಹೋಗಿ ಒಳ್ಳೆಯ ನೀರನ್ನ ತೆಗೆದುಕೊಂಡು ಬಂದು ಕುಡಿಯೋದಕ್ಕೆ ಸೇರಿದಂತೆ ಗೃಹ ಬಳಕೆಗೆ ಉಪಯೋಗ ಮಾಡಿಕೊಳ್ಳತ್ತಿದ್ದಾರೆ. ಆದರೆ ಉಳಿದವರಿಗೆ ಊರಲ್ಲಿರುವ ಒಂದೇ ಒಂದು ಬಾಯಿಯ ನೀರೇ ಗತಿಯಾಗಿದೆ. ಗ್ರಾಮದಲ್ಲಿನ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯಾದರೂ ಯಾವುದೇ ಪ್ರಯೋನವಾಗಿಲ್ಲ. ಜನ ಪ್ರತಿನಿಧಿಗಳು ಕೂಡ ಇತ್ತ ಮುಖ ಮಾಡಿಲ್ಲ ಎಂಬುದು ಗ್ರಾಮಸ್ಥರ ಅಳಲು. ಆಡಳಿತ ಇಚ್ಛಾಶಕ್ತಿ ತೋರಿ ಗ್ರಾಮಕ್ಕೊಂದು ಶಾಶ್ವತ ಕುಡಿಯಿವ ನೀರಿನ ಯೋಜನೆ ಕಲ್ಪಿಸಬೇಕು ಎಂಬುದು ಇಲ್ಲಿನವರ ಪ್ರಮುಖ ಆಗ್ರಹವಾಗಿದ್ದು, ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಜಲಕ್ಷಾಮ ಬಗೆಹರಿಸುವತ್ತ ಕ್ರಮ ಕೈಗೊಳ್ಳಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.